×
Ad

ಮಂಡೇಲಾ ಹೋರಾಟ ಪೂರ್ಣಗೊಳ್ಳಲಿ

Update: 2022-07-18 15:17 IST

ನೆಲ್ಸನ್ ಮಂಡೇಲಾ 1918 ಜುಲೈ 18ರಂದು ಅಂದಿನ ಯೂನಿಯನ್ ಆಫ್ ಸೌತ್ ಆಫ್ರಿಕದಲ್ಲಿ ಜನಿಸಿದರು. ಅದು ಬ್ರಿಟಿಷ್ ಸಾಮ್ರಾಜ್ಯದ ಒಂದು ಭಾಗವಾಗಿತ್ತು. ಅಲ್ಲಿನ ಬಹು ಸಂಖ್ಯಾತ ನಿವಾಸಿಗಳು ಕರಿಯರಾಗಿದ್ದರೂ, ಅವರ ಮೇಲಿನ ನಿಯಂತ್ರಣ ವನ್ನು ಅಲ್ಪಸಂಖ್ಯಾತ ಬಿಳಿಯರು ಹೊಂದಿದ್ದರು. ಬಿಳಿಯರು ಅಲ್ಲಿನ ಭೂಮಿ, ಸಂಪತ್ತು ಮತ್ತು ಸರಕಾರದ ಮೇಲೆ ನಿಯಂತ್ರಣ ಹೊಂದಿ ದ್ದರು. ಅಲ್ಲಿನ ಸಾಮಾಜಿಕ ವ್ಯವಸ್ಥೆಯು ತಾರತಮ್ಯ ಪೂರಿತವಾಗಿತ್ತು. ಇದೇ ವ್ಯವಸ್ಥೆಯನ್ನು ದೇಶದ ಕಾನೂನು ಚೌಕಟ್ಟಿಗೂ ತರಲಾಯಿತು ಹಾಗೂ ಅದು ವರ್ಣಭೇದ ವ್ಯವಸ್ಥೆ ಎಂಬುದಾಗಿ ಗುರುತಿಸಲ್ಪಟ್ಟಿತು.

ಮುಂದಿನ 95 ವರ್ಷಗಳ ಕಾಲ, ದಕ್ಷಿಣ ಆಫ್ರಿಕದ ಅಮಾನುಷ ಸಾಮಾಜಿಕ ವ್ಯವಸ್ಥೆಯನ್ನು ತೊಡೆದು ಹಾಕಲು ಮಂಡೇಲಾ ಹೋರಾಡಿದರು. ಅವರು ತನ್ನ ಜೀವನವು ಪ್ರತಿರೋಧ, ಜೈಲುವಾಸ ಮತ್ತು ನಾಯಕತ್ವಕ್ಕಾಗಿ ಮೀಸಲಿಟ್ಟರು. ಅಂತಿಮ ವಾಗಿ ದಕ್ಷಿಣ ಆಫ್ರಿಕವನ್ನು ವರ್ಣಭೇದ ವ್ಯವಸ್ಥೆಯಿಂದ ಹೊರ ತರುವಲ್ಲಿ ಮತ್ತು ಬಹುಜನರ ಆಳ್ವಿಕೆಯನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದರು.

ಆರಂಭಿಕ ಜೀವನ

ಮಂಡೇಲಾರ ಬಾಲ್ಯದ ಹೆಸರು ರೊಲಿಹ್ಲಾಹ್ಲ ಡಲಿಭುಂಗ ಮಂಡೇಲಾ ಎಂದಾಗಿತ್ತು. ಅವರ ತಂದೆ ತೆಂಬು ಸಮುದಾಯದ ಮುಖ್ಯಸ್ಥರಾಗಿದ್ದರು. ತೆಂಬು ಸಮುದಾಯವು ರೆಸ ಎಂಬ ಗುಂಪಿನ ಉಪಗುಂಪು ಆಗಿತ್ತು. ತೆಂಬು ಸಮುದಾಯವು ದಕ್ಷಿಣ ಆಫ್ರಿಕದ ಎರಡನೇ ಅತಿ ದೊಡ್ಡ ಸಮುದಾಯ ವಾಗಿದೆ. ಓರ್ವ ಬ್ರಿಟಿಷ್ ಮ್ಯಾಜಿಸ್ಟ್ರೇಟ್‌ನ ಆದೇಶವನ್ನು ಧಿಕ್ಕರಿಸಿದುದಕ್ಕಾಗಿ ಮಂಡೇಲಾರ ತಂದೆಯನ್ನು ಸಮುದಾಯದ ಮುಖ್ಯಸ್ಥನ ಪದವಿಯಿಂದ ಕೆಳಗಿಳಿಸಲಾಯಿತು. ಅವರ ಅಧಿಕಾರ ಮತ್ತು ಜಮೀನನ್ನು ಕಸಿದುಕೊಳ್ಳ ಲಾಯಿತು. ಬಿಳಿಯರು ಮತ್ತು ಕರಿಯರಿಗೆ ಪ್ರತ್ಯೇಕವಾಗಿ ಕಲಿಸುವ ಪ್ರಾಥಮಿಕ ಶಾಲೆಯಲ್ಲಿ ಮೊದಲ ದಿನದಂದು ರೊಲಿಹ್ಲಾಹ್ಲ ಅವರ ಹೆಸರನ್ನೂ ಶಾಲಾ ಶಿಕ್ಷಕರು ಕಸಿದುಕೊಂಡರು. ಆಗ ಶಾಲೆಯಲ್ಲಿ ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಗೆ ಇಂಗ್ಲಿಷ್ ಹೆಸರನ್ನು ಕೊಡುವ ಪದ್ಧತಿಯಿತ್ತು. ‘‘ಬಿಳಿಯರಿಗೆ ಆಫ್ರಿಕನ್ ಹೆಸರನ್ನು ಉಚ್ಚರಿಸಲು ಸಾಧ್ಯವಾಗುವುದಿಲ್ಲವೆಂದೋ ಅಥವಾ ಇಷ್ಟ ಇಲ್ಲದೆಯೋ ಅಥವಾ ಆಫ್ರಿಕನ್ ಹೆಸರನ್ನು ಹೊಂದುವುದು ಅನಾಗರಿಕತೆಯೆಂದೋ, ಮಕ್ಕಳಿಗೆ ಇಂಗ್ಲಿಷ್ ಹೆಸರುಗಳನ್ನು ಬ್ರಿಟಿಷರು ಕೊಡುತ್ತಿದ್ದರು’’ ಎಂಬುದಾಗಿ ಮಂಡೇಲಾ ತನ್ನ ಆತ್ಮಚರಿತ್ರೆ ‘ಲಾಂಗ್ ವಾಕ್ ಟು ಫ್ರೀಡಂ’ನಲ್ಲಿ ಬರೆದಿದ್ದಾರೆ.

ತಾರತಮ್ಯದಿಂದ ಕೂಡಿದ ದಕ್ಷಿಣ ಆಫ್ರಿಕದ ಸಾಮಾಜಿಕ ವ್ಯವಸ್ಥೆಯಲ್ಲಿ ಮಂಡೇಲಾರನ್ನು ಅವರ ಚರ್ಮದ ಬಣ್ಣದ ಕಾರಣಕ್ಕಾಗಿ ಕೆಳ ದರ್ಜೆಗೆ ಸೇರಿಸಲಾಗಿತ್ತು. ಆದರೆ, ಅವರ ರಾಜ ಮನೆತನದ ರಕ್ತ ಮತ್ತು ಸಂಪರ್ಕ ಗಳಿಂದಾಗಿ ಕರಿಯರಿಗಾಗಿದ್ದ ದೇಶದ ಏಕೈಕ ವಿಶ್ವವಿದ್ಯಾನಿಲಯ ಫೋರ್ಟ್‌ಹೇರ್ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆದರು. ವಿಶ್ವವಿದ್ಯಾನಿಲಯದಲ್ಲಿ ಅವರು ಹೋರಾಟಗಾರನಾದರು. ವಿದ್ಯಾರ್ಥಿ ಸರಕಾರಕ್ಕೆ ಅಧಿಕಾರ ಇಲ್ಲದಿರುವುದನ್ನು ಪ್ರತಿಭಟಿಸಿದುದಕ್ಕಾಗಿ ಅವರನ್ನು ಅಲ್ಲಿಂದ ಉಚ್ಚಾಟಿಸ ಲಾಯಿತು. ಅವರು ಪೂರ್ವ ಕೇಪ್‌ನಲ್ಲಿರುವ ತನ್ನ ಸಣ್ಣ ಗ್ರಾಮದಲ್ಲಿರುವ ಮನೆಗೆ ವಾಪಸಾದರು. ಶಾಲೆಯಿಂದ ಹೊರಬಂದಿರುವುದಕ್ಕೆ ಶಿಕ್ಷೆಯಾಗಿ ಅವರಿಗೆ ಮದುವೆ ಮಾಡಲು ಮನೆಯವರು ನಿರ್ಧರಿಸಿದರು. ಆಗ ಅವರು 1941ರಲ್ಲಿ ದಕ್ಷಿಣ ಆಫ್ರಿಕದ ಅತಿ ದೊಡ್ಡ ಕರಿಯರ ನಗರ ಸೊವೆಟೊಗೆ ಪಲಾಯನಗೈದರು.

ವರ್ಣಭೇದ ಮತ್ತು ಹೋರಾಟ

ಸೊವೆಟೊದಲ್ಲಿ ಮಂಡೇಲಾ ವಿಟ್ಸ್ ವಿಶ್ವವಿದ್ಯಾನಿಲಯದಲ್ಲಿ ಅರೆಕಾಲಿಕ ಕಾನೂನು ವಿದ್ಯಾರ್ಥಿಯಾಗಿ ವಕೀಲಿ ವೃತ್ತಿಯನ್ನು ಆರಂಭಿಸಿದರು. ಅವರು ದೇಶದ ಮೊದಲ ಕರಿಯ ಕಾನೂನು ಸಂಸ್ಥೆಯನ್ನು ಸ್ಥಾಪಿಸಿದರು.

ಬಳಿಕ, ಅವರು ಆಫ್ರಿಕನ್ ನ್ಯಾಶನಲ್ ಕಾಂಗ್ರೆಸ್ ಸೇರಿದರು. ದಕ್ಷಿಣ ಆಫ್ರಿಕದ ಕರಿಯ ಜನರ ನಾಗರಿಕ ಹಕ್ಕುಗಳಿಗಾಗಿ ಈ ಸಂಘಟನೆಯು ಹೋರಾಡಿತು. ಆಗಲೇ ದಕ್ಷಿಣ ಆಫ್ರಿಕದಲ್ಲಿ ಜನಾಂಗೀಯ ತಾರತಮ್ಯವು ಹಾಸುಹೊಕ್ಕಾಗಿತ್ತು. 1948ರಲ್ಲಿ ಅದನ್ನು ಅಂದಿನ ಸರಕಾರವು ಸರಕಾರಿ ಕಾನೂನಾಗಿ ಮಾಡಿತು. ಈ ಕಾನೂನಿನ ಪ್ರಕಾರ, ದಕ್ಷಿಣ ಆಫ್ರಿಕದ ಕರಿಯ ವರ್ಣೀಯರು ತಮ್ಮಿಡನೆ ಯಾವಾಗಲೂ ಗುರುತು ಚೀಟಿಯನ್ನು ಒಯ್ಯಬೇಕಾಗಿತ್ತು. ಬಿಳಿಯರಿಗೆ ಮೀಸಲಾಗಿರುವ ಸ್ಥಳಗಳಿಗೆ ಪ್ರವೇಶಿಸಲು ಅವರಿಗೆ ಈ ಗುರುತು ಚೀಟಿಯ ಅಗತ್ಯವಿತ್ತು. ಕರಿಯವರ್ಣೀಯರೇ ಇರುವ ವಲಯಗಳಲ್ಲಿ ವಾಸಿಸುವಂತೆ ಅವರಿಗೆ ಆದೇಶಿಸ ಲಾಯಿತು ಮತ್ತು ಅವರು ಅಂತರ್‌ಜನಾಂಗೀಯ ಸಂಬಂಧಗಳನ್ನು ಹೊಂದುವುದನ್ನು ನಿಷೇಧಿಸಲಾಯಿತು. ಮತದಾರರ ಪಟ್ಟಿಯಿಂದ ಕರಿಯರನ್ನು ಹೊರಗಿಡಲಾಯಿತು ಹಾಗೂ ಹಂತ ಹಂತವಾಗಿ ಅವರ ಮತಾಧಿಕಾರವನ್ನೇ ಕಿತ್ತುಕೊಳ್ಳಲಾಯಿತು.

ಆರಂಭದಲ್ಲಿ, ಮಂಡೇಲಾ ಮತ್ತು ಎಎನ್‌ಸಿಯಲ್ಲಿರುವ ಅವರ ಸಹ ಕಾರ್ಯಕರ್ತರು ವರ್ಣಭೇದ ವ್ಯವಸ್ಥೆಯ ವಿರುದ್ಧ ಮುಷ್ಕರ ಮತ್ತು ಪ್ರದರ್ಶನಗಳಂಥ ಅಹಿಂಸಾತ್ಮಕ ವಿಧಾನಗಳ ಮೂಲಕ ಹೋರಾಟ ನಡೆಸಿದರು.1952ರಲ್ಲಿ, ಡಿಫಯನ್ಸ್ ಕ್ಯಾಂಪೇನ್‌ನ ನಾಯಕರಾಗಿ ಹೋರಾಟದ ತೀವ್ರತೆ ಯನ್ನು ಹೆಚ್ಚಿಸಲು ಮಂಡೇಲಾ ಬಯಸಿದರು. ಡಿಫಯನ್ಸ್ ಕ್ಯಾಂಪೇನ್ ಕಾನೂನುಗಳನ್ನು ಉಲ್ಲಂಘಿಸಲು ಕರಿಯ ಹೋರಾಟಗಾರರಿಗೆ ಬೆಂಬಲ ನೀಡಿತು. ಕರ್ಫ್ಯೂಗಳನ್ನು ಉಲ್ಲಂಘಿಸಿರು ವುದಕ್ಕಾಗಿ, ಗುರುತು ಚೀಟಿಗಳನ್ನು ಒಯ್ಯಲು ನಿರಾಕರಿಸಿರುವುದಕ್ಕಾಗಿ ಮತ್ತು ಇತರ ಅಪರಾಧಗಳಿಗಾಗಿ ಮಂಡೇಲಾ ಸೇರಿದಂತೆ 8,000ಕ್ಕೂ ಅಧಿಕ ಜನರನ್ನು ಬಂಧಿಸಲಾಯಿತು.

ಡಿಫಯನ್ಸ್ ಕ್ಯಾಂಪೇನ್‌ನ ಹೋರಾಟವು ಎಎನ್‌ಸಿಯ ಕಾರ್ಯ ಸೂಚಿ ಮತ್ತು ಮಂಡೇಲಾರನ್ನು ಸಾರ್ವಜನಿಕರಿಗೆ ಪರಿಚಯಿಸಿತು. ಕರಿಯರ ಹಕ್ಕುಗಳಿಗಾಗಿ ಹೋರಾಡುವುದನ್ನು ಅವರು ಮುಂದುವರಿಸಿ ದರು. ಶಿಕ್ಷೆಯನ್ನು ಪೂರೈಸಿದ ಬಳಿಕ, ಮಂಡೇಲಾ ಸರಕಾರದ ವಿರುದ್ಧದ ಪ್ರತಿಭಟನೆಗಳ ನೇತೃತ್ವ ವಹಿಸುವುದನ್ನು ಮುಂದುವರಿಸಿದರು. 1956ರಲ್ಲಿ, ಇತರ 155 ಮಂದಿಯೊಂದಿಗೆ ಮಂಡೇಲಾರನ್ನು ದೇಶ ದ್ರೋಹದ ವಿಚಾರಣೆಗೆ ಒಳಪಡಿಸಲಾಯಿತು. 1961ರಲ್ಲಿ ಅವರು ದೋಷಮುಕ್ತಗೊಂಡರು. ಆ ಬಳಿಕ 17 ತಿಂಗಳುಗಳ ಕಾಲ ಅವರು ಭೂಗತರಾದರು.

ದಿನಗಳೆದಂತೆ, ವರ್ಣಭೇದ ವ್ಯವಸ್ಥೆಯನ್ನು ಕೊನೆಗೊಳಿಸಲು ಸಶಸ್ತ್ರ ಹೋರಾಟವೊಂದೇ ವಿಧಾನ ಎಂಬುದಾಗಿ ಮಂಡೇಲಾ ಭಾವಿಸಿದರು. 1962ರಲ್ಲಿ, ಸೇನಾ ತರಬೇತಿ ಪಡೆಯುವುದಕ್ಕಾಗಿ ಮತ್ತು ವರ್ಣಭೇದ ವ್ಯವಸ್ಥೆಯ ವಿರುದ್ಧದ ಹೋರಾಟಕ್ಕೆ ಬೆಂಬಲ ಗಳಿಸುವುದಕ್ಕಾಗಿ ಸ್ವಲ್ಪ ಸಮಯ ಅವರು ದೇಶವನ್ನು ತೊರೆದರು. ಆದರೆ, ಅವರು ದೇಶಕ್ಕೆ ವಾಪಸಾದ ತಕ್ಷಣ, ಅನುಮತಿಯಿಲ್ಲದೆ ದೇಶದಿಂದ ಹೊರಗೆ ಹೋಗಿರುವು ದಕ್ಕಾಗಿ ಅವರನ್ನು ಬಂಧಿಸಿ ಸೆರೆಮನೆಗೆ ತಳ್ಳಲಾಯಿತು. ಮಂಡೇಲಾ ಜೈಲಿನಲ್ಲಿದ್ದಾಗ, ಗೆರಿಲ್ಲಾ ಯುದ್ಧಕ್ಕೆ ಸಂಬಂಧಿಸಿದ ಅವರ ಯೋಜನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರು ಪತ್ತೆಹಚ್ಚಿದರು. ಆಗ ಪೊಲೀಸರು ಮಂಡೇಲಾ ಮತ್ತು ಅವರ ಸಂಗಡಿಗರ ವಿರುದ್ಧ ಬುಡ ಮೇಲು ಕೃತ್ಯಗಳ ಆರೋಪವನ್ನು ಹೊರಿಸಿದರು.

ಮುಂದೆ ನಡೆಯಲಿರುವ ರಿವೋನಿಯ ವಿಚಾರಣೆಯಲ್ಲಿ ತಮಗೆ ಗಲ್ಲು ಶಿಕ್ಷೆಯಾಗುವುದು ಖಚಿತ ಎನ್ನುವುದು ಮಂಡೇಲಾ ಮತ್ತು ಪ್ರಕರಣದ ಇತರ ಆರೋಪಿಗಳಿಗೆ ತಿಳಿದಿತ್ತು. ಹಾಗಾಗಿ, ಆ ವಿಚಾರಣೆ ಯನ್ನು ಅವರು ತಮ್ಮ ಉದ್ದೇಶವನ್ನು ಹೊರಜಗತ್ತಿಗೆ ತಿಳಿಸುವುದಕ್ಕಾಗಿ ಬಳಸಿಕೊಂಡರು. ವರ್ಣಭೇದ ನೀತಿ ವಿರುದ್ಧದ ತಮ್ಮ ಹೋರಾಟಕ್ಕೆ ಪ್ರಚಾರ ಲಭಿಸುವಂತೆ ನೋಡಿಕೊಂಡರು ಹಾಗೂ ದಕ್ಷಿಣ ಆಫ್ರಿಕದ ಕರಿಯರನ್ನು ದಮನಿಸುವ ಕಾನೂನು ವ್ಯವಸ್ಥೆಯನ್ನು ಪ್ರಶ್ನಿಸಿದರು. ತನ್ನ ಪರವಾಗಿ ವಾದಿಸಲು ಮಂಡೇಲಾರ ಸರದಿ ಬಂದಾಗ, ಅವರು ನಾಲ್ಕು ಗಂಟೆಗಳ ಸುದೀರ್ಘ ಭಾಷಣ ಮಾಡಿದರು.

‘‘ದಕ್ಷಿಣ ಆಫ್ರಿಕದ ‘ಬಿಳಿಯರು ಶ್ರೇಷ್ಠರು’ ನೀತಿಯಿಂದಾಗಿ ದೇಶದ ಕರಿಯ ವರ್ಣೀಯರು ಘನತೆಯಿಲ್ಲದ ಬದುಕನ್ನು ಬದುಕುತ್ತಿದ್ದಾರೆ. ನಮ್ಮ ಹೋರಾಟವು ನಿಜವಾದ ರಾಷ್ಟ್ರೀಯ ಹೋರಾಟವಾಗಿದೆ. ಅದು ನಮ್ಮದೇ ನರಳಾಟ ಮತ್ತು ನಮ್ಮದೇ ಅನುಭವದಿಂದ ಹುಟ್ಟಿಕೊಂಡ ಆಫ್ರಿಕನ್ ಜನರ ಹೋರಾಟವಾಗಿದೆ. ಇದು ಬದುಕುವ ಹಕ್ಕಿಗಾಗಿ ನಾವು ಮಾಡುತ್ತಿರುವ ಹೋರಾಟವಾಗಿದೆ’’ ಎಂದು ಅವರು ತನ್ನ ಭಾಷಣದಲ್ಲಿ ಹೇಳಿದರು. ಸ್ವತಂತ್ರ ಸಮಾಜದ ಆದರ್ಶಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಅವರು ಈ ಸಂದರ್ಭದಲ್ಲಿ ಘೋಷಿಸಿದರು. ‘‘ಅಗತ್ಯ ಬಿದ್ದರೆ, ಈ ಆದರ್ಶಕ್ಕಾಗಿ ನಾನು ಸಾಯಲೂ ಸಿದ್ಧನಿದ್ದೇನೆ’’ ಎಂದರು.

ಜೀವನ ಪರ್ಯಂತ ಜೈಲು

1964ರಲ್ಲಿ, ನ್ಯಾಯಾಲಯವು ಮಂಡೇಲಾಗೆ ಮರಣ ದಂಡನೆ ವಿಧಿಸ ಲಿಲ್ಲ. ಬದಲಿಗೆ, ಜೀವಾವಧಿ ಶಿಕ್ಷೆ ವಿಧಿಸಿತು. ಪ್ರತಿ ವರ್ಷ ಕೇವಲ ಒಂದು ಬಾರಿ 30 ನಿಮಿಷಗಳ ಕಾಲ ಒಬ್ಬನೇ ವ್ಯಕ್ತಿಯನ್ನು ಭೇಟಿಯಾಗಲು ನ್ಯಾಯಾಲಯ ಅವರಿಗೆ ಅವಕಾಶ ನೀಡಿತು. ಅವರು ಒಂದು ವರ್ಷದಲ್ಲಿ ಎರಡು ಪತ್ರಗಳನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಅವರ ಜೈಲು ಕೋಣೆಯಲ್ಲಿ ಯಾವುದೇ ಸೌಲಭ್ಯಗಳಿರಲಿಲ್ಲ. ಅವರು ಕಲ್ಲಿನ ಕೋರೆಯೊಂದರಲ್ಲಿ ಕೆಲಸ ಮಾಡಿದರು. ಸಮಯ ಕಳೆದಂತೆ, ಅವರು ತನ್ನ ಜೈಲು ಅಧಿಕಾರಿಗಳು ಮತ್ತು ಸಹ ಕೈದಿಗಳಿಂದ ಗೌರವ ಪಡೆದರು. ಎಎನ್‌ಸಿ ಹಿಂಸೆಯನ್ನು ತೊರೆದರೆ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸುವ ಕೊಡುಗೆಯನ್ನು ನೀಡಲಾಯಿತು. ಆದರೆ, ಅವರು ಅದನ್ನು ತಿರಸ್ಕರಿಸಿದರು.

ತನ್ನ 27 ವರ್ಷಗಳ ಕಾರಾಗೃಹ ವಾಸದ ಅವಧಿಯಲ್ಲಿ ಮಂಡೇಲಾ ಜಗತ್ತಿನ ಅತ್ಯಂತ ಪ್ರಖ್ಯಾತ ರಾಜಕೀಯ ಕೈದಿಯಾದರು. ಅವರ ಭಾಷಣ ಗಳನ್ನು ದಕ್ಷಿಣ ಆಫ್ರಿಕದಲ್ಲಿ ನಿಷೇಧಿಸಲಾಯಿತು. ಆದರೆ, ಅದಾಗಲೇ ಅವರು ದೇಶದ ಅತ್ಯಂತ ಪ್ರಸಿದ್ಧ ವ್ಯಕ್ತಿಯಾಗಿದ್ದರು. ಅವರ ಬೆಂಬಲಿಗರು ಅವರ ಬಿಡುಗಡೆಗಾಗಿ ಚಳವಳಿ ನಡೆಸಿದರು. ಅವರ ಜೈಲುವಾಸವು ಜಗತ್ತಿನಾದ್ಯಂತ ವರ್ಣಭೇದ ನೀತಿ ವಿರೋಧಿ ಹೋರಾಟಗಾರರಲ್ಲಿ ಚೈತನ್ಯ ತುಂಬಿತು.

1990ರಲ್ಲಿ, ಅಂತರ್‌ರಾಷ್ಟ್ರೀಯ ಒತ್ತಡ ಮತ್ತು ಅಂತರ್ಯುದ್ಧದ ಬೆದರಿಕೆಗೆ ಮಣಿದು, ದಕ್ಷಿಣ ಆಫ್ರಿಕದ ನೂತನ ಅಧ್ಯಕ್ಷ ಎಫ್.ಡಬ್ಲು. ಡಿ ಕ್ಲರ್ಕ್ ವರ್ಣಭೇದ ನೀತಿಯನ್ನು ಕೊನೆಗೊಳಿಸುವ ಭರವಸೆಯನ್ನು ನೀಡಿದರು ಮತ್ತು ಮಂಡೇಲಾರನ್ನು ಜೈಲಿನಿಂದ ಬಿಡುಗಡೆಗೊಳಿಸಿದರು.

1991ರಲ್ಲಿ ವರ್ಣಭೇದ ನೀತಿಯನ್ನು ರದ್ದುಗೊಳಿಸಲಾಯಿತು. 1994 ರಲ್ಲಿ ನಡೆದ ಚುನಾವಣೆಯಲ್ಲಿ ಎಎನ್‌ಸಿಯು ಶೇ.62 ಮತಗಳನ್ನು ಪಡೆದುಅಧಿಕಾರಕ್ಕೆ ಬಂತು. ಮಂಡೇಲಾ ದಕ್ಷಿಣ ಆಫ್ರಿಕದ ಅಧ್ಯಕ್ಷರಾದರು.

ಅವರು 1999ರವರೆಗೆ 5 ವರ್ಷ ಸೇವೆ ಸಲ್ಲಿಸಿದರು. 2013ರಲ್ಲಿ 95ನೇ ವರ್ಷದಲ್ಲಿ ಅವರು ನಿಧನರಾದರು. ಪ್ರತಿ ವರ್ಷ ಜುಲೈ 18ನ್ನು ಅಂತರ್‌ರಾಷ್ಟ್ರೀಯ ನೆಲ್ಸನ್ ಮಂಡೇಲಾ ದಿನವನ್ನಾಗಿ ಆಚರಿಸಲಾಗುತ್ತದೆ.

ಕೃಪೆ: nationalgeographic.com

Writer - ಬೈರಿನ್ ಬ್ಲೇಕ್‌ಮೋರ್

contributor

Editor - ಬೈರಿನ್ ಬ್ಲೇಕ್‌ಮೋರ್

contributor

Similar News