ಕ್ಯಾಪಿಟಲ್ ಹಿಂಸಾಚಾರ ತಡೆಯಲು ಮುಂದಾಗದ ಟ್ರಂಪ್: ತನಿಖಾ ಸಮಿತಿ ವರದಿ

Update: 2022-07-22 16:02 GMT

ವಾಷಿಂಗ್ಟನ್, ಜು.22: ಕಳೆದ ವರ್ಷದ ಜನವರಿ 6ರಂದು ಅಮೆರಿಕದ ಕ್ಯಾಪಿಟಲ್ ಹಿಲ್ಸ್ ಮೇಲೆ ತನ್ನ ಬೆಂಬಲಿಗರು ದಾಳಿ ಮಾಡಿ ಹಿಂಸಾಚಾರ ನಡೆಸುತ್ತಿದ್ದಾಗ ಅವರನ್ನು ತಡೆಯಲು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉದ್ದೇಶಪೂರ್ವಕವಾಗಿ ಮುಂದಾಗಿರಲಿಲ್ಲ ಎಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಂಸದೀಯ ಸಮಿತಿ ವರದಿ ನೀಡಿದೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ಗೆಲುವನ್ನು ಪ್ರಮಾಣೀಕರಿಸುವ ಪ್ರಯತ್ನಕ್ಕೆ ಅಡ್ಡಿ ಮಾಡುವ ಉದ್ದೇಶದಿಂದ ಟ್ರಂಪ್ ಬೆಂಬಲಿಗರ ಗುಂಪು ಕ್ಯಾಪಿಟಲ್ ಹಿಲ್ಸ್ ಗೆ ನುಗ್ಗಿ ನಡೆಸಿದ ಹಿಂಸಾಚಾರದಲ್ಲಿ 5 ಮಂದಿ ಮೃತಪಟ್ಟಿದ್ದರು. . ಕ್ಯಾಪಿಟಲ್ ಹಿಲ್ಸ್‌ನತ್ತ   ತೆರಳುವಂತೆ ಬೆಂಬಲಿಗರಿಗೆ ಟ್ರಂಪ್ ಕರೆ ನೀಡಿದ ಬಳಿಕ ಹಿಂಸಾಚಾರ ಭುಗಿಲೆದ್ದಿತ್ತು. ಫಲಿತಾಂಶ ತನ್ನ ಪರ ಬರುವಂತೆ ಮಾಡಲು ಆಗ ಉಪಾಧ್ಯಕ್ಷರಾಗಿದ್ದ ಮೈಕ್ ಪೆನ್ಸ್ ಕ್ರಮ ಕೈಗೊಳ್ಳಲಿಲ್ಲ ಎಂದು ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದರು.

  ಡೆಮೊಕ್ರಾಟ್ ಮತ್ತು ರಿಪಬ್ಲಿಕನ್ ಎರಡೂ ಪಕ್ಷಗಳ ಪ್ರತಿನಿಧಿಗಳು ಆ ದಿನ 187 ನಿಮಿಷ ಟ್ರಂಪ್ ಏನು ಮಾಡುತ್ತಿದ್ದರು ಎಂಬ ಬಗ್ಗೆ ಸಮಿತಿಯ ಎದುರು ಹೇಳಿಕೆ ನೀಡಿದ್ದಾರೆ. . ಕ್ಯಾಪಿಟಲ್ ಹಿಲ್ಸ್‌ನತ್ತ  ತೆರಳುವಂತೆ ಬೆಂಬಲಿಗರಿಗೆ ಕರೆ ನೀಡಿದ್ದರಿಂದ ಹಿಡಿದು ದೊಂಬಿಯ ಬಳಿಕ ಗಲಭೆಕೋರರನ್ನು ಉದ್ದೇಶಿಸಿ ‘ನೀವು ಅತ್ಯಂತ ವಿಶೇಷ ವ್ಯಕ್ತಿಗಳು’ ಎಂದು ಶ್ಲಾಘಿಸಿದ್ದು, ‘ಈಗ ಮನೆಗೆ ಹಿಂತಿರುಗುವ ಸಮಯ ’ ಎಂದು ಹೇಳಿಕೆಯ ಬಗ್ಗೆ ಹಲವು ಸಂಸದರು ಮಾಹಿತಿ ನೀಡಿದರು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಅಧ್ಯಕ್ಷ ಟ್ರಂಪ್ ಕ್ರಮ ಕೈಗೊಳ್ಳಲು ವಿಫಲವಾಗಲಿಲ್ಲ. ಅವರು ಕ್ರಮ ಕೈಗೊಳ್ಳದಿರಲು ನಿರ್ಧರಿಸಿದ್ದರು. ತನ್ನ ಉದ್ದೇಶವನ್ನು ಬೆಂಬಲಿಗರ ಗುಂಪು ಸಾಧಿಸುತ್ತಿರುವುದನ್ನು ನೋಡುತ್ತಾ ಸುಮ್ಮನಿದ್ದರು ’ ಎಂದು ರಿಪಬ್ಲಿಕನ್ ಸಂಸದ ಆ್ಯಡಂ ಕಿಂಝಿಂಗರ್ ಹೇಳಿದ್ದಾರೆ. ಟ್ರಂಪ್ ತನ್ನ ಊಟದ ಕೋಣೆಯಲ್ಲಿ ಕುಳಿತುಕೊಂಡು ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಹಿಂಸಾಚಾರದ ವರದಿಯನ್ನು ವೀಕ್ಷಿಸುತ್ತಿದ್ದರು ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಹಿತ ಹಲವು ಇತರ ಅಧಿಕಾರಿಗಳು ಹೇಳಿದ್ದಾರೆ.

ಹಿಂಸಾಚಾರದ ಸಂದರ್ಭ ಅಮೆರಿಕದ ರಕ್ಷಣಾ ಪಡೆಯ ಜಂಟಿ ಮುಖ್ಯಸ್ಥರಾಗಿದ್ದ ಜನರಲ್ ಮಾರ್ಕ್ ಮಿಲ್ಲೆಯ ಆಡಿಯೊ ಹೇಳಿಕೆಯನ್ನು ಗುರುವಾರದ ವಿಚಾರಣೆ ವೇಳೆ ಪರಿಶೀಲಿಸಲಾಂಯಿತು. ಟ್ರಂಪ್ರನ್ನು ಉದ್ದೇಶಿಸಿ ಹೇಳಿದ್ದ ಮಿಲ್ನೆ ‘ನೀವು ಸೇನೆಯ ಪ್ರಧಾನ ದಂಡನಾಯಕರು. ಅಮೆರಿಕದ ಕ್ಯಾಪಿಟಲ್ ಹಿಲ್ಸ್ ನಲ್ಲಿ ದೊಂಬಿ ನಡೆಯುತ್ತಿದೆ, ಆದರೆ ನಿಮ್ಮಿಂದ ಒಂದು ಫೋನ್ ಕರೆ ಕೂಡಾ ಇಲ್ಲ ? ಎಂದು ಆಶ್ಚರ್ಯದಿಂದ ಉದ್ಗರಿಸಿದ್ದರು.

ಪ್ರತಿಭಟನಾಕಾರರನ್ನು ಹಿಂದೆ ಸರಿಯುವಂತೆ ಸೂಚಿಸುವ ಸಂದರ್ಭ ‘ಶಾಂತಿ’ ಎಂಬ ಪದವನ್ನು ಉಲ್ಲೇಖಿಸಲು ಟ್ರಂಪ್ ಬಯಸಲಿಲ್ಲ. ಅವರ ಪುತ್ರಿ ಇವಾಂಕಾ ಟ್ರಂಪ್ ‘ ಶಾಂತಿಯಿಂದ ಇರಿ’ ಎಂಬ ಪದ ಬಳಕೆಗೆ ಸಲಹೆ ನೀಡಿದ ಬಳಿಕಷ್ಟೇ ಅವರು ಅದನ್ನು ಸೇರಿಸಲು ಒಪ್ಪಿದ್ದರು ಎಂದು ಶ್ವೇತಭವನದ ಮಾಜಿ ಪತ್ರಿಕಾ ಕಾರ್ಯದರ್ಶಿ ಸಾರಾ ಮ್ಯಾಥ್ಯೂಸ್ ಹೇಳಿದ್ದಾರೆ.

ಬೈಡನ್ ಗೆಲುವನ್ನು ಬುಡಮೇಲುಗೊಳಿಸಲು ಕಾನೂನು ಬಾಹಿರವಾಗಿ ಪ್ರಯತ್ನಿಸಿದ ಆರೋಪವನ್ನು ಟ್ರಂಪ್ ವಿರುದ್ಧ ದಾಖಲಿಸಲು ತನಿಖಾ ಸಮಿತಿ ನಿರ್ಧರಿಸಿದೆ. ಸೆಪ್ಟಂಬರ್ನಲ್ಲಿ ಇನ್ನಷ್ಟು ಸಾಕ್ಷಿಗಳ ಮತ್ತು ಮಾಹಿತಿಗಳ ಪರಿಶೀಲನೆ ನಡೆಯಲಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News