ರಾಷ್ಟ್ರಪತಿ ಚುನಾವಣೆಗೆ ಇವಿಎಂ ಬದಲು ಮತಪತ್ರ ಬಳಸಲು ಕಾರಣವೇನು?
Update: 2022-07-18 13:54 IST
ಹೊಸದಿಲ್ಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಇತರ ಚುನಾವಣೆಗಳಲ್ಲಿ ಬಳಸಲಾಗುವ ವಿದ್ಯುನ್ಮಾನ ಮತಯಂತ್ರಗಳು ಅಥವಾ ಇವಿಎಂ ಬಳಸದೆ ಮತಪತ್ರಗಳನ್ನೇ ಬಳಸಲಾಗುತ್ತದೆ. ಇದಕ್ಕೆ ಕಾರಣವಿದೆ. ಇವಿಎಂಗಳು ಅಭ್ಯರ್ಥಿಗಳು ಗಳಿಸುವ ಒಟ್ಟು ಮತಗಳನ್ನು ಲೆಕ್ಕ ಹಾಕುವ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತವೆ ಹಾಗೂ ಗರಿಷ್ಠ ಮತಗಳನ್ನು ಗಳಿಸಿದವರನ್ನು ವಿಜೇತರು ಎಂದು ಘೋಷಿಸಲಾಗುತ್ತದೆ.
ಆದರೆ ರಾಷ್ಟ್ರಪತಿ ಚುನಾವಣೆಯು ಅನುಪಾತದ ಪ್ರಾತಿನಿಧ್ಯದ ವ್ಯವಸ್ಥೆಯ ಆಧಾರದಲ್ಲಿ ನಡೆಯುತ್ತಿದೆ. ಈ ವ್ಯವಸ್ಥೆಯಡಿ ಪ್ರತಿಯೊಬ್ಬ ಮತದಾರ ಎಷ್ಟು ಅಭ್ಯರ್ಥಿಗಳಿದ್ದಾರೆಯೋ ಅಷ್ಟೂ ಸಂಖ್ಯೆಗಳ ಆದ್ಯತೆಯ ಮತಗಳನ್ನು ನೀಡಬಹುದಾಗಿದೆ.
ತಮ್ಮ ಆದ್ಯತೆಯ ಮತಗಳನ್ನು ಆಯಾ ಅಭ್ಯರ್ಥಿಯ ಹೆಸರಿನೆದುರು ಸಂಖ್ಯೆಯ ಮೂಲಕ ಮತದಾರರು ಸೂಚಿಸಬಹುದು.
ಈ ವಿಧಾನದ ಮತದಾನಕ್ಕಾಗಿ ಇವಿಎಂ ಅನ್ನು ವಿನ್ಯಾಸಗೊಳಿಸಲಾಗಿಲ್ಲದೇ ಇರುವುದರಿಂದಲೇ ರಾಷ್ಟ್ರಪತಿ ಚುನಾವಣೆಗೆ ಇವಿಎಂಗಳನ್ನು ಬಳಸಲಾಗುತ್ತಿಲ್ಲ.