ಕೇರಳ: ನೀಟ್‌ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿನಿಯರ ಒಳ ಉಡುಪು ಕಳಚಲು ಆದೇಶಿಸಿದ ಭದ್ರತಾ ಸಿಬ್ಬಂದಿ

Update: 2022-07-18 17:59 GMT
ಸಾಂದರ್ಭಿಕ ಚಿತ್ರ

ವೈದ್ಯಕೀಯ ಪ್ರವೇಶಾತಿಗಾಗಿ ನಡೆಸುವ NEET ಪರೀಕ್ಷೆಗಾಗಿ ಕೇರಳದಲ್ಲಿ ವಿದ್ಯಾರ್ಥಿನಿಯರ ಒಳುಡುಪು ಕಳಚುವಂತೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕೇರಳದಲ್ಲಿ NEET ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿಯೊಬ್ಬಳು ಭದ್ರತಾ ತಪಾಸಣೆಯ ಸಮಯದಲ್ಲಿ ಬ್ರಾ ಹುಕ್‌ ಗಳು ಬೀಪ್ ಸೌಂಡ್ ಮಾಡಿದ್ದರಿಂದ ಪರೀಕ್ಷೆ ಬರೆಯುವ ಮೊದಲು ಆಕೆಯ ಬ್ರಾ ಬಲವಂತವಾಗಿ ಕಳಚುವಂತೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ ನಂತರ ಆಘಾತಕಾರಿ ಘಟನೆ ಹೊರಬಿದ್ದಿದೆ.

ಕೊಲ್ಲಂ ಜಿಲ್ಲೆಯ NEET (ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ) ಕೇಂದ್ರದಲ್ಲಿ, ಮಹಿಳಾ ಭದ್ರತಾ ಸಿಬ್ಬಂದಿ "ಲೋಹದ ಹುಕ್" ಬೀಪ್‌ ಶಬ್ದ ಮಾಡಿದ್ದರಿಂದಾಗಿ ಬ್ರಾ ವನ್ನು ಕಳಚಬೇಕೆಂದು ವಿದ್ಯಾರ್ಥಿನಿಗೆ ಹೇಳಿದ್ದರು. ಆಕೆ ಅದನ್ನು ವಿರೋಧಿಸಿದಾಗ, ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾಗಲು ಆಕೆಗೆ ಅನುಮತಿಸುವುದಿಲ್ಲ ಎಂದು ಬೆದರಿಸಲಾಗಿದೆ ಎಂದು ndtv ವರದಿ ಮಾಡಿದೆ.

"ನಿಮ್ಮ ಭವಿಷ್ಯಕ್ಕಿಂತ ನಿಮ್ಮ ಒಳಉಡುಪು ನಿಮಗೆ ಮುಖ್ಯವೇ? ಅದನ್ನು ತೆಗೆದುಹಾಕಿ ಮತ್ತು ನಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ" ಎಂದು ವಿದ್ಯಾರ್ಥಿನಿಗೆ ತಿಳಿಸಲಾಗಿದೆ ಎಂದು ಆಕೆಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆ ನಡೆದ ಮಾರ್ಥೋಮಾ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿ ಯಾವುದೇ ಹೊಣೆಗಾರಿಕೆಯನ್ನು ನಿರಾಕರಿಸಿದೆ. ಬಾಲಕಿಯ ಪೋಷಕರು ದೂರು ದಾಖಲಿಸಿದ್ದಾರೆ ಎಂದು ಕೊಲ್ಲಂ ಪೊಲೀಸ್ ಮುಖ್ಯಸ್ಥ ಕೆಬಿ ರವಿ ಖಚಿತಪಡಿಸಿದ್ದಾರೆ. ಅನೇಕ ಹುಡುಗಿಯರಲ್ಲಿ ತಮ್ಮ ಒಳಉಡುಪುಗಳನ್ನು ಕಳಚುವಂತೆ ಒತ್ತಾಯಿಸಲಾಗಿದ್ದು, ಅವುಗಳನ್ನು ಸ್ಟೋರ್ ರೂಂನಲ್ಲಿ ಬಿಸಾಡಿದ್ದಾರೆ ಎಂದು ವಿದ್ಯಾರ್ಥಿನಿಯ ತಂದೆ ಆರೋಪಿಸಿದ್ದಾರೆ.

"ಭದ್ರತಾ ತಪಾಸಣೆಯ ವೇಳೆ, ಲೋಹ ಶೋಧಕವು ಒಳಉಡುಪುಗಳ ಕೊಕ್ಕೆಗೆ ಬೀಪ್‌ ಶಬ್ದ ಮಾಡಿದೆ ಎಂದು ನನ್ನ ಮಗಳಿಗೆ ತಿಳಿಸಲಾಯಿತು, ಆದ್ದರಿಂದ ಅದನ್ನು ತೆಗೆದುಹಾಕಲು ಕೇಳಲಾಯಿತು. ಸುಮಾರು 90% ವಿದ್ಯಾರ್ಥಿನಿಯರು ತಮ್ಮ ಒಳ ಉಡುಪನ್ನು ತೆಗೆದು ಸ್ಟೋರ್ ರೂಂನಲ್ಲಿ ಇರಿಸಬೇಕಾಯಿತು. ಪರೀಕ್ಷೆ ಬರೆಯುವಾಗ ವಿದ್ಯಾರ್ಥಿನಿಯರು ಮಾನಸಿಕವಾಗಿ ತೊಂದರೆಗೀಡಾಗಿದ್ದರು’ ಎಂದು ವಿದ್ಯಾರ್ಥಿನಿಯ ತಂದೆ ಹೇಳಿದ್ದಾರೆ.

 ಒಳ ಉಡುಪುಗಳನ್ನು ಕಳಚುವಂತೆ ಒತ್ತಾಯಿಸಿದ್ದರಿಂದ ಅನೇಕ ವಿದ್ಯಾರ್ಥಿನಿಯರು ಅಳುತ್ತಿರುವುದನ್ನು ತನ್ನ ಮಗಳು ನೋಡಿದ್ದಾಳೆ. ಅನೇಕ ವಿದ್ಯಾರ್ಥಿಗಳು, "ತಮ್ಮ ಬ್ರಾ ಹುಕ್‌ ಗಳನ್ನು ಕತ್ತರಿಸಿ" ಮತ್ತು ಅವುಗಳನ್ನು ನೂಲಿನಿಂದ ಕಟ್ಟಿ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಅವರು ಬರೆದಿದ್ದಾರೆ. "ಈ ಮಕ್ಕಳು ಮಾನಸಿಕ ತೊಂದರೆಗೊಳಗಾಗಿದ್ದು, ಅವರು ಆರಾಮವಾಗಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲ” ಎಂದು ವಿದ್ಯಾರ್ಥಿನಿಯ ತಂದೆ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News