×
Ad

ರಾಷ್ಟ್ರಪತಿ ಚುನಾವಣೆಯ ಮತಗಳ ಎಣಿಕೆ ಹೇಗೆ ನಡೆಯುತ್ತದೆ...?

Update: 2022-07-20 22:30 IST
Photo: twitter/narendramodi

ಹೊಸದಿಲ್ಲಿ,ಜು.20: ದ್ರೌಪದಿ ಮುರ್ಮು ಅಥವಾ ಯಶವಂತ ಸಿನ್ಹಾ;ಭಾರತದ ಮುಂದಿನ ರಾಷ್ಟ್ರಪತಿ ಯಾರಾಗುತ್ತಾರೆ ಎನ್ನುವುದು ನಾಳೆ ಮತಗಳ ಎಣಿಕೆ ಮುಗಿದ ಬಳಿಕ ಗೊತ್ತಾಗುತ್ತದೆ. ಗುರುವಾರ ಬೆಳಿಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಮತಗಳ ಎಣಿಕೆ ಆರಂಭಗೊಳ್ಳಲಿದೆ.

ಮತ ಎಣಿಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎನ್ನುವುದು ಇಲ್ಲಿದೆ:

ಮೊದಲು ಮತಗಳನ್ನು ವಿಂಗಡಿಸಲಾಗುತ್ತದೆ ಮತ್ತು ಅಧಿಕಾರಿಗಳು ಅದನ್ನು ಪರಿಶೀಲಿಸುತ್ತಾರೆ.

ಸಂಸದರು ಅಭ್ಯರ್ಥಿಗಳಿಗೆ ತಮ್ಮ ಆದ್ಯತೆಯನ್ನು ಮತಪತ್ರದಲ್ಲಿ ಹಸಿರು ಶಾಯಿಯ ಪೆನ್ನಿನಿಂದ ಕ್ರಮಾನುಗತವಾಗಿ ಬರೆದಿರುತ್ತಾರೆ ಮತ್ತು ಶಾಸಕರು ಇದಕ್ಕಾಗಿ ಗುಲಾಬಿ ಶಾಯಿಯ ಪೆನ್ ಬಳಸಿರುತ್ತಾರೆ.

ಮುರ್ಮು ಮತ್ತು ಸಿನ್ಹಾ ಅವರಿಗಾಗಿ ಎರಡು ಪ್ರತ್ಯೇಕ ಟ್ರೇಗಳನ್ನು ಇರಿಸಲಾಗುತ್ತದೆ. ಶಾಸಕರ ಮತಪತ್ರಗಳನ್ನು ಮೊದಲು ಮತ್ತು ಸಂಸದರ ಮತಪತ್ರಗಳನ್ನು ನಂತರ ವಿಂಗಡಿಸಲಾಗುತ್ತದೆ.

ಮೊದಲ ಪ್ರಾಶಸ್ತ್ಯವಾಗಿ ಮುರ್ಮು ಹೆಸರನ್ನು ಬರೆದಿರುವ ಮತಪತ್ರಗಳನ್ನು ಅವರ ಟ್ರೇನಲ್ಲಿ ಇರಿಸಲಾಗುತ್ತದೆ ಮತ್ತು ಸಿನ್ಹಾ ಹೆಸರನ್ನು ಮೊದಲ ಪ್ರಾಶಸ್ತ್ಯವಾಗಿ ಬರೆದಿರುವ ಮತಪತ್ರಗಳನ್ನು ಅವರ ಟ್ರೇನಲ್ಲಿ ಇರಿಸಲಾಗುತ್ತದೆ.

ಪ್ರತಿ ಸಂಸದನ ಮತದ ಮೌಲ್ಯವನ್ನು 700 ಎಂದು ನಿಗದಿಗೊಳಿಸಲಾಗಿದ್ದರೆ,ಶಾಸಕರ ಮತದ ಮೌಲ್ಯವು ಅವರ ರಾಜ್ಯಗಳ ಜನಸಂಖ್ಯೆಯನ್ನು ಅವಲಂಬಿಸಿರುತ್ತದೆ.

ವಿಂಗಡಣೆ ಪೂರ್ಣಗೊಂಡ ಬಳಿಕ ಮತಗಳ ಎಣಿಕೆ ಆರಂಭವಾಗುತ್ತದೆ.

ಸಂಸತ್ ಭವನದ ಕೊಠಡಿ ಸಂಖ್ಯೆ 73ರ ಹೊರಗೆ ಮಾಧ್ಯಮಗಳಿಗಾಗಿ ಸ್ಥಳಾವಕಾಶವನ್ನು ಕಲ್ಪಿಸಲಾಗಿದ್ದು,ಮತಗಳ ಎಣಿಕೆ ಆರಂಭವಾದ ಬಳಿಕ ಮತದಾನದ ಟ್ರೆಂಡ್ ಕುರಿತು ಅವರಿಗೆ ಮಾಹಿತಿ ನೀಡಲಾಗುತ್ತದೆ.

 ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲ್ಲುವುದು ಅತ್ಯಂತ ಹೆಚ್ಚಿನ ಮತಗಳನ್ನು ಪಡೆದ ಅಭ್ಯರ್ಥಿಯಲ್ಲ,ನಿರ್ದಿಷ್ಟ ಕೋಟಾಕ್ಕಿಂತ ಹೆಚ್ಚಿಗೆ ಮತ ಪಡೆದವರು ಚುನಾವಣೆಯಲ್ಲಿ ವಿಜೇತರಾಗುತ್ತಾರೆ. ಪ್ರತಿ ಅಭ್ಯರ್ಥಿಯು ಪಡದ ಮತಗಳನ್ನು ಒಟ್ಟುಗೂಡಿಸಿ,ಅದರ ಮೊತ್ತವನ್ನು ಎರಡರಿಂದ ಭಾಗಿಸಿ ಬಳಿಕ ಅದಕ್ಕೆ ‘1’ನ್ನು ಸೇರಿಸುವ ಮೂಲಕ ಈ ಕೋಟಾವನ್ನು ನಿರ್ಧರಿಸಲಾಗುತ್ತದೆ. ಇದಕ್ಕಿಂತ ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿ ವಿಜಯಿಯಾಗುತ್ತಾರೆ.

ಗುರುವಾರ ಸಂಜೆಯ ವೇಳೆಗೆ ಫಲಿತಾಂಶಗಳು ಘೋಷಣೆಯಾಗುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News