ಶಿಂಧೆಗೆ ಸಿಎಂ ಪಟ್ಟ ಭಾರ ಹೃದಯದ ನಿರ್ಧಾರ ಎಂದ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್

Update: 2022-07-24 02:22 GMT
ಏಕನಾಥ ಶಿಂಧೆ- ಚಂದ್ರಕಾಂತ್ ಪಾಟೀಲ್ (Photo: PTI)

ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ವೇಳೆ ಶಿವಸೇನೆಯ ಏಕನಾಥ ಶಿಂಧೆ ಅವರನ್ನು ಮುಖ್ಯಮಂತ್ರಿಯಾಗಿಸಿ, ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿರುವುದು ಅತ್ಯಂತ ಭಾರವಾದ ಹೃದಯದಿಂದ ತೆಗೆದುಕೊಂಡ ನಿರ್ಧಾರ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.

ಈ ಹೇಳಿಕೆಯ ಕುರಿತ ವೀಡಿಯೊವನ್ನು ಕೆಲವೇ ಗಂಟೆಗಳಲ್ಲಿ ಬಿಜೆಪಿಯ ಸಾಮಾಜಿಕ ಜಾಲತಾಣದಿಂದ ತೆಗೆದು ಹಾಕಲಾಗಿದೆ. ಜತೆಗೆ ಫಡ್ನವೀಸ್ ಸೇರಿದಂತೆ ಹಲವು ಮಂದಿ ನಾಯಕರು ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದ್ದಾರೆ. ಅವರು ಪಾಟೀಲ್ ಅವರನ್ನು ಸಮರ್ಥಿಸಿಕೊಂಡರೂ, "ಶಿಂಧೆ ನಮ್ಮ ನಯಕ. ಅವರನ್ನು ಸಿಎಂ ಮಾಡುವ ನಿರ್ಧಾರ ಹಲವರಿಗೆ ಅಚ್ಚರಿ ತಂದಿದ್ದರೂ, ಅದು ದಿಢೀರನೇ ತೆಗೆದುಕೊಂಡ ನಿರ್ಧಾರವಲ್ಲ. ಅದು ಅತ್ಯಂತ ಯೋಚನಾಬದ್ಧ ಹಾಗೂ ಸಂಘಟಿತ ನಿರ್ಧಾರ" ಎಂದು ಸ್ಪಷ್ಟನೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಸರ್ಕಾರ ಬದಲಾದ ಬಳಿಕ ಮೊದಲ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಪಾಟೀಲ್, ಸರ್ಕಾರಕ್ಕೆ ಸ್ಥಿರತೆ ನೀಡುವ ಮತ್ತು ಸರಿಯಾದ ಸಂದೇಶವನ್ನು ರವಾನಿಸುವ ನಾಯಕ ಬೇಕು. ಆದ್ದರಿಂದ ಕೇಂದ್ರ ಬಿಜೆಪಿ ಮುಖಂಡರು ಅದರಲ್ಲೂ ವಿಶೇಷವಾಗಿ ಫಡ್ನವೀಸ್ "ಭಾರ ಹೃದಯದೊಂದಿಗೆ" ಶಿಂಧೆಯವರನ್ನು ಸಿಎಂ ಮಾಡುವ ನಿರ್ಧಾರ ಕೈಗೊಂಡರು ಎಂದು ಹೇಳಿದ್ದರು.

ಬಿಜೆಪಿಯ ಆಶೀಶ್ ಶೇಲರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಪಾಟೀಲ್ ಅವರು ಕಾರ್ಯಕರ್ತರ ಭಾವನೆಗಳಿಗೆ ಪ್ರತಿಕ್ರಿಯಿಸಿದ್ದೇ ವಿನಃ ಅದು ಅವರ ಅಭಿಪ್ರಾಯ ಅಲ್ಲ ಎಂದು ಸಮುಜಾಯಿಷಿ ನೀಡಿದ್ದಾರೆ.

ಶಿಂಧೆಯವರನ್ನು ಸಿಎಂ ಮಾಡಿರುವುದು ರಾಜ್ಯ ಬಿಜೆಪಿ ನಾಯಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದ್ದು, ಇದು ಫಡ್ನವೀಸ್ ಅವರನ್ನು ಹತ್ತಿಕ್ಕುವ ಯತ್ನ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ ಎಂದು timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News