ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಹಲವಾರು ಪ್ರಮುಖ ನಾಯಕರನ್ನು ವಜಾಗೊಳಿಸಿದ ಉದ್ಧವ್ ಠಾಕ್ರೆ
ಮುಂಬೈ: ತನ್ನ ತಂದೆ ಸ್ಥಾಪಿಸಿದ ಪಕ್ಷದ ನಿಯಂತ್ರಣಕ್ಕಾಗಿ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ಹೋರಾಡುತ್ತಿದ್ದಾರೆ . ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಹಲವಾರು ಪ್ರಮುಖ ನಾಯಕರನ್ನು ಉದ್ಧವ್ ವಜಾಗೊಳಿಸಿದ್ದಾರೆ
ಠಾಕ್ರೆ ಸರಕಾರವನ್ನು ಉರುಳಿಸಿದ ನಂತರ ಸಿಎಂ ಆಗಿರುವ ಶಿಂಧೆ, ಠಾಕ್ರೆ ಪಾಳಯದಿಂದ ತಿರಸ್ಕರಿಸಲ್ಪಟ್ಟ ನಾಯಕರ ಬೆಂಬಲಕ್ಕೆ ನಿಂತಿದ್ದಾರೆ. ಶಿಂಧೆ ಬಳಗ ತಮ್ಮದೇ ನಿಜವಾದ ಶಿವಸೇನೆ ಎಂದು ಹೇಳಿಕೊಂಡರೆ, ಉದ್ಧವ್ ಠಾಕ್ರೆ ನೇತೃತ್ವದ ಗುಂಪು ಬಂಡುಕೋರರು ಪಕ್ಷದ ಒಡೆದುಹೋದ ಬಣ ಎಂದು ಹೇಳಿಕೊಳ್ಳುತ್ತಿದೆ.
ಶಿಂಧೆ-ಬಿಜೆಪಿ ಸರಕಾರದ ಸ್ಥಾಪನೆಗೆ ಕಾರಣವಾದ ಶಿಂಧೆಯವರ ಬಂಡಾಯದ ನಂತರ ಮಹಾರಾಷ್ಟ್ರದಲ್ಲಿ ಸಂಭವಿಸಿದ ಬೃಹತ್ ರಾಜಕೀಯ ಬೆಳವಣಿಗೆಯ ಕುರಿತು ಸುಪ್ರೀಂ ಕೋರ್ಟ್‌ನ ನಿರ್ಣಾಯಕ ವಿಚಾರಣೆಯ ಮೊದಲು ಠಾಕ್ರೆ ಬಳಗ ಈ ಕ್ರಮ ಕೈಗೊಂಡಿದೆ.
ವಿಚಾರಣೆಗೆ ಮುನ್ನವೇ ಶಿವಸೇನೆ ಬಣಗಳ ನಡುವಿನ ಜಟಾಪಟಿ ತೀವ್ರಗೊಂಡಿದ್ದರಿಂದ ಠಾಕ್ರೆ ತಂಡವು ಮಾಜಿ ಸಚಿವ ವಿಜಯ್ ಶಿವತಾರೆ, ಹಿಂಗೋಲಿ ಜಿಲ್ಲಾಧ್ಯಕ್ಷ ಸ್ಥಾನದಿಂದ ವಜಾಗೊಂಡ ಶಾಸಕ ಸಂತೋಷ್ ಬಂಗಾರ್, ಥಾಣಾ ಜಿಲ್ಲಾ ಪ್ರಮುಖ್ (ಜಿಲ್ಲಾ ಮುಖ್ಯಸ್ಥ) ಸ್ಥಾನದಿಂದ ನರೇಶ್ ಮ್ಹಾಸ್ಕೆ ಅವರನ್ನು ವಜಾಗೊಳಿಸಿದೆ.
ಠಾಕ್ರೆ ಅವರು ಥಾಣೆ, ಪಾಲ್ಘರ್, ಅಮರಾವತಿ ಹಾಗೂ ಯವತ್ಮಾಲ್ ಜಿಲ್ಲೆಗಳಲ್ಲಿ 100 ಕ್ಕೂ ಹೆಚ್ಚು ಹೊಸ ಪದಾಧಿಕಾರಿಗಳನ್ನು ನೇಮಿಸಿದ್ದಾರೆ. ಹೊಸ ಪದಾಧಿಕಾರಿಗಳು ಬಂಡುಕೋರರು ಬಿಟ್ಟುಹೋದ ಖಾಲಿ ಹುದ್ದೆಗಳನ್ನು ತುಂಬಿರುವ ಎರಡನೇ ಹಂತದ ನಾಯಕರಾಗಿದ್ದಾರೆ.