ಗ್ರಾಹಕರ ಆಹಾರ ಬಿಲ್‌ನಲ್ಲಿ ಸೇವಾ ಶುಲ್ಕ ಸೇರಿಸದಂತೆ ಆದೇಶ: ದಿಲ್ಲಿ ಹೈಕೋರ್ಟ್ ತಡೆ

Update: 2022-07-20 16:50 GMT

ಹೊಸದಿಲ್ಲಿ, ಜು. 20: ಗ್ರಾಹಕರ ಆಹಾರ ಬಿಲ್‌ನಲ್ಲಿ ಸೇವಾ ಶುಲ್ಕವನ್ನು   ಸೇರಿಸಬಾರದು ಎಂದು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ನೀಡಿದ್ದ ಆದೇಶಕ್ಕೆ ದಿಲ್ಲಿ ಉಚ್ಚ ನ್ಯಾಯಾಲಯ ಬುಧವಾರ ತಡೆಯಾಜ್ಞೆ ನೀಡಿದೆ. 

ರೆಸ್ಟೋರೆಂಟ್‌ಗಳ ಬಿಲ್‌ನಲ್ಲಿ ಸೇವಾ ಶುಲ್ಕ ವಿಧಿಸುವುದು ಅಸಮರ್ಪಕ ವ್ಯಾಪಾರ ಕ್ರಮ. ಸೇವಾ ಶುಲ್ಕ ಪಾವತಿಸುವಂತೆ ರೆಸ್ಟೋರೆಂಟ್‌ಗಳನ್ನು ಗ್ರಾಹಕರನ್ನು ಬಲವಂತಪಡಿಸಬಾರದು ಎಂದು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಜುಲೈ 4ರಂದು ಹೇಳಿತ್ತು.  
ಈ ಆದೇಶವನ್ನು ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಶನ್ ಆಫ್ ಇಂಡಿಯಾ, ಫೆಡರೇಶನ್ ಆಫ್ ಹೊಟೇಲ್ಸ್ ಆ್ಯಂಡ್ ರೆಸ್ಟಾರೆಂಟ್ ಅಸೋಸಿಯೇಶನ್ಸ್ ಆಫ್ ಇಂಡಿಯಾ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದೆ.  

5 ಲಕ್ಷಕ್ಕೂ ಅಧಿಕ ರೆಸ್ಟಾರೆಂಟ್‌ಗಳನ್ನು ಪ್ರತಿನಿಧಿಸುವ ನ್ಯಾಷನಲ್ ರೆಸ್ಟಾರೆಂಟ್ ಅಸೋಸಿಯೇಶನ್ ಆಫ್ ಇಂಡಿಯಾ ತನ್ನ ಮನವಿಯಲ್ಲಿ, ಜುಲೈ 4ರ ಆದೇಶ ನಿರಂಕುಶ, ಅಸಮರ್ಥನೀಯ. ಸತ್ಯ ಹಾಗೂ ಸನ್ನಿವೇಶವನ್ನು ಪರಿಗಣಿಸದೇ ಜಾರಿಗೊಳಿಸಿರುವುದರಿಂದ ಈ ನೋಟೀಸನ್ನು ರದ್ದುಗೊಳಿಸುವ ಅಗತ್ಯತೆ ಇದೆ ಎಂದು ಹೇಳಿದೆ.  

ಬುಧವಾರ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯಶ್ವಂತ್ ವರ್ಮಾ, ಎಲ್ಲಾ ರೆಸ್ಟೋರೆಂಟ್‌ಗಳು ಹಾಗೂ ಹೊಟೇಲ್‌ಗಳು ಮೆನು ಹಾಗೂ ಇತರ ಸ್ಥಳಗಳಲ್ಲಿ ಸೇವಾ ಶುಲ್ಕ ಪ್ರದರ್ಶಿಸಬೇಕು ಎಂದು ಆದೇಶಿಸಿದರು. ಆಹಾರ ಪಾರ್ಸಲ್‌ಗಳಿಗೆ ಸೇವಾ ಶುಲ್ಕ ವಿಧಿಸುವುದಿಲ್ಲ ಎಂದು ರೆಸ್ಟಾರೆಂಟ್‌ಗಳನ್ನು ಪ್ರತಿನಿಧಿಸಿದ ನ್ಯಾಯವಾದಿಯ ಪ್ರತಿಪಾದನೆಯನ್ನು ನ್ಯಾಯಮೂರ್ತಿಗಳು ದಾಖಲಿಸಿಕೊಂಡರು.

‘‘ನೀವು ಸೇವಾ ಶುಲ್ಕ ಪಾವತಿಸಲು ಬಯಸದೇ ಇದ್ದರೆ, ರೆಸ್ಟಾರೆಂಟ್ ಪ್ರವೇಶಿಸಬೇಡಿ. ಇದು ಅಂತಿಮವಾಗಿ ಆಯ್ಕೆಯ ಪ್ರಶ್ನೆ’’ ಎಂದು ಉಚ್ಚ ನ್ಯಾಯಾಲಯ ಹೇಳಿತು. 
ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ಪ್ರತಿಕ್ರಿಯೆದಾರರಿಗೆ ನ್ಯಾಯಾಲಯ ಸೂಚಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 25ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News