ಕೇರಳದಲ್ಲಿ ಎರಡನೇ ಮಂಕಿಪಾಕ್ಸ್‌ ಪ್ರಕರಣ ಪತ್ತೆ: ಆರೋಗ್ಯ ಸಚಿವೆ ಮಾಹಿತಿ

Update: 2022-07-18 14:51 GMT

ತಿರುವನಂತಪುರಂ: ಕೇರಳದಲ್ಲಿ ಇನ್ನೊಂದು ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದೆ ಎಂದು ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಕಳೆದ ಗುರುವಾರವಷ್ಟೇ ಕೇರಳ ಹಾಗೂ ದೇಶದ ಮೊದಲ ಮಂಕಿಪಾಕ್ಸ್ ಪ್ರಕರಣ ಸಂಯುಕ್ತ ಅರಬ್ ಸಂಸ್ಥಾನದಿಂದ ವಾಪಸಾದ ವ್ಯಕ್ತಿಯಲ್ಲಿ ದೃಢಪಟ್ಟಿತ್ತು.

ಸೋಂಕಿತ ವ್ಯಕ್ತಿಯ ಎಲ್ಲಾ 11 ಸಂಪರ್ಕಗಳನ್ನು ಗುರುತಿಸಲಾಗಿದೆ, ಈತನ 11 ಸಹಪ್ರಯಾಣಿಕರು, ಕುಟುಂಬ ಸದಸ್ಯರು, ಆಟೋ, ಟ್ಯಾಕ್ಸಿ ಚಾಲಕ ಹಾಗೂ ಆತ ಮೊದಲು ಚಿಕಿತ್ಸೆ ಪಡೆದಿದ್ದ ಖಾಸಗಿ ಆಸ್ಪತ್ರೆಯ ಚರ್ಮರೋಗ ತಜ್ಞರನ್ನೂ ನಿಗಾದಲ್ಲಿರಿಸಲಾಗಿದೆ.

ಮಂಕಿಪಾಕ್ಸ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಕೇರಳ ಸರಕಾರ ಸರ್ವಕ್ರಮಗಳನ್ನೂ ಕೈಗೊಳ್ಳುತ್ತಿದ್ದು ಐದು ಜಿಲ್ಲೆಗಳಲ್ಲಿ- ತಿರುವನಂತಪುರಂ, ಕೊಲ್ಲಂ, ಪಟ್ಟಣಂತಿಟ್ಟ, ಅಲಪ್ಪುಝ ಮತ್ತು ಕೊಟ್ಟಾಯಾಂನಲ್ಲಿ ವಿಶೇಷ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಮಂಕಿಪಾಕ್ಸ್ ಮೊದಲು ದೃಢಪಟ್ಟ ವ್ಯಕ್ತಿಯ ಸಹಪ್ರಯಾಣಿಕರು ಈ ಜಿಲ್ಲೆಯವರಾಗಿರುವುದರಿಂದ ಇಲ್ಲಿ ಎಚ್ಚರಿಕೆ ವಹಿಸಲಾಗಿದೆ ಎಂದು ಉನ್ನತ ಮಟ್ಟದ ಸಭೆ ನಡೆಸಿದ ನಂತರ ಸಚಿವೆ ಹೇಳಿದ್ದಾರೆ.

ಚಿಕನ್ ಪಾಕ್ಸ್ ಅಥವಾ ಅಂತಹುದೇ ಲಕ್ಷಣಗಳನ್ನು ಹೊಂದಿರುವವರ ಮೇಲೂ ನಿಗಾ ಇರಿಸಲಾಗಿದೆ. ಮಂಕಿಪಾಕ್ಸ್ ಸೋಂಕು ಬೇರೆ ಯಾರಿಗಾದರೂ ತಗಲಿರಬಹುದೇ ಎಂಬುದನ್ನು ಪತ್ತೆಹಚ್ಚಲು ರ್ಯಾಂಡಮ್ ಟೆಸ್ಟಿಂಗ್ ನಡೆಸಲಾಗುವುದು, ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗುವುದು. ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರಗಳ ಜೊತೆಗೂ ಸರಕಾರ ಚರ್ಚೆ ನಡೆಸುತ್ತಿದ್ದು ಸೋಂಕಿನ ಲಕ್ಷಣಗಳು ಕಂಡುಬಂದಿದ್ದೇ ಆದಲ್ಲಿ ತಕ್ಷಣ ಪ್ರಯಾಣಿಕರನ್ನು ಪ್ರತ್ಯೇಕವಾಗಿರಿಸಿ ಆಸ್ಪತ್ರೆಗೆ ಸೇರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಸಚಿವೆ ಹೇಳಿದರು.

ರಾಜ್ಯದ 1200 ಆರೋಗ್ಯ ಕಾರ್ಯಕರ್ತರಿಗೆ ಮಂಕಿಪಾಕ್ಸ್ ಮುನ್ನೆಚ್ಚರಿಕಾ ಕ್ರಮಗಳ ಕುರಿತು ತರಬೇತಿ ನೀಡಲಾಗಿದೆ. ಈಗಾಗಲೇ ಮಂಕಿಪಾಕ್ಸ್ ದೃಢಪಟ್ಟವರ ಆರೋಗ್ಯ ಸ್ಥಿರವಾಗಿದೆ, ಅವರ ಸಂಪರ್ಕ ಹೊಂದಿದವರ ಜೊತೆಗೆ ಅಧಿಕಾರಿಗಳು ಸತತ ಸಂಪರ್ಕದಲ್ಲಿದ್ದು ಅವರ ಆರೋಗ್ಯ ಕುರಿತು ವಿಚಾರಿಸುತ್ತಿದ್ದಾರೆ ಎಂದು ಸಚಿವೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News