ಠಾಕ್ರೆ, ಶಿಂದೆ ಬಣದ ಮನವಿಯನ್ನು ವಿಸ್ತೃತ ಪೀಠ ಪರಿಶೀಲಿಸಬೇಕಾಗಬಹುದು: ಸುಪ್ರೀಂ ಕೋರ್ಟ್

Update: 2022-07-20 16:47 GMT

ಹೊಸದಿಲ್ಲಿ, ಜು. 20: ಶಿವಸೇನೆಯ ಉದ್ಧವ್ ಠಾಕ್ರೆ ಹಾಗೂ ಏಕನಾಥ ಶಿಂಧೆ ಬಣಗಳು ಸಲ್ಲಿಸಿದ ಅರ್ಜಿಗಳು ಹಲವು ಸಾಂವಿಧಾನಿಕ ಪ್ರಶ್ನೆಗಳನ್ನು ಎತ್ತಿವೆ. ಆದುದರಿಂದ ಅವುಗಳನ್ನು ವಿಸ್ತೃತ ಪೀಠಕ್ಕೆ ಒಪ್ಪಿಸಬೇಕಾಗಬಹುದು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. 

ವಿಸ್ತೃತ ಪೀಠ ಪರಿಗಣಿಸಬೇಕಾದ ಅಂಶಗಳನ್ನು ಜುಲೈ 27ರ ಒಳಗೆ ಪಟ್ಟಿ ಮಾಡುವಂತೆ ಸುಪ್ರೀಂ ಕೋರ್ಟ್ ಎರಡೂ ಬಣಗಳಿಗೆ ನಿರ್ದೇಶಿಸಿದೆ.
ಠಾಕ್ರೆ ಹಾಗೂ ಶಿಂಧೆ ನೇತೃತ್ವದ ಎರಡೂ ಬಣಗಳು ಸಲ್ಲಿಸಿದ 6 ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹಾಗೂ ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಅವರ ಪೀಠ ವಿಚಾರಣೆ ನಡೆಸಿತು. 

‘‘ಕೆಲವು ವಿಷಯಗಳ ವಿಚಾರಣೆಗೆ ವಿಸ್ತೃತ ಪೀಠ ಬೇಕಾಗಬಹುದು ಎಂಬುದು ನನ್ನ ದೃಢ ಭಾವನೆ’’ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ. ‘‘ಕೆಲವು ಪ್ರಮುಖ ಸಾಂವಿಧಾನಿಕ ವಿಷಯಗಳನ್ನು ಇತ್ಯರ್ಥಪಡಿಸಬೇಕು’’ ಎಂದು ಅವರು ತಿಳಿಸಿದರು. 

ಈ ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 1ರಂದು ನಡೆಯಲಿದೆ. 
ಉಪ ಸ್ಪೀಕರ್ ನರಹರಿ ಝಿರ್ವಾಲ ಅವರು ಜೂನ್ 25ರಂದು ತನ್ನ ಹಾಗೂ ತನ್ನ ಗುಂಪಿನ 15 ಶಾಸಕರ ವಿರುದ್ಧ ಜಾರಿಗೊಳಿಸಿದ ಅನರ್ಹತೆ ನೋಟಿಸುಗಳನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂದೆ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಇನ್ನೊಂದೆಡೆ ಪಕ್ಷದ ನೂತನ ವಿಪ್ ಆಗಿ ಭರತ್‌ಶೇಠ್ ಗೋಗವಾಲೆ ಅವರನ್ನು ಪರಿಗಣಿಸಿರುವ ಮಹಾರಾಷ್ಟ್ರ ವಿಧಾನ ಸಭೆಯ ನೂತನ ಸ್ವೀಕರ್ ರಾಹುಲ್ ನರ್ವೇಕರ್ ಅವರ ನಿರ್ಧಾರ ಪ್ರಶ್ನಿಸಿ ಠಾಕ್ರೆ ಅವರು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದಾರೆ. 
 ಶಿವಸೇನೆ ಜೂನ್‌ನಲ್ಲಿ ಎರಡು ಬಣಗಳಾಗಿ ವಿಭಜನೆಯಾದ ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣಗಳನ್ನು ದಾಖಲಿಸಲಾಗಿದೆ. 

ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‌ಸಿಪಿ ಮೈತ್ರಿಯ ಮಹಾ ವಿಕಾಸ ಅಘಾಡಿ ಸರಕಾರದ ವಿರುದ್ಧ ಶಿಂದೆ ಅವರು ಬಂಡಾಯ ಎದ್ದಿದ್ದರು. ಅವರಿಗೆ ಶಿವಸೇನೆಯ 55 ಶಾಸಕರಲ್ಲಿ 40 ಮಂದಿ ಬೆಂಬಲ ನೀಡಿದ್ದರು. ತರುವಾಯ ರಾಜ್ಯ ವಿಧಾನ ಸಭೆಯಲ್ಲಿ ಠಾಕ್ರೆ ಬಣ ಅಲ್ಪ ಮತಕ್ಕೆ ಇಳಿದಿರುವುದರಿಂದ ಮೈತ್ರಿ ಸರಕಾರ ಪತನಗೊಂಡಿತ್ತು. ಜೂನ್ 30ರಂದು ಶಿಂದೆ ಅವರು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News