ರಾಷ್ಟ್ರಪತಿ ಚುನಾವಣೆ: ಎರಡನೇ ಹಂತದ ಮತ ಎಣಿಕೆಯಲ್ಲಿ ಭಾರೀ ಮುನ್ನಡೆ ಸಾಧಿಸಿದ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು

Update: 2022-07-21 13:25 GMT
Photo: Twitter

ಹೊಸದಿಲ್ಲಿ: ಎನ್‌ಡಿಎ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಗುರುವಾರ ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ಭಾರೀ ಮುನ್ನಡೆ ಸಾಧಿಸಿದ್ದಾರೆ. ಇದುವರೆಗೆ ಎಣಿಸಿದ 10 ರಾಜ್ಯಗಳ ಎಲ್ಲಾ ಸಂಸದರು ಮತ್ತು ಶಾಸಕರ ಒಟ್ಟು ಮತಗಳಲ್ಲಿ ಶೇ.72 ರಷ್ಟು ಮತಗಳನ್ನು ಮುರ್ಮು ಅವರು ಪಡೆದಿದ್ದಾರೆ.

ಮುರ್ಮು ಅವರು ಗೆಲುವಿನತ್ತ ದಾಪುಗಾಲಿಡುತ್ತಿದ್ದು, ಶೀಘ್ರದಲ್ಲೇ ಮತಗಳ ಶೇಕಡಾ 50 ರ ಗಡಿಯನ್ನು ದಾಟಲಿದ್ದಾರೆ, ಮುರ್ಮು ಅವರ ಮತ ಮೌಲ್ಯವು 4,83,299 ಕ್ಕೆ ತಲುಪಿದ್ದು,  ಅವರ ಪ್ರತಿಸ್ಪರ್ಧಿ ಯಶವಂತ್ ಸಿನ್ಹಾ ಅವರ ಮತ ಮೌಲ್ಯ 1,89,876 ಕ್ಕೆ ತಲುಪಿದೆ.

ಎರಡನೇ ಸುತ್ತಿನಲ್ಲಿ ಮುರ್ಮು ಅವರು 1,05,299 ಮತ ಎಣಿಕೆಯೊಂದಿಗೆ 10 ರಾಜ್ಯಗಳ ಒಟ್ಟು 1138 ಶಾಸಕರ ಪೈಕಿ 809 ಶಾಸಕರ ಮತಗಳನ್ನು ಪಡೆದರೆ, ಸಿನ್ಹಾ 44,276 ಮತ ಮೌಲ್ಯದೊಂದಿಗೆ 329 ಶಾಸಕರ ಮತಗಳನ್ನು ಪಡೆದರು.

ಮೊದಲ ಸುತ್ತಿನ ಎಣಿಕೆಯ ನಂತರ, ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸದಸ್ಯರ ಮತಗಳನ್ನು ಎಣಿಸಿದಾಗ, 748 ಮತಗಳಲ್ಲಿ 540 ಮತಗಳನ್ನು ಮುರ್ಮು ಮುನ್ನಡೆ ಸಾಧಿಸಿದ್ದರು.

ಈ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿ ಸಂಸದರು 700 ಮತಗಳ ಮೌಲ್ಯವನ್ನು ಹೊಂದಿದ್ದು, ಮುರ್ಮು ಒಟ್ಟು 5,23,600 ಮತಗಳನ್ನು ಪಡೆದಿದ್ದಾರೆ.  ಮೊದಲ ಸುತ್ತಿನ ಎಣಿಕೆಯ ನಂತರ ಪ್ರತಿಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರು 208 ಸಂಸದರ ಮತಗಳನ್ನು ಪಡೆದಿದ್ದು, ಅವರ ಒಟ್ಟು ಮತಗಳ ಮೌಲ್ಯ 1,45,600. ಶೇಕಡಾ 72.9 ಸಂಸದರ ಮತ ಮುರ್ಮು ಅವರ ಪರ ಬಿದ್ದರೆ, ಶೇಕಡಾ 27.81 ರಷ್ಟು ಮತವನ್ನು ಮಾತ್ರ ಸಿನ್ಹಾ ಪಡೆದುಕೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಪಿ ಸಿ ಮೋಡಿ ಗುರುವಾರ ತಿಳಿಸಿದ್ದಾರೆ.

15 ಸಂಸದರ ಮತಗಳು ಅಸಿಂಧು ಎಂದು ಘೋಷಿಸಲಾಗಿದ್ದು, ಎಲ್ಲ ಸಂಸದರ ಮತಗಳನ್ನು ಎಣಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.ಎಂಟು ಸಂಸದರು ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಹಾಕಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News