ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರಿಗೆ ದೊರೆಯಲಿರುವ ವೇತನ, ಸೌಲಭ್ಯಗಳೇನು?

Update: 2022-07-22 06:29 GMT

ಹೊಸದಿಲ್ಲಿ: ಎನ್‍ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ವಿಪಕ್ಷಗಳ ಜಂಟಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಸೋಲಿಸಿ ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗಿದ್ದಾರೆ. ಭಾರತದ 15ನೇ ರಾಷ್ಟ್ರಪತಿಯಾಗಲಿರುವ ಮುರ್ಮು ಅವರು ದೇಶದ ಆದಿವಾಸಿ ಜನಾಂಗದಿಂದ ಆಯ್ಕೆಯಾದ ಮೊದಲ ರಾಷ್ಟ್ರಪತಿ ಹಾಗೂ ಪ್ರತಿಭಾ ಪಾಟೀಲ್ ನಂತರ ಎರಡನೇ ಮಹಿಳಾ ರಾಷ್ಟ್ರಪತಿ ಆಗಿದ್ದಾರೆ.

ರಾಷ್ಟ್ರಪತಿ ವೇತನವೆಷ್ಟು?

ದ್ರೌಪದಿ ಮುರ್ಮು ನೂತನ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಆಕೆಯ ಮಾಸಿಕ ವೇತನ ರೂ 5 ಲಕ್ಷ ಆಗಲಿದೆ. ರಾಷ್ಟ್ರಪತಿಗಳ ವೇತನವನ್ನು ರೂ 1.5 ಲಕ್ಷದಿಂದ ರೂ 5 ಲಕ್ಷಕ್ಕೆ 2018ರಲ್ಲಿ ಏರಿಸಲಾಗಿತ್ತು.

ಭಾರತದ ರಾಷ್ಟ್ರಪತಿಯ ಅಧಿಕೃತ ನಿವಾಸವಾಗಿರುವ ರಾಷ್ಟ್ರಪತಿ ಭವನವು 340 ಕೊಠಡಿಗಳನ್ನು ಹೊಂದಿದೆ. ರಾಷ್ಟ್ರಪತಿಗಳು ಬಳಸುವ ಕಾರು ಬುಲೆಟ್ ಪ್ರೂಫ್ ಹಾಗೂ ಶಾಕ್ ಪ್ರೂಫ್ ಆಗಿದ್ದು ಅದಕ್ಕೆ ಲೈಸನ್ಸ್ ಪ್ಲೇಟ್ ಇರುವುದರಿಲ್ಲ. ಈಗಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮರ್ಸಿಡಿಸ್ ಮೇಬಾಚ್ ಎಸ್600 ಪುಲ್ಲ್ಮನ್ ಗಾರ್ಡ್ ಬಳಸುತ್ತಿದ್ದು ಇದು ಬುಲೆಟ್, ಬಾಂಬ್, ಗ್ಯಾಸ್ ದಾಳಿ ನಿರೋಧಕವಾಗಿದೆ.

ಭಾರತದಲ್ಲಿರಾಷ್ಟ್ರಪತಿಯೊಬ್ಬರು ನಿವೃತ್ತರಾದ ನಂತರ ಅವರಿಗೆ ಕನಿಷ್ಠ ರೂ 1.5 ಲಕ್ಷ ಪಿಂಚಣಿ ದೊರೆಯಲಿದ್ದು ಅವರ ಪತಿ ಅಥವಾ ಪತ್ನಿಗೆ ಮಾಸಿಕ ರೂ 30,000 ದೊರೆಯುತ್ತದೆ. ವಾಸಿಸಲು ಬಾಡಿಗೆ ರಹಿತ ಮನೆಯೂ ಅವರಿಗೆ ದೊರೆಯುತ್ತದೆಯಲ್ಲದೆ ಅವರು ಗರಿಷ್ಠ ಐದು ಮಂದಿ ಉದ್ಯೋಗಿಗಳನ್ನೂ ಹೊಂದಬಹುದಾಗಿದೆ.

ವೆಕೇಶನ್ ರಿಟ್ರೀಟ್

ಭಾರತದ ರಾಷ್ಟ್ರಪತಿಗೆ ಶಿಮ್ಲಾದ ಮಶೋಬ್ರದಲ್ಲಿರುವ ದಿ ರಿಟ್ರೀಟ್ ಬಿಲ್ಡಿಂಗ್ ಮತ್ತು ಹೈದರಾಬಾದ್‍ನ ಬೊಲರುಂನಲ್ಲಿರುವ ರಾಷ್ಟ್ರಪತಿ ನಿಲಯಂ ಎಂಬ ಎರಡು ರಜಾಕಾಲದ ಸ್ಥಳಗಳಿದ್ದು ಇಲ್ಲಿ ರಾಷ್ಟ್ರಪತಿ ವರ್ಷಕ್ಕೆ ಕನಿಷ್ಠ ಒಂದು ಬಾರಿ ಆಗಮಿಸುತ್ತಾರೆ.

ಶಿಮ್ಲಾದಲ್ಲಿರುವ ರಿಟ್ರೀಟ್ ಬಿಲ್ಡಿಂಗ್ ಸಂಪೂರ್ಣವಾಗಿ ಮರದಿಂದ ನಿರ್ಮಿತವಾಗಿದ್ದು 10,628 ಚದರ ಅಡಿ ವಿಸ್ತೀರ್ಣ ಹೊಂದಿದೆ. ಹೈದರಾಬಾದ್‍ನ ರಾಷ್ಟ್ರಪತಿ ನಿಲಯಂ ಅನ್ನು ಸ್ವಾತಂತ್ರ್ಯಾನಂತರ ಹೈದರಾಬಾದ್‍ನ ನಿಜಾಮ್ ಅವರಿಂದ ಪಡೆಯಲಾಗಿದ್ದು ಒಂದು ಅಂತಸ್ತಿನ ಈ ಕಟ್ಟಡದಲ್ಲಿ 11 ಕೊಠಡಿಗಳಿದ್ದು  ಒಟ್ಟು 90 ಎಕರೆ ವಿಸ್ತೀರ್ಣ ಸ್ಥಳದಲ್ಲಿ ಈ ಕಟ್ಟಡವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News