ಕಾಶ್ಮೀರ: ಭಯೋತ್ಪಾದಕರ ದಾಳಿಯಲ್ಲಿ ಸಿಆರ್‌ಪಿಎಫ್ ಅಧಿಕಾರಿಯ ಸಾವು‌

Update: 2022-07-17 16:42 GMT

ಶ್ರೀನಗರ,ಜು.17: ರವಿವಾರ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಸಿಆರ್‌ಪಿಎಫ್ ಅಧಿಕಾರಿಯೋರ್ವರು ಮೃತಪಟ್ಟಿದ್ದಾರೆ. ಪುಲ್ವಾಮಾದ ಗಂಗೂ ಕ್ರಾಸಿಂಗ್ ನಲ್ಲಿಯ ಚೆಕ್‌ಪೋಸ್ಟ್ ಮೇಲೆ ಸಮೀಪದ ಸೇಬು ತೋಟದಿಂದ ಭಯೋತ್ಪಾದಕರು ಗುಂಡಿನ ದಾಳಿಯನ್ನು ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಸಿಆರ್‌ಪಿಎಫ್ ನ ಎಎಸ್ಐ ವಿನೋದ್ ಕುಮಾರ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದರು ಎಂದು ಪೊಲೀಸರು ತಿಳಿಸಿದರು.

ಘಟನೆಯ ಬೆನ್ನಿಗೇ ಹೆಚ್ಚುವರಿ ಪಡೆಗಳನ್ನು ಘಟನಾ ಸ್ಥಳಕ್ಕೆ ರವಾನಿಸಲಾಗಿದ್ದು, ಭಯೋತ್ಪಾದಕರಿಗಾಗಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಮಂಗಳವಾರ ಶ್ರೀನಗರದ ಲಾಲ ಬಝಾರ್ ಪ್ರದೇಶದಲ್ಲಿಯ ಪೊಲೀಸ್ ಚೆಕ್ಪೋಸ್ಟ್ ಮೇಲೆ ಭಯೋತ್ಪಾದಕರು ನಡೆಸಿದ್ದ ಗುಂಡಿನ ದಾಳಿಯಲ್ಲಿ ಜಮ್ಮು-ಕಾಶ್ಮೀರ ಪೊಲೀಸ್‌ನ ಎಎಸ್ಐ ಮುಷ್ತಾಕ್ ಅಹ್ಮದ್ ಕೊಲ್ಲಲ್ಪಟ್ಟು,ಇತರ ಇಬ್ಬರು ಪೊಲೀಸರು ಗಾಯಗೊಂಡಿದ್ದರು.

ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದ ಐಸಿಸ್‌ನ ಪ್ರಚಾರ ಘಟಕ ಅಮಾಕ್ ದಾಳಿಯ ವೀಡಿಯೊವೊಂದನ್ನೂ ಬಿಡುಗಡೆಗೊಳಿಸಿತ್ತು. ಇಂತಹ ಇನ್ನಷ್ಟು ದಾಳಿಗಳನ್ನು ನಡೆಸುವುದಾಗಿ ಬೆದರಿಕೆಯನ್ನು ಒಡ್ಡಿತ್ತು.

ಅಮರನಾಥ ಯಾತ್ರೆಯ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿಗಳು ಕಟ್ಟೆಚ್ಚರದಿಂದಿರುವ ನಡುವೆಯೇ ಈ ದಾಳಿಗಳು ನಡೆದಿವೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News