ಮೂರನೇ ಏಕದಿನ: ಪಂತ್ ಚೊಚ್ಚಲ ಶತಕ, ಪಾಂಡ್ಯ ಆಲ್‌ರೌಂಡ್ ಆಟ, ಭಾರತಕ್ಕೆ ಸರಣಿ ಜಯ

Update: 2022-07-17 17:33 GMT
Photo: ICC

  ಮ್ಯಾಂಚೆಸ್ಟರ್, ಜು.17: ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಭರ್ಜರಿ ಚೊಚ್ಚಲ ಶತಕ(ಔಟಾಗದೆ 125 ರನ್, 113 ಎಸೆತ, 16 ಬೌಂಡರಿ, 2 ಸಿಕ್ಸರ್) ಹಾಗೂ ಹಾರ್ದಿಕ್ ಪಾಂಡ್ಯ (71 ರನ್, 4-24)ಆಲ್‌ರೌಂಡ್ ಆಟದ ನೆರವಿನಿಂದ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯವನ್ನು 5 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ.
 
 ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 260 ರನ್ ಗುರಿ ಬೆನ್ನಟ್ಟಿದ ಭಾರತ 42.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿತು. ಶತಕವೀರ ಪಂತ್ ಅವರು ರೂಟ್ ಬೌಲಿಂಗ್‌ನಲ್ಲಿ ಬೌಂಡರಿ ಗಳಿಸಿ ಪಂದ್ಯವನ್ನು ಮುಗಿಸಿದರು.

ಇಂಗ್ಲೆಂಡ್ 2015ರ ಬಳಿಕ ಮೂರನೇ ಏಕದಿನ ಸರಣಿಯನ್ನು ಸೋತಿದೆ. ಭಾರತಕ್ಕೆ 54 ಎಸೆತಗಳಲ್ಲಿ 24 ರನ್ ಅಗತ್ಯವಿತ್ತು. ಡೇವಿಡ್ ವಿಲ್ಲಿ ಎಸೆದ 42ನೇ ಓವರ್‌ನಲ್ಲಿ ಸತತ 5 ಬೌಂಡರಿಗಳನ್ನು ಸಿಡಿಸಿದ ಪಂತ್ ಒಂದೇ ಓವರ್‌ನಲ್ಲಿ ಒಟ್ಟು 21ರ ನ್ ಸಿಡಿಸಿದರು.

ಭಾರತವು 16.2 ಓವರ್‌ಗಳಲ್ಲಿ 72 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ 5ನೇ ವಿಕೆಟ್‌ಗೆ 133 ರನ್ ಜೊತೆಯಾಟ ನಡೆಸಿದ ಪಂತ್ ಹಾಗೂ ಪಾಂಡ್ಯ(71 ರನ್, 55 ಎಸೆತ, 10 ಬೌಂಡರಿ)ತಂಡವನ್ನು ಗೆಲುವಿನ ಹಳಿಗೆ ತಂದರು.

ಇಂಗ್ಲೆಂಡ್ ಪರ ರೀಸ್ ಟೋಪ್ಲೆ(3-35) ಯಶಸ್ವಿ ಬೌಲರ್ ಎನಿಸಿಕೊಂಡರು.
 

ಇದಕ್ಕೂ ಮೊದಲು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಜೀವನಶ್ರೇಷ್ಠ ಬೌಲಿಂಗ್ (4-24), ಸ್ಪಿನ್ನರ್ ಯಜುವೇಂದ್ರ ಚಹಾಲ್(3-60) ಹಾಗೂ ವೇಗಿ ಮುಹಮ್ಮದ್ ಸಿರಾಜ್(2-66)ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಸರಣಿ ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲಿ ಭಾರತವು ಆತಿಥೇಯ ಇಂಗ್ಲೆಂಡ್ ತಂಡವನ್ನು ಇನ್ನೂ 4 ಓವರ್ ಬಾಕಿ ಇರುವಾಗಲೇ 259 ರನ್‌ಗೆ ಕಟ್ಟಿಹಾಕಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News