ಬಾತ್ರಾ ಕೊರಳಿಗೆ ಸಿಬಿಐ ಉರುಳು

Update: 2022-07-21 09:50 GMT

ಎರಡು ತಿಂಗಳ ಹಿಂದೆ ನರೇಂದ್ರ ಬಾತ್ರಾ ಅವರನ್ನು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ)ಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದು ಸುದ್ದಿಯಾಗಿತ್ತು. ಆದರೆ ಇದರ ಬೆನ್ನಲ್ಲೇ ಅವರು ಮೇ 26ರಂದು ಸ್ಪಷ್ಟನೆ ನೀಡಿ ‘‘ನಾನು ರಾಜೀನಾಮೆ ನೀಡಿಲ್ಲ. ಐಒಎ ಆಡಳಿತ ಮಂಡಳಿಗೆ ಚುನಾವಣೆ ನಡೆಯುವವರೆಗೆ ಅಧ್ಯಕ್ಷನಾಗಿ ಮುಂದುವರಿಯಲಿದ್ದೇನೆ’’ ಎಂದು ಸ್ಪಷ್ಟನೆ ನೀಡಿದ್ದರು.

    ‘‘ಈ ಬಗ್ಗೆ ಕೆಲವೊಂದು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ. ದಿಲ್ಲಿ ಹೈಕೋರ್ಟ್ ರಾಜೀನಾಮೆ ಕೊಡಲು ಹೇಳಿಲ್ಲ. ಆದರೆ ಹೈಕೋರ್ಟ್ ಸೂಚನೆಯಂತೆ ಮುಂಬರುವ ಅಂತರ್‌ರಾಷ್ಟ್ರೀಯ ಹಾಕಿ ಒಕ್ಕೂಟ (ಎಫ್‌ಐಎಚ್) ಅಥವಾ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುವುದರ ಮೂಲಕ ಇನ್ನಷ್ಟು ದಿನ ಹುದ್ದೆಯಲ್ಲಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದರು. ಭಾರತದ ಹಾಕಿ ತಂಡದ ಇತ್ತೀಚಿನ ಪ್ರದರ್ಶನದ ಬಗ್ಗೆ ಬಾತ್ರಾ ಟೀಕಿಸಿದ್ದರು. ಇದರ ಬೆನ್ನಲ್ಲೇ ಅವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. ಬಾತ್ರಾ ಅವರನ್ನು ಹಾಕಿ ಇಂಡಿಯಾದ ಆಜೀವ ಸದಸ್ಯರನ್ನಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ 1975ರ ವಿಶ್ವಕಪ್ ಜಯಿಸಿದ್ದ ಭಾರತದ ಹಾಕಿ ತಂಡದ ಸದಸ್ಯ ಅಸ್ಲಂ ಶೇರ್ ಖಾನ್ ದಿಲ್ಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯವು ಹಾಕಿ ಇಂಡಿಯಾದ ಆಜೀವ ಸದಸ್ಯತ್ವ ನೀಡುವ ಮೂಲಕ ಹಾಕಿ ಇಂಡಿಯಾವು ಕ್ರೀಡಾ ನಿಯಮಗಳನ್ನು ಗಾಳಿಗೆ ತೂರಿದೆ ಎಂದು ಮೇ 25ರಂದು ತೀರ್ಪು ನೀಡಿ ಬಾತ್ರಾ ಅವರಿಗೆ ಶಾಕ್ ನೀಡಿತ್ತು. ಹಾಕಿ ಇಂಡಿಯಾದ ಆಡಳಿತ ಮಂಡಳಿಯ ಮೇಲೆ ನಿಗಾ ವಹಿಸಲು ಸೂಚಿಸಿತ್ತು. ಇಷ್ಟೆಲ್ಲ ಬೆಳವಣಿಗೆ ನಡೆದರೂ ಬಾತ್ರಾ ಮಾತ್ರ ತನ್ನ ಸ್ಥಾನದಲ್ಲಿ ಮುಂದುವರಿಯಲು ಇನ್ನಿಲ್ಲದ ಪ್ರಯತ್ನ ನಡೆಸಿದರು, ಆದರೆ ಅವರ ಪ್ರಯತ್ನ ಫಲಕಾರಿಯಾಗಲಿಲ್ಲ. ಹೈಕೋರ್ಟ್‌ನ ಆದೇಶಕ್ಕೆ ಇದೀಗ ತಲೆಬಾಗಿದ್ದಾರೆ. ಸೋಮವಾರ (ಜು.18) ಬಾತ್ರಾ ಮೂರು ಹುದ್ದೆಗಳಿಗೂ ಅಂದರೆ ಐಒಎ, ಐಒಸಿ ಮತ್ತು ಎಫ್ ಐಎಚ್ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಕೇವಲ ಮೂರು ನಿಮಿಷಗಳ ಅವಧಿಯಲ್ಲಿ ಮೂರು ಪ್ರಮುಖ ಹುದ್ದೆಗಳಿಗೆ ಮೂರು ಪ್ರತ್ಯೇಕ ರಾಜೀನಾಮೆ ಪತ್ರಗಳನ್ನು ಕೈ ಯಲ್ಲಿ ಬರೆದು ಸಂಬಂಧಪಟ್ಟ ಆಡಳಿತ ಮಂಡಳಿಗೆ ನೀಡಿದ್ದಾರೆ. ಮೇನಲ್ಲಿ ತಾನು ಎಫ್‌ಐಎಚ್ ಕಡೆಗೆ ಹೆಚ್ಚು ಗಮನ ಹರಿಸುವುದಾಗಿ ಹೇಳಿದ್ದರು. ಆದರೆ ಇದೀಗ ತರಾತುರಿಯಲ್ಲಿ ಬಾತ್ರಾ ರಾಜೀನಾಮೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 65ರ ಹರೆಯದ ಉದ್ಯಮಿ ಕಮ್ ಕ್ರೀಡಾ ಆಡಳಿತಗಾರ ನರೇಂದ್ರ ಬಾತ್ರಾ ವೈಯಕ್ತಿಕ ಕಾರಣಗಳಿಂದಾಗಿ ಹುದ್ದೆಗಳನ್ನು ತ್ಯಜಿಸಿರುವುದಾಗಿ ಹೇಳಿದ್ದಾರೆ

 ತಡೆಯಾಜ್ಞೆ ನೀಡುವಂತೆ ಅವರು ಸಲ್ಲಿಸಿದ ಮನವಿಯನ್ನು ದಿಲ್ಲಿ ದ್ವಿಸದಸ್ಯ ಪೀಠವು ನಿರಾಕರಿಸಿದ ಬಳಿಕ ಬಾತ್ರಾ ಅವರಿಗೆ ಮುಂದಿನ ದಾರಿ ಕಾಣದಾಯಿತು. ಬಾತ್ರಾ ರಾಜೀನಾಮೆ ನೀಡಿದ ಬೆನ್ನಲೇ ಅವರ ವಿರುದ್ಧದ ಪ್ರಕರಣದ ತನಿಖೆಯನ್ನು ಆರಂಭಿಸಲಾಗಿದೆ. ಬಾತ್ರಾ ಅವರ ಹೊಸದಿಲ್ಲಿ ಮತ್ತು ಜಮ್ಮುವಿನಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿ ಕಡತಗಳಿಗೆ ಶೋಧ ನಡೆಸಲಾಗಿದೆ. ಹಾಕಿ ಇಂಡಿಯಾಕ್ಕೆ ಸೇರಿದ 35 ಲಕ್ಷ ರೂ. ಮೊತ್ತವನ್ನು ದುರುಪಯೋಗ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಸಿಬಿಐ ಎಪ್ರಿಲ್‌ನಲ್ಲಿ ಪ್ರಾಥಮಿಕ ತನಿಖೆ ಆರಂಭಿಸಿತ್ತು. ಹಾಕಿ ಇಂಡಿಯಾದ ಮಾಜಿ ಅಧ್ಯಕ್ಷ ರಾಜೀಂದರ್ ಸಿಂಗ್, ಮಾಜಿ ಪ್ರಧಾನ ಕಾರ್ಯದರ್ಶಿ ಮುಷ್ತಾಕ್ ಅಹ್ಮದ್ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಆರ್.ಕೆ.ಶ್ರೀವಾಸ್ತವ್ 2018ರಲ್ಲಿ ಐಒಎ ಅಧ್ಯಕ್ಷರ ಕಚೇರಿ ನವೀಕರಣದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಇದೀಗ ನರೇಂದ್ರ ಬಾತ್ರಾ ಸಿಬಿಐ ಬಲೆಗೆ ಬಿದ್ದು ಒದ್ದಾಡುವಂತಾಗಿದೆ.

 ನರೇಂದ್ರ ಬಾತ್ರಾ 1970-1973ರ ತನಕ ಇಂಟರ್ ಸ್ಕೂಲ್ ಹಾಕಿ ತಂಡದ ಸದಸ್ಯರಾಗಿದ್ದರು. 1973ರಲ್ಲಿ ಜಮ್ಮು ಮತ್ತು ಕಾಶ್ಮೀರ ಜೂನಿಯರ್ ತಂಡ ಮತ್ತು 1974ರಿಂದ 1980ರ ತನಕ ಜಮ್ಮು ಮತ್ತು ಕಾಶ್ಮೀರ ರಾಜ್ಯ ಹಾಕಿ ತಂಡದ ಸದಸ್ಯರಾಗಿದ್ದರು. ಇಂಟರ್ ಕಾಲೇಜು ಹಾಕಿ ಟೂರ್ನಮೆಂಟ್, ಆಲ್ ಇಂಡಿಯಾ ಇಂಟರ್ ಯುನಿವರ್ಸಿಟಿ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಆಡಿದವರು.

 ಬಾತ್ರಾ ಕ್ರೀಡಾ ಆಡಳಿತದ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 1997ರಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಕಿ ಅಧ್ಯಕ್ಷರಾದರು. 2002ರಲ್ಲಿ ಇಂಡಿಯಾ ಹಾಕಿ ಫೆಡರೇಶನ್‌ನ ಹಿರಿಯ ಉಪಾಧ್ಯಕ್ಷರಾಗಿ ಆಯ್ಕೆಯಾದರು, 2009ರಲ್ಲಿ ಪ್ರಧಾನ ಕಾರ್ಯದರ್ಶಿ, 2010ರಲ್ಲಿ ಕೋಶಾಧಿಕಾರಿ ಮತ್ತು 2014ರಲ್ಲಿ ಹಾಕಿ ಇಂಡಿಯಾ ಅಧ್ಯಕ್ಷ ಹುದ್ದೆಯನ್ನಲಂಕರಿಸಿದರು. ಭಾರತದಲ್ಲಿ ನಡೆದ ಇಂಟರ್ ನ್ಯಾಶನಲ್ ಹಾಕಿ ಟೂರ್ನಮೆಂಟ್‌ನ ಸಂಘಟನಾ ಸಮಿತಿಯ ಚೇರ್‌ಮೆನ್ ಆಗಿದ್ದರು. 2011ರಲ್ಲಿ ಏಶ್ಯನ್ ಹಾಕಿ ಫೆಡರೇಶನ್‌ನ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಬಾತ್ರಾ ಹಾಕಿ ಮಾತ್ರವಲ್ಲ ಕ್ರಿಕೆಟ್ ಆಡಳಿತದಲ್ಲೂ ಕೈಯಾಡಿಸಿದ್ದರು. 2003ರಿಂದ 2013ರ ತನಕ ದಿಲ್ಲಿ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2013ರಲ್ಲಿ ಇಂಡಿಯನ್ ಒಲಿಂಪಿಕ್‌ಅಸೋಸಿಯೇಶನ್‌ನ ಅಸೋಸಿಯೆಟ್ ವೈಸ್ ಪ್ರೆಸಿಡೆಂಟ್ ಆಗಿ ಆಯ್ಕೆಯಾದರು. 2018ರ ತನಕ ಈ ಹುದ್ದೆಯಲ್ಲಿದ್ದರು.. 2017ರಲ್ಲಿ ಇಂಟರ್ ನ್ಯಾಶನಲ್ ಹಾಕಿ ಫೆಡರೇಶನ್‌ನ ಅಧ್ಯಕ್ಷ ಹುದ್ದೆಗೇರಿದರು. ಹಾಕಿ ಇಂಡಿಯಾ ಆಜೀವ ಸದಸ್ಯರಾಗಿದ್ದುಕೊಂಡು ಐಒಎ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಗಳಿಸಿದ್ದರು.

Writer - ಇಬ್ರಾಹಿಂ ಅಡ್ಕಸ್ಥಳ

contributor

Editor - ಇಬ್ರಾಹಿಂ ಅಡ್ಕಸ್ಥಳ

contributor

Similar News