15,000 ಕೋಟಿ ರೂ. ಎಕ್ಸ್ ಪ್ರೆಸ್‍ ವೇಗೆ 5 ದಿನಗಳ ಮಳೆಯನ್ನೂ ತಾಳಿಕೊಳ್ಳಲು ಸಾಧ್ಯವಾಗಿಲ್ಲ: ವರುಣ್ ಗಾಂಧಿ ಟೀಕೆ

Update: 2022-07-22 15:22 GMT

ಹೊಸದಿಲ್ಲಿ,ಜು.22: ಉತ್ತರ ಪ್ರದೇಶದಲ್ಲಿ ಕಳೆದ ವಾರವಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದ ಹೊಚ್ಚ ಹೊಸ ಎಕ್ಸ್‌ಪ್ರೆಸ್‌ ವೇದ ದಯನೀಯ ಸ್ಥಿತಿಯು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ದಾಳಿಗೆ ಪ್ರತಿಪಕ್ಷಗಳಿಗೆ ಮಾತ್ರ ಅಸ್ತ್ರವನ್ನು ಒದಗಿಸಿಲ್ಲ,ತನ್ನದೇ ಪಕ್ಷವನ್ನು ಬಹಿರಂಗವಾಗಿ ಟೀಕಿಸುವ ಬಿಜೆಪಿ ಸಂಸದ ವರುಣ ಗಾಂಧಿಯವರೂ ಟೀಕಾಕಾರರ ಗುಂಪಿಗೆ ಸೇರಿದ್ದು,ರಸ್ತೆ ನಿರ್ಮಾಣ ಕಾಮಗಾರಿಯ ಗುಣಮಟ್ಟವನ್ನು ಪ್ರಶ್ನಿಸಿದ್ದಾರೆ.

15,000 ಕೋ.ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಎಕ್ಸ್‌ಪ್ರೆಸ್‌ ವೇ ಐದು ದಿನಗಳ ಮಳೆಯನ್ನೂ ತಾಳಿಕೊಳ್ಳದಿದ್ದರೆ ಅದರ ಗುಣಮಟ್ಟದ ಕುರಿತು ಗಂಭೀರ ಪ್ರಶ್ನೆಗಳು ಏಳುತ್ತವೆ ಎಂದು ಗಾಂಧಿ ಟ್ವೀಟಿಸಿದ್ದಾರೆ. ಸಂಬಂಧಿತ ಅಧಿಕಾರಿಗಳು ಮತ್ತು ಕಂಪನಿಗಳ ವಿರುದ್ಧ ಕ್ರಮಕ್ಕೂ ಅವರು ಆಗ್ರಹಿಸಿದ್ದಾರೆ.

ಹಾನಿಗೀಡಾಗಿರುವ ರಸ್ತೆಯ ಭಾಗಗಳಲ್ಲಿ ಹಲವಾರು ಬುಲ್ಡೋಜರ್ಗಳು ಕಂಡು ಬಂದಿವೆ. ಹೊಂಡಗಳನ್ನು ತಕ್ಷಣ ದುರಸ್ತಿ ಮಾಡಲಾಗಿದೆ ಮತ್ತು ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.

ಎಕ್ಸ್‌ಪ್ರೆಸ್‌ ವೇದ ದುರವಸ್ಥೆಗಾಗಿ ಬಿಜೆಪಿಯನ್ನು ಟೀಕಿಸಿರುವ ಎಸ್ಪಿ ಅಧ್ಯಕ್ಷ ಅಖಿಲೇಶ ಯಾದವ ಅವರು,ಇದು ಬಿಜೆಪಿಯ ಅರೆಮನಸ್ಸಿನ ಅಭಿವೃದ್ಧಿಯ ಗುಣಮಟ್ಟದ ಒಂದು ಸ್ಯಾಂಪಲ್ ಆಗಿದೆ ಎಂದು ಬಣ್ಣಿಸಿದ್ದಾರೆ.

ಬುಂದೇಲಖಂಡ್ ಎಕ್ಸ್‌ಪ್ರೆಸ್‌ ವೇ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಜು.16ರಂದು ಉದ್ಘಾಟಿಸಿದ್ದರು. ಏಳು ಜಿಲ್ಲೆಗಳ ಮೂಲಕ ಹಾದುಹೋಗುವ ನಾಲ್ಕು ಪಥಗಳ ಈ ಎಕ್ಸ್‌ಪ್ರೆಸ್‌ ವೇ ಚಿತ್ರಕೂಟದ ಭರತಕೂಪ್ ಅನ್ನು ಇಟಾವಾದ ಕುದ್ರೆಲ್ನೊಂದಿಗೆ ಸಂಪರ್ಕಿಸುತ್ತದೆ.

ಬಿಜೆಪಿ ಸರಕಾರವನ್ನು ಗುರಿಯಾಗಿಸಿಕೊಂಡು ಟ್ವೀಟಿಸಿರುವ ಉ.ಪ್ರದೇಶ ಕಾಂಗ್ರೆಸ್,‘ಹೊಂಡಮುಕ್ತ ’ಉತ್ತರ ಪ್ರದೇಶದ ಭರವಸೆಯನ್ನು ನೀಡಿದ್ದವರು ನಿರ್ಮಿಸಿರುವ ನೂತನಎಕ್ಸ್‌ಪ್ರೆಸ್‌ ವೇ ‘ಹೊಂಡಮಯ’ವಾಗಿದೆ ಎಂದು ಹೇಳಿದೆ. ನೂತನ ರಸ್ತೆಯು ಬುಂದೇಲಖಂಡ ಪ್ರದೇಶವನ್ನು ಆಗ್ರಾ-ಲಕ್ನೋ ಮತ್ತು ಯಮುನಾ ಎಕ್ಸ್‌ಪ್ರೆಸ್‌ ವೇಗಳ ಜೊತೆಗೆ ಸಂಪರ್ಕಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News