ಸೇವೆಯಲ್ಲಿ ಶಿಕ್ಷಣ, ಆರೋಗ್ಯ ಸೇವೆ ಉತ್ತಮ: ಡಾ. ತುಂಬೆ ಮೊಯ್ದಿನ್

Update: 2022-07-23 17:26 GMT

ಬಂಟ್ವಾಳ, ಜು.23: ಸಮಾಜಕ್ಕೆ ನೀಡುವ ಸೇವೆಯಲ್ಲಿ ವಿದ್ಯೆ ಮತ್ತು ಆರೋಗ್ಯ ಸೇವೆ ಅತೀ ಉತ್ತಮವಾಗಿದ್ದು ಯು.ಎ.ಇ. ಯಲ್ಲಿ ಸುಧೀರ್ಘ ಜೀವನದ ಬಳಿಕ ತುಂಬೆಯಲ್ಲಿ ಹಲವು ಶೈಕ್ಷಣಿಕ ಬದಲಾವಣೆಗೆ ಯೋಜನೆಗಳನ್ನು ರೂಪಿಸಲಾಗಿದ್ದು ಮುಂದಿನ ಮೂರು, ನಾಲ್ಕು ವರ್ಷಗಳಲ್ಲಿ ಇದು ಕಾರ್ಯಗತಗೊಳ್ಳಲಿದೆ ಎಂದು ತುಂಬೆ ಗ್ರೂಪ್ ಯುಎಇ ಇದರ ಸಂಸ್ಥಾಪಕ ಡಾ. ತುಂಬೆ ಮೊಯ್ದಿನ್ ಹೇಳಿದರು.

ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ಇದರ ವತಿಯಿಂದ ಪಾಣೆಮಂಗಳೂರು ಸಾಗರ್ ಆಡಿಟೋರಿಯಂ ನಲ್ಲಿ ಶನಿವಾರ  ನಡೆದ ಬಂಟ್ವಾಳ ತಾಲೂಕು ಮಸ್ಜಿದ್ ಡೈರಿ ಬಿಡುಗಡೆ, ಕುರ್ ಆನ್ ವಾಚನ ಸ್ಪರ್ಧೆ ಹಾಗೂ ಶಾಲೆ, ಕಾಲೇಜು, ಮದರಸದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಸ್ಜಿದ್ ಡೈರಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಶಾಫಿ ಸಅದಿ ಮಾತನಾಡಿ, ರಾಜ್ಯದಲ್ಲಿ ಅಂದಾಜು 1 ಕೋಟಿ ಮುಸ್ಲಿಮ್ ಜನಸಂಖ್ಯೆ ಇದ್ದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಮುದಾಯದ ಸಮಸ್ಯೆಯನ್ನು ಪರಿಹಾರ ಮಾಡಬೇಕಾದರೆ ಮೊದಲು ಸಮಸ್ಯೆಯನ್ನು ಮನದಟ್ಟು ಮಾಡಬೇಕು. ಈ ನಿಟ್ಟಿನಲ್ಲಿ ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ಮಾಡುತ್ತಿರುವ ಕೆಲಸ ಕಾರ್ಯಗಳು ಮಾದರಿಯಾಗಿದೆ ಎಂದರು. 

ಸಂಯುಕ್ತ ಜಮಾಅತ್ ಕಮಿಟಿ ಹೊರ ತಂದಿರುವ ಮಸ್ಜಿದ್ ಡೈರಿಯಲ್ಲಿ ತಾಲೂಕಿ‌ನ ಪ್ರತಿ ಜಮಾಅತ್ ನ ವಿವರಗಳಿದ್ದು ಇದು ಸಮುದಾಯದ ಸಬಲೀಕರಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಮಾದರಿಯ ಡೈರಿ ಜಿಲ್ಲೆ ಮತ್ತು ರಾಜ್ಯದಲ್ಲಿ ಸಿದ್ಧವಾಗಬೇಕು ಎಂದ ಅವರು ಮುಸ್ಲಿಮ್ ಸಮುದಾಯ ಶೈಕ್ಷಣಿಕವಾಗಿ, ರಾಜಕೀಯವಾಗಿ ಇನ್ನಷ್ಟು ಬಲಗೊಳ್ಳಬೇಕಾಗಿದೆ. ಜಮಾಅತ್ ಕಮಿಟಿಗಳು ತಮ್ಮ ತಮ್ಮ ಜಮಾಅತ್ ನಲ್ಲಿ ಇರುವ ಸಮಸ್ಯೆಗಳನ್ನು ಮನದಟ್ಟು ಮಾಡಿ ಅದಕ್ಕೆ ಬೇಕಾದ ಪರಿಹಾರವನ್ನು ಕಂಡುಕೊಳ್ಳಬೇಕು. ಇದಕ್ಕಾಗಿ ಜಮಾಅತ್ ವ್ಯಾಪ್ತಿಯಲ್ಲಿ ಇರುವ ಸಂಘಟನೆಗಳನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. 

ಕಾರ್ಯಕ್ರಮವನ್ನು ಉಡುಪಿ ಮತ್ತು ಚಿಕ್ಕಮಗಳೂರು ಖಾಝಿ ಹಾಜಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಹಾಜಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉಪದೇಶ ನೀಡಿದರು. ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿಯ ಅಧ್ಯಕ್ಷ ಹಾಜಿ ಜಿ.ಮುಹಮ್ಮದ್ ಹನೀಫ್ ಗೋಳ್ತಮಜಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಇದೇ ವೇಳೆ ಡಾ. ತುಂಬೆ ಮೊಯ್ದಿನ್ ಮತ್ತು ಶಾಫಿ ಸಅದಿ ಅವರನ್ನು ಸನ್ಮಾನಿಸಲಾಯಿತು. ಮಸ್ಜಿದ್ ಡೈರಿ ರಚನೆಯಲ್ಲಿ ಶ್ರಮಿಸಿದ ಅಬ್ದುಲ್ ರಝಾಕ್ ಅನಂತಾಡಿ ಮತ್ತು ಪಿ‌.ಮುಹಮ್ಮದ್ ಅವರನ್ನು ಗೌರವಿಸಲಾಯಿತು. ಕಿಡ್ನಿ ರೋಗಿಗಳಿಗೆ ಸಹಾಯಧನ ವಿತರಿಸಲಾಯಿತು.

ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 625ರಲ್ಲಿ 625 ಅಂಕ ಪಡೆದು ರಾಜ್ಕಕ್ಕೆ ಪ್ರಥಮ ಸ್ಥಾನ ಪಡೆದ ತಾಲೂಕಿನ ವಿದ್ಯಾರ್ಥಿ ಶಾಝಿನ್ ಅಬ್ದುಲ್ ರಝಾಕ್ ಬೋಳಂತೂರು ಅವರನ್ನು ಅಭಿನಂದಿಸಲಾಯಿತು.

ಸಮಸ್ತ ಮತ ವಿದ್ಯಾಭ್ಯಾಸ ಬೋರ್ಡ್ ಹಾಗೂ ಸುನ್ನಿ ವಿದ್ಯಾಭ್ಯಾಸ ಬೋರ್ಡ್ ನಡೆಸಿದ ನಡೆಸಿದ 5, 7, ಮತ್ತು 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಿಗಳನ್ನು ಮತ್ತು ಈ ಸಾಲಿನ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ವಿಭಾಗವಾರು ಅತ್ಯಧಿಕ ಅಂಕಗಳನ್ನು ‌ಪಡೆದ ಸಾಧಕ ವಿದ್ಯಾರ್ಥಿಗಳನ್ನು  ಪುರಸ್ಕಾರಿಸಲಾಯಿತು.

ತಾಲೂಕಿನ ವಿವಿಧ ರೇಂಜ್ ಗಳಿಂದ ನೋಂದಾಯಿಸಲ್ಪಟ್ಟ ಮದರಸ ವಿದ್ಯಾರ್ಥಿಗಳಿಗೆ ನಡೆಸಿದ ಕುರ್ ಆನ್ ವಾಚನ ಸ್ಪರ್ಧೆಯಲ್ಲಿ ಮುಡಿಪು ರೇಂಜ್ ನ ವಿದ್ಯಾರ್ಥಿ ಮುಹಮ್ಮದ್ ಫಾಝಿಲ್ ಪ್ರಥಮ ಸ್ಥಾನ, ಸಜಿಪ ರೇಂಜಿನ ವಿದ್ಯಾರ್ಥಿ ಅಯಾಝ್ ಕೌಡೇಲ್ ದ್ವಿತೀಯ ಸ್ಥಾನ ಹಾಗೂ ಮುಡಿಪು ರೇಂಜಿನ ಅಹಮದ್ ಮಿಕ್ದಾದ್ ತೃತೀಯ ಸ್ಥಾನ ಪಡೆದರು. ವಿಜೇತ ವಿದ್ಯಾರ್ಥಿಗಳಿಗೆ ತಲಾ 10,000, 7,500 ಹಾಗೂ 5,000 ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ವಿತರಿಸಲಾಯಿತು.

ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಅಬ್ದುಲ್ ರವೂಫ್ ಸುಲ್ತಾನ್ ಗೋಲ್ಡ್, ಮುಹಮ್ಮದ್ ಹಾಜಿ ಸಾಗರ್, ಪುತ್ತೂರು ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಮುಹಮ್ಮದ್ ಹಾಜಿ ಕಲ್ಲೆಗ, ತಾನಾಜಿ ಬಾಬರ್ ಆರ್.ಜೆ. ಗೋಲ್ಡ್, ಪಿ.ಎಸ್.ಅಬ್ದುಲ್ ಹಮೀದ್ ನೆಹರು ನಗರ, ಬಿ.ಎಂ.ಅಬ್ಬಾಸ್ ಅಲಿ ಬೋಳಂತೂರು, ಮುಹಮ್ಮದ್ ಶಫಿ, ಸುಲೈಮಾನ್ ಹಾಜಿ ನಾರ್ಶ, ಎಸ್.ಕೆ.ಅಬ್ದುಲ್ ಖಾದರ್ ಹಾಜಿ ಮುಡಿಪು ಮೊದಲಾದವರು ಉಪಸ್ಥಿತರಿದ್ದರು.

ಬೆಳಗ್ಗೆ ನಡೆದ ಕುರ್ ಆನ್ ವಾಚನ ಸ್ಪರ್ಧೆಯನ್ನು ಬದ್ರಿಯಾ ಜುಮಾ ಮಸೀದಿ ಆಲಡ್ಕ ಇದರ ಮುದರ್ರಿಸ್ ಅಶ್ರಫ್ ಸಖಾಫಿ ಉದ್ಘಾಟಿಸಿದರು. ನೆಹರೂ ನಗರ ಜುಮಾ ಮಸೀದಿ ಖತೀಬ್ ಅಬ್ದುಸ್ಸಲಾಂ ಫೈಝಿ ಇರ್ಫಾನಿ ದುಅ ನೆರವೇರಿಸಿದರು.

ಸಂಯುಕ್ತ ಜಮಾಅತ್ ಕಮಿಟಿಯ ಉಪಾಧ್ಯಕ್ಷ ಎಂ.ಎಸ್.ಮುಹಮ್ಮದ್ ಸ್ವಾಗತಿಸಿ, ಮಸ್ಜಿದ್ ಡೈರಿ ಬಗ್ಗೆ ಸಂಪಾದಕ ಅಬ್ದುಲ್ ರಝಾಕ್ ಅನಂತಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ನೋಟರಿ ಅಬೂಬಕ್ಕರ್ ವಿಟ್ಲ ವಂದಿಸಿದರು. ರಶೀದ್ ವಿಟ್ಲ, ಲತೀಫ್ ನೇರಳಕಟ್ಟೆ, ಬಿ.ಎಂ. ತುಂಬೆ ವಿವಿಧ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News