ಡಾಲರ್ ಎದುರು ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ

Update: 2022-07-18 16:37 GMT

ಹೊಸದಿಲ್ಲಿ,ಜು.18: ಅಮೆರಿಕದ ಡಾಲರ್ ಎದುರು ನಿರಂತರವಾಗಿ ಕುಸಿಯುತ್ತಿರುವ ಭಾರತೀಯ ರೂಪಾಯಿ ಸೋಮವಾರ ಕಚ್ಚಾತೈಲಗಳ ಬೆಲೆಗಳಲ್ಲಿ ಏರಿಕೆ ಮತ್ತು ವಿದೇಶಿ ನಿಧಿಯ ಅನಿಯಂತ್ರಿತ ಹೊರಹರಿವಿನಿಂದಾಗಿ ಮತ್ತೊಂದು ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ. 15 ಪೈಸೆಗಳಷ್ಟು ಇಳಿದು 79.97ರಲ್ಲಿ (ತಾತ್ಕಾಲಿಕ) ಮುಕ್ತಾಯಗೊಂಡಿದೆ.

 ಬೆಳಿಗ್ಗೆ ಅಂತರ್‌ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಡಾಲರ್ ಎದುರು 79.76ಕ್ಕೆ ಆರಂಭಗೊಂಡಿತ್ತಾದರೂ ಬಳಿಕ 80ರ ಅಂಚಿಗೆ ಜಾರತೊಡಗಿತ್ತು. ಗುರುವಾರದ ವಹಿವಾಟಿನಲ್ಲಿ ಡಾಲರ್ ಎದುರು ದಾಖಲೆಯ ಕುಸಿತವನ್ನು ಕಂಡಿದ್ದ ರೂಪಾಯಿ ಶುಕ್ರವಾರ ಚೇತರಿಸಿಕೊಂಡು 17 ಪೈಸೆಗಳ ಗಳಿಕೆಯೊಂದಿಗೆ 79.82ರಲ್ಲಿ ಮುಕ್ತಾಯಗೊಂಡಿತ್ತು.
 
ಸೋಮವಾರ ಆರಂಭದ ವಹಿವಾಟಿನಲ್ಲಿ ಗಳಿಕೆಯನ್ನು ದಾಖಲಿಸಿದ್ದ ರೂಪಾಯಿ ಬಳಿಕ ನಿರಂತರ ವಿದೇಶಿ ವಿನಿಮಯದ ಹೊರಹರಿವಿನ ಆತಂಕಗಳಿಂದಾಗಿ ಪ್ರತಿ ಡಾಲರ್ ಎದುರು80ರತ್ತ ಜಾರತೊಡಗಿತ್ತು.. ಎಸ್‌ಬಿಐ ಸೇರಿದಂತೆ ಕೆಲವು ಬ್ಯಾಂಕುಗಳು ಈಗಾಗಲೇ ವಿದೇಶಿ ವಿನಿಮಯಕ್ಕಾಗಿ ಪ್ರತಿ ಡಾಲರ್ಗೆ 80 ರೂ.ಗಳನ್ನು ಕೇಳತೊಡಗಿವೆ ಎಂದು ಸುದ್ದಿಸಂಸ್ಥೆಗಳು ಕಳೆದ ವಾರ ವರದಿ ಮಾಡಿದ್ದವು.

ವಿದೇಶಿ ಹೂಡಿಕೆದಾರರು ಭಾರತೀಯ ಶೇರುಗಳು ಮತ್ತು ಇತರ ಸ್ವತ್ತುಗಳ ಮಾರಾಟದಲ್ಲಿ ತೊಡಗಿರುವುದು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ  ಡಾಲರ್‌ಗಳಲ್ಲಿ  ವೌಲ್ಯ ಹೊಂದಿರುವ ಸ್ವತ್ತುಗಳತ್ತ ಸಾಗುತ್ತಿರುವುದು ಭಾರತೀಯ ರೂಪಾಯಿಗೆ ಹಾನಿಯನ್ನುಂಟು ಮಾಡಿದೆ.
ಸೋಮವಾರ ಬಾಂಬೆ ಶೇರು ವಿನಿಮಯ ಕೇಂದ್ರದ ಸೂಚ್ಯಂಕ 760.37 (ಶೇ.1.41) ಅಂಕಗಳ ಗಳಿಕೆಯೊಂದಿಗೆ 54,521.15ರಲ್ಲಿ ಮುಕ್ತಾಯಗೊಂಡಿದ್ದರೆ,ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ (ಎನ್ಎಸ್ಇ)ದ ಸೂಚ್ಯಂಕ ನಿಫ್ಟಿ 229.30 (ಶೇ.1.43) ಅಂಕಗಳ ಏರಿಕೆಯೊಂದಿಗೆ 16,278.50ರಲ್ಲಿ ದಿನದಾಟವನ್ನು ಮುಗಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News