ಶ್ರೀಲಂಕಾ ಬಿಕ್ಕಟ್ಟು; ರಾಜಪಕ್ಸ ಉತ್ತರಾಧಿಕಾರಿ ಆಯ್ಕೆಗೆ ಇಂದು ಮತದಾನ

Update: 2022-07-20 03:02 GMT

ಕೊಲಂಬೊ: ಗೊಟಬಯ ರಾಜಪಕ್ಸ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಬುಧವಾರ ಶ್ರೀಲಂಕಾ ಸಂಸತ್ತಿನಲ್ಲಿ ಚುನಾವಣೆ ನಡೆಯಲಿದೆ. ದೇಶದ ಆರ್ಥಿಕ ಸಂಕಷ್ಟದ ವಿರುದ್ಧ ಜನ ರೊಚ್ಚಿಗೆದ್ದ ಹಿನ್ನೆಲೆಯಲ್ಲಿ ಕಳೆದ ವಾರ ರಾಜಪಕ್ಸ ದೇಶದಿಂದ ಪಲಾಯನ ಮಾಡಿದ್ದರು.

ತ್ರಿಮುಖ ಸ್ಪರ್ಧೆಯಲ್ಲಿ ವಿಜೇತರಾದವರು ಈಗಾಗಲೇ ಐಎಂಎಫ್ ಜತೆಗೆ ಸಾಲ ಮನ್ನಾ ಮಾಡುವ ಸಂಬಂಧ ಮಾತುಕತೆಯಲ್ಲಿ ತೊಡಗಿರುವ, ದಿವಾಳಿ ದೇಶದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವರು. ದೇಶದಲ್ಲಿ 22 ದಶಲಕ್ಷ ಮಂದಿ ಆಹಾರ, ಇಂಧನ ಮತ್ತು ಔಷಧಗಳ ತೀವ್ರ ಕೊರತೆ ಎದುರಿಸುತ್ತಿದ್ದಾರೆ.

ಆರು ಬಾರಿಯ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅಧ್ಯಕ್ಷ ಹುದ್ದೆಯ ರೇಸ್‍ನ ಮುಂಚೂಣಿಯಲ್ಲಿದ್ದಾರೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ರಾಜಪಕ್ಸ ರಾಜೀನಾಮೆ ನೀಡಿದ ಬಳಿಕ ಹಂಗಾಮಿ ಅಧ್ಯಕ್ಷರಾಗಿರುವ ಅವರು, ರಾಜಪಕ್ಸ ಅವರ ಸಹಚರ ಎಂಬ ಕಾರಣಕ್ಕೆ ಪ್ರತಿಭಟನಾಕಾರರು ಇವರನ್ನು ತಿರಸ್ಕರಿಸಿದ್ದಾರೆ. ಹಲವು ತಿಂಗಳುಗಳಿಂದ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜಪಕ್ಸ ಕಳೆದ ವಾರ ಸಿಂಗಾಪುರದಿಂದ ತಮ್ಮ ರಾಜೀನಾಮೆಯನ್ನು  ಪ್ರಕಟಿಸಿದ್ದರು.

ವಿಕ್ರಮಸಿಂಘೆ (73), 225 ಸದಸ್ಯರ ಸಂಸತ್ತಿನಲ್ಲಿ ಅತಿಹೆಚ್ಚು ಸ್ಥಾನಗಳನ್ನು ಹೊಂದಿರುವ ರಾಜಪಕ್ಸ ಅವರ ಎಸ್‍ಎಲ್‍ಪಿಪಿಯ ಬೆಂಬಲ ಹೊಂದಿದ್ದಾರೆ. ಹೊಸ ಅಧ್ಯಕ್ಷರ ಆಯ್ಕೆಗೆ ಬುಧವಾರ ರಹಸ್ಯ ಮತದಾನ ನಡೆಯಲಿದೆ ಎಂದು ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News