ತೀಸ್ತಾ ಸೆಟಲ್ವಾಡ್, ಶ್ರೀಕುಮಾರ್ ಬಿಡುಗಡೆಗೆ ರಾಷ್ಟ್ರಪತಿ, ಸಿಜೆಐಗೆ ಕೆನಡಾದ ಗಣ್ಯರ ಆಗ್ರಹ‌

Update: 2022-07-23 14:25 GMT
Former DGP R.B. Sreekumar and Activist Teesta Setalvad.

ಹೊಸದಿಲ್ಲಿ,ಜು.23: ಭಾರತದ ಕ್ಷೀಣಿಸುತ್ತಿರುವ ಪ್ರಜಾಪ್ರಭುತ್ವದ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿರುವ ಲೇಖಕಿ ಮಾರ್ಗರೆಟ್ ಅಟ್ವುಡ್ ಸೇರಿದಂತೆ ಕೆನಡಾದ 50ಕ್ಕೂ ಅಧಿಕ ಗಣ್ಯರು 2002ರ ಗುಜರಾತ ದಂಗೆಗಳಿಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಆರ್.ಬಿ.ಶ್ರೀಕುಮಾರ್ ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಎನ್.ವಿ.ರಮಣ ಅವರನ್ನು ಆಗ್ರಹಿಸಿದ್ದಾರೆ. ‌

ಸೆಟ್ಲವಾಡ್ ಮತ್ತು ಶ್ರೀಕುಮಾರ ಬಂಧನದ ಸುತ್ತಲಿನ ಸಂದರ್ಭಗಳು ಮತ್ತು ಅವರ ಬಂಧನಗಳು ಯುಕ್ತ ಕಾನೂನು ಪ್ರಕ್ರಿಯೆಯಲ್ಲಿ ರಾಜಕೀಯ ಹಸ್ತಕ್ಷೇಪವನ್ನು ಸೂಚಿಸುತ್ತಿವೆ. ಇಂತಹ ಕ್ರಮಗಳು ದಶಕಗಳಿಂದಲೂ ಜಾತ್ಯತೀತ,ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಕಾನೂನಿನ ಆಳ್ವಿಕೆಯಿರುವ ದೇಶವೆಂಬ ಗೌರವಕ್ಕೆ ಪಾತ್ರವಾಗಿರುವ ನಿಮ್ಮ ನೇತೃತ್ವದ ಭಾರತದ ಅಂತರರಾಷ್ಟ್ರೀಯ ಖ್ಯಾತಿಗೆ ಬೆದರಿಕೆಯನ್ನುಂಟು ಮಾಡುತ್ತಿವೆ. ದಶಕಗಳಿಂದಲೂ ಕಾನೂನಿನ ಆಡಳಿತ ಮತ್ತು ಜಾತ್ಯತೀತ,ಪ್ರಜಾಸತ್ತಾತ್ಮಕ ಸಂವಿಧಾನದ ಪಾಲಕರು ಎಂಬ ಗೌರವಕ್ಕೆ ಪಾತ್ರವಾಗಿರುವ ಸರ್ವೋಚ್ಚ ನ್ಯಾಯಾಲಯ ಮತ್ತು ಭಾರತೀಯ ನ್ಯಾಯಾಂಗದ ವರ್ಚಸ್ಸಿಗೂ ಈ ಕ್ರಮಗಳು ಧಕ್ಕೆಯನ್ನುಂಟು ಮಾಡುತ್ತವೆ ಎಂದು ಈ ಗಣ್ಯರು ರಾಷ್ಟ್ರಪತಿಗಳು ಮತ್ತು ಸಿಜೆಐಗೆ ಬರೆದಿರುವ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಮಾನವ ಹಕ್ಕುಗಳನ್ನು ರಕ್ಷಿಸುವುದು ಅಪರಾಧವಲ್ಲ ಎಂದು ಹೇಳಿರುವ ಹ್ಯೂಮನ್ ರೈಟ್ಸ್ ವಾಚ್ನ ದಕ್ಷಿಣ ಏಷ್ಯಾ ನಿರ್ದೇಶಕಿ ಮೀನಾಕ್ಷಿ ಗಂಗುಲಿ ಅವರು,ಈ ಬಂಧನಗಳು ಗುಜರಾತ್ ದಂಗೆಗಳ ಸಂತ್ರಸ್ತರಿಗೆ ನ್ಯಾಯವನ್ನು ದೊರಕಿಸಲು ಮತ್ತು ಅಧಿಕಾರದಲ್ಲಿದ್ದವರನ್ನು ಹೊಣೆಗಾರರನ್ನಾಗಿಸಲು ಪ್ರಯತ್ನಿಸಿದ್ದಕ್ಕಾಗಿ ಸ್ಪಷ್ಟ ಪ್ರತೀಕಾರಗಳಾಗಿವೆ ಎಂದಿದ್ದಾರೆ.ನ್ಯಾಯಾಧೀಶರು,ಲೇಖಕರು,ಕಲಾವಿದರು,ಸಾಮಾಜಿಕ ಸಂಘಟಕರು ಹಾಗೂ ನವೋಮಿ ಕ್ಲೇನ್,ಪೀಟರ್ ಲುಪ್ರೆಟ್,ಜೂಡಿ ರೆಬಿಕ್, ಯಾವರ್ ಹಮೀದ್ ಮತ್ತು ರೋಹಿನ್ಟನ್ ಮಿಸ್ತ್ರಿಯವರಂತಹ ಬುದ್ಧಿಜೀವಿಗಳು ಪತ್ರಕ್ಕೆ ಅಂಕಿತ ಹಾಕಿದವರಲ್ಲಿ ಸೇರಿದ್ದಾರೆ.

ಗುರುವಾರ ಕೆನಡಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾನವ ಹಕ್ಕುಗಳ ನ್ಯಾಯವಾದಿ ಹಾಗೂ ಪತ್ರಕ್ಕೆ ಸಹಿ ಹಾಕಿದರವರಲ್ಲಿ ಒಬ್ಬರಾದ ಪರ್ಲ್ ಈಲಿಯೆಡ್ಸ್ ಅವರು ದಮನದ ವಿರುದ್ಧ ಗಣ್ಯ ಕೆನೆಡಿಯನ್ರಿಂದ ಈ ಪತ್ರದಂತಹ ಅಂತರರಾಷ್ಟ್ರೀಯ ಒಗ್ಗಟ್ಟು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು.

ಸರಕಾರಗಳನ್ನು ಉತ್ತರದಾಯಿಗಳನ್ನಾಗಿಸುವುದು ಅತ್ಯಂತ ಮಹತ್ವದ್ದಾಗಿದೆ. ಈ ನಿರ್ದಿಷ್ಟ ಪ್ರಕರಣದಲ್ಲಿ ನಡೆದಿರುವ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಗಳಿಗೆ ಶಿಕ್ಷೆಯಿಂದ ವಿನಾಯಿತಿಯಿಲ್ಲ ಎನ್ನುವುದನ್ನು ಖಚಿತಪಡಿಸಬೇಕಿದೆ ಎಂದೂ ಅವರು ಹೇಳಿದರು.
 
ಭಿನ್ನಾಭಿಪ್ರಾಯವು ಪ್ರಜಾಪ್ರಭುತ್ವದ ವಿಶಿಷ್ಟ ಲಕ್ಷಣವಾಗಿದ್ದು, ಪ್ರಜಾಸತ್ತಾತ್ಮಕ ಸಂವಿಧಾನಗಳಲ್ಲಿ ಮತ್ತು ಪ್ರಜಾಸತ್ತಾತ್ಮಕ ಆಡಳಿತದಲ್ಲಿ ಪ್ರತಿಪಾದಿಸಲ್ಪಟ್ಟಿದೆ. ಈ ಪತ್ರದಂತಹ ಉಪಕ್ರಮಗಳು ಅಧಿಕಾರಿಗಳನ್ನು ತಲುಪುತ್ತವೆ ಮತ್ತು ಸೆಟಲ್ವಾಡ್ ಹಾಗೂ ಶ್ರೀಕುಮಾರ್ ಅವರ ವಿರುದ್ಧದ ಆರೋಪಗಳನ್ನು ಕೈಬಿಡಲು ಮತ್ತು ಅವರನ್ನು ತಕ್ಷಣವೇ ಜಾಮೀನಿನಲ್ಲಿ ಬಿಡುಗಡೆಗೊಳಿಸಲು ಅವರ ಮನವೊಲಿಸುತ್ತವೆ ಎಂಬ ವ್ಯಾಪಕ ಆಶಯಗಳು ಸುದ್ದಿಗೋಷ್ಠಿಯಲ್ಲಿ ವ್ಯಕ್ತವಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News