ನೂತನ ರಾಷ್ಟ್ರಪತಿ ಆಯ್ಕೆಗೆ ಮತದಾನ ಮುಕ್ತಾಯ: ದ್ರೌಪದಿ ಮುರ್ಮು ಗೆಲುವು ಬಹುತೇಕ ಖಚಿತ

Update: 2022-07-18 16:45 GMT

ಹೊಸದಿಲ್ಲಿ,ಜು.18: ಸಂಸತ್ ಭವನದಲ್ಲಿ ಮತದಾನಕ್ಕೆ ಅನುಮತಿ ಪಡೆದಿದ್ದ ಶೇ.98.90ರಷ್ಟು ಮತದಾರರು ಸೋಮವಾರ ತಮ್ಮ ಹಕ್ಕನ್ನು ಚಲಾಯಿಸುವುದರೊಂದಿಗೆ ರಾಷ್ಟ್ರಪತಿ ಚುನಾವಣೆಯ ಮತದಾನವು ಮಕ್ತಾಯಗೊಂಡಿದೆ ಎಂದು ಚುನಾವಣಾಧಿಕಾರಿ ಪಿ.ಸಿ.ಮೋದಿ ತಿಳಿಸಿದ್ದಾರೆ.

 
ಪ್ರಧಾನಿ ನರೇಂದ್ರ ಮೋದಿ,ಗೃಹಸಚಿವ ಅಮಿತ್ ಶಾ ಹಾಗೂ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಸಂಸತ್ ಭವನದಲ್ಲಿ ಮತ ಚಲಾಯಿಸಿದರು. ದೇಶಾದ್ಯಂತ ರಾಜ್ಯ ವಿಧಾನಸಭೆಗಳಲ್ಲಿಯೂ ಮತದಾನ ನಡೆಯಿತು.
ವಿವಿಧ ಪಕ್ಷಗಳು ತಳೆದಿರುವ ನಿಲುವುಗಳನ್ನು ಪರಿಗಣಿಸಿದರೆ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿ ಯಶವಂತ ಸಿನ್ಹಾ ಅವರ ವಿರುದ್ಧ ಜಯಭೇರಿ ಮೊಳಗಿಸಲು ಸಜ್ಜಾಗಿದ್ದಾರೆ.

ಮತದಾನದ ಬಳಿಕ ಸುದ್ದಿಗಾರರಿಗೆ ವಿವರಗಳನ್ನು ನೀಡಿದ ಚುನಾವಣಾಧಿಕಾರಿ ಮೋದಿ,727 ಸಂಸದರು ಮತ್ತು ಒಂಭತ್ತು ಶಾಸಕರು ಸೇರಿದಂತೆ ಚುನಾವಣಾ ಆಯೋಗದಿಂದ ಅನುಮತಿಸಲ್ಪಟ್ಟ 736 ಮತದಾರರ ಪೈಕಿ 728 ಮತದಾರರು (719 ಸಂಸದರು ಮತ್ತು ಒಂಭತ್ತು ಶಾಸಕರು) ತಮ್ಮ ಮತಗಳನ್ನು ಚಲಾಯಿಸಿದ್ದಾರೆ ಎಂದು ತಿಳಿಸಿದರು.
ಮತಗಳ ಎಣಿಕೆ ಜು.21ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News