ಜಾರ್ಖಂಡ್‍ನ ಪತ್ರಕರ್ತನನ್ನು ಬಂಧಿಸಿ ಯುಎಪಿಎ ಹೇರಿದ ಪೊಲೀಸರು

Update: 2022-07-18 10:47 GMT
Photo: Twitter/mhassanism

ರಾಂಚಿ: ಜಾರ್ಖಂಡ್ ಮೂಲದ ಸ್ವತಂತ್ರ ಪತ್ರಕರ್ತ ರೂಪೇಶ್ ಕುಮಾರ್ ಸಿಂಗ್ ಎಂಬವರನ್ನು ಜುಲೈ 17, ರವಿವಾರದಂದು ಪೊಲೀಸರು ಬಂಧಿಸಿ ಅವರ ವಿರುದ್ಧ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಮತ್ತು ಐಪಿಸಿಯ ವಿವಿಧ ಸೆಕ್ಷನ್‍ಗಳನ್ವಯ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರು ತಮ್ಮ ಮನೆಗೆ ಬೆಳಿಗ್ಗೆ 5.25ಕ್ಕೆ ಆಗಮಿಸಿದ್ದರು ಎಂದು ಸಿಂಗ್ ಅವರ ಪತ್ನಿ ಇಪ್ಸಾ ಶತಾಕ್ಷಿ ಹೇಳಿದ್ದಾರೆ. ಪೊಲೀಸರು ಸರ್ಚ್ ವಾರಂಟ್ ಅನ್ನೂ ತೋರಿಸಿದ್ದರು, ಹತ್ತು ಮಂದಿಯ ತಂಡದ ನೇತೃತ್ವನ್ನು ಡಿವೈಎಸ್ಪಿ ಚಂದನ್ ಕುಮಾರ್ ವತ್ಸ್ ವಹಿಸಿದ್ದರೆಂದು ತಿಳಿದು ಬಂದಿದೆ.

ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳು ಮನೆಯ ಅಡುಗೆಕೋಣೆಯನ್ನು ಜಾಲಾಡಿ, ಅಕ್ಕಿ, ಹಿಟ್ಟಿನಲ್ಲಿ ಏನಾದರೂ ಶಂಕಾಸ್ಪದ ವಸ್ತುಗಳಿವೆಯೇ ಎಂದು ಶೋಧಿಸಿದ್ದಾರೆ ಎಂದು ಶತಾಕ್ಷಿ ಹೇಳಿದ್ಧಾರೆ.

ಒಂಬತ್ತು ಗಂಟೆ ಶೋಧ ನಡೆಸಿ ಕೊನೆಗೆ ತೆರಳಲು ಐದು ನಿಮಿಷ ಇರುವಾಗ ಬಂಧನ ವಾರಂಟ್ ತೋರಿಸಿ ಅವರನ್ನು ಬಂಧಿಸಿದ್ದಾರೆಂದು ಶತಾಕ್ಷಿ ಹೇಳಿದ್ದಾರೆ.

ಸಿಂಗ್ ವಿರುದ್ಧ ದಾಖಲಿಸಲಾಗಿರುವ ಪ್ರಕರಣ ನವೆಂಬರ್ 2021ರಲ್ಲಿ ಸಿಪಿಐ(ಮಾವೋವಾದಿ) ನಾಯಕ ಪ್ರಶಾಂತ್ ಬೋಸ್ (ಆಲಿಯಾಸ್ ಬಾಪು), ಕೃಷ್ಣ ಬಹಂಗ್ಡ (ಆಲಿಯಾಸ್ ಹೇವೆನ) ಮತ್ತು ಬಿರೇಂದ್ರ ಹನ್ಸದಾ (ಆಲಿಯಾಸ್ ಜಿತೇಂದ್ರ) ಅವರನ್ನು ಬಂಧಿಸಲಾಗಿದ್ದಾಗ ದಾಖಲಿಸಲಾಗಿದ್ದ ಪ್ರಕರಣ ಒಂದೇ ಆಗಿದೆ.

 ಬೋಸ್ ಒಬ್ಬ ಪ್ರಮುಖ ಮಾವೋವಾದಿ ನಾಯಕನಾಗಿದ್ದು ಜಾರ್ಖಂಡ್‍ನ ಸರಂದ ಅರಣ್ಯದಲ್ಲಿ ಕಾರ್ಯಾಚರಿಸುವ ಈತ 15 ವರ್ಷಗಳ ಹಿಂದೆ ನಡೆದ ಸಂಸದ ಸನಿಲ್ ಮಹತೋ ಮತ್ತು ರಮೇಶ್ ಸಿಂಗ್ ಮುಂಡಾ ಅವರ ಹತ್ಯೆಯ ಆರೋಪಿಯಾಗಿದ್ದಾನೆ.

ರವಿವಾರ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಸಿಂಗ್(37) ಅವರು 2012 ರಿಂದ ಸ್ವತಂತ್ರ ಪತ್ರಕರ್ತರಾಗಿ ದುಡಿಯುತ್ತಿದ್ದು ಆದಿವಾಸಿಗಳ ಸಮಸ್ಯೆ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಬರೆಯುತ್ತಿದ್ದಾರೆ. ಕಾಲೇಜು ದಿನಗಳಲ್ಲಿ ಅವರು ಸಿಪಿಐ (ಲೆನಿನಿಸ್ಟ್) ನಲ್ಲಿ ಸಕ್ರಿಯರಾಗಿದ್ದರು. ಜೂನ್ 2019ರಲ್ಲಿ ಅವರನ್ನು ಮಾವೋವಾದಿಗಳ ಜೊತೆಗೆ ನಂಟು ಹೊಂದಿದ್ದಾರೆಂಬ ಆರೋಪದ ಮೇಲೆ  ಬಂಧಿಸಲಾಗಿತ್ತು. ಆಗ ಅವರ ಕಾರಿನಿಂದ ಜಿಲೆಟಿನ್ ಕಡ್ಡಿಗಳು ಮತ್ತಿತರ ಸ್ಫೋಟಕ ವಸ್ತುಗಳು ದೊರಕಿದ್ದವು ಎಂದು ಪೊಲೀಸರು ಹೇಳಿದ್ದರು. ಆಗ ಕೂಡ ಯುಎಪಿಎ ಹಾಗೂ ಐಪಿಸಿ ವಿವಿಧ ಸೆಕ್ಷನ್‍ಗಳ ಅನ್ವಯ ಪ್ರಕರಣ ದಾಖಲಿಸಲಾಗಿತ್ತು.

ಪೊಲೀಸರ ಆರೋಪ ಸುಳ್ಳು, ಅವರೇ ತಮ್ಮ ಕಾರಿನಲ್ಲಿ ಸ್ಫೋಟಕಗಳನ್ನು ಇರಿಸಿದ್ದರು ಎಂದು ಆಗ ಸಿಂಗ್ ಮತ್ತವರ ಪತ್ನಿ ದೂರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News