ಪ್ರವಾದಿ ಅವಹೇಳನ: ಮತ್ತೆ ಸುಪ್ರೀಂ ಮೆಟ್ಟಿಲೇರಿದ ನೂಪುರ್‌ ಶರ್ಮಾ; ಬಂಧನಕ್ಕೆ ತಡೆ ನೀಡಲು ಮನವಿ

Update: 2022-07-18 16:51 GMT

ಹೊಸದಿಲ್ಲಿ: ಪ್ರವಾದಿ ಮಹಮ್ಮದ್‌ ರವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರವಾದಿಯವರ ಬಗ್ಗೆ ನೀಡಿದ ಹೇಳಿಕೆ ಸಂಬಂಧಿಸಿ ಬಂಧನಕ್ಕೆ ತಡೆ ನೀಡಬೇಕೆಂದು ಸುಪ್ರೀಂ ಕೋರ್ಟಿನಲ್ಲಿ ಶರ್ಮಾ ಅರ್ಜಿ ಹಾಕಿದ್ದಾರೆ. 

ಪ್ರವಾದಿ ಮಹಮ್ಮದ್‌ ಅವರ ಹೇಳಿಕೆಗಳಿಗೆ ಸಂಬಂಧಿಸಿ ಈ ಹಿಂದೆ ಸುಪ್ರೀಂ ಕೋರ್ಟ್‌ ಶರ್ಮಾರನ್ನು ಟೀಕಿಸಿದ ಬಳಿಕ, ತನಗೆ ಹೆಚ್ಚಿನ ಬೆದರಿಕೆಗಳು ಬರಲಾರಂಭಿಸಿವೆ ಎಂದು ನೂಪುರ್ ಶರ್ಮಾ ಹೇಳಿದ್ದರು. ನೂಪುರ್ ಶರ್ಮಾ ಅವರು ಎರಡು ತಿಂಗಳ ಹಿಂದೆ ಟಿವಿ ಚರ್ಚೆಯಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಇದಾದ ನಂತರ ಈ ವಿಚಾರದಲ್ಲಿ ಸಾಕಷ್ಟು ವಿವಾದಗಳು ನಡೆದಿದ್ದವು. ಹಲವು ಇಸ್ಲಾಮಿಕ್ ರಾಷ್ಟ್ರಗಳೂ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದವು. 

ಈ ಹಿಂದೆಯೂ ನೂಪುರ್ ಶರ್ಮಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.   ದೇಶದ ವಿವಿಧ ಭಾಗಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳ ವಿಚಾರಣೆಯನ್ನು ಒಂದೇ ಸ್ಥಳದಲ್ಲಿ ನಡೆಸುವಂತೆ ಒತ್ತಾಯಿಸಿದ್ದರು. ಆದರೆ, ಸುಪ್ರೀಂ ಕೋರ್ಟ್ ಇದನ್ನು ನಿರಾಕರಿಸಿತ್ತು.
 
ನೂಪುರ್ ಶರ್ಮಾ ಅವರ ಹೊಸ ಅರ್ಜಿಯನ್ನು ಇನ್ನೂ ವಿಚಾರಣೆಗೆ ಪಟ್ಟಿ ಮಾಡಲಾಗಿಲ್ಲ. ತನ್ನ ಇತ್ತೀಚಿನ ಅರ್ಜಿಯಲ್ಲಿ, ನೂಪುರ್ ಶರ್ಮಾ ತನಗೆ ಹೊಸ ಬೆದರಿಕೆಗಳು ಬರುವುದಾಗಿ ಹೇಳಿದ್ದಾರೆ. ತನಗೆ ಪದೇ ಪದೇ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಹೇಳಿದ್ದಾರೆ.  

ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ನೂಪುರ್ ಶರ್ಮಾ ಸಲ್ಲಿಸಿದ್ದ ಅರ್ಜಿಯಲ್ಲಿ ಜೀವಭಯವನ್ನೂ ಹೇಳಿದ್ದರು. ಇದರೊಂದಿಗೆ ದೇಶದ ವಿವಿಧ ಭಾಗಗಳಲ್ಲಿ ದಾಖಲಾಗಿರುವ ಒಂಬತ್ತು ಎಫ್‌ಐಆರ್‌ಗಳನ್ನು ಒಂದೇ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸುವಂತೆ ಮನವಿ ಮಾಡಲಾಗಿತ್ತು. ಆಗ ಸುಪ್ರೀಂ ಕೋರ್ಟ್ ನೂಪುರ್ ಶರ್ಮಾಗೆ ತೀವ್ರ ಛೀಮಾರಿ ಹಾಕಿತ್ತು. ದೇಶದ ಹದಗೆಟ್ಟ ಪರಿಸ್ಥಿತಿಗೆ ನೀವು ಮಾತ್ರ ಕಾರಣ ಎಂದು ಶರ್ಮಾರನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ನಂತರ ಅವರು ಅರ್ಜಿಯನ್ನು ಹಿಂಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News