ವಿದ್ಯಾರ್ಥಿಗಳಿಗೆ ಗಿಡ ಬೆಳೆಸುವ ಸ್ಪರ್ಧೆ: 300 ಗಿಡ ವಿತರಣೆ
ಉಡುಪಿ: ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಹಮ್ಮಿ ಕೊಳ್ಳಲಾಗುವ ಗಿಡ ಬೆಳೆಸುವ ಸ್ಪರ್ಧೆಯ ಪ್ರಯುಕ್ತ ಇಂದು ಸಾಗುವಾನಿ, ಮಾಗುವಾನಿ ಸೇರಿದಂತೆ ವಿವಿಧ ಜಾತಿಯ 300 ಗಿಡಗಳನ್ನು ವಿತರಿಸಲಾಯಿತು. ಈ ಗಿಡಗಳನ್ನು ಒಂದು ವರ್ಷ ಕಾಲಾಂತರದಲ್ಲಿ ಉತ್ತಮವಾಗಿ ಬೆಳೆಸಿದ ಮೂರು ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಗಿಡ ವಿತರಿಸಿ ಮಾತನಾಡಿದ ಉಡುಪಿ ಅರಣ್ಯ ರಕ್ಷಕ ಕೇಶವ ಪೂಜಾರಿ, ನಮ್ಮ ಬದುಕಿಗೆ ಮುಖ್ಯವಾಗಿ ಬೇಕಾದುದು ಆಮ್ಲಜನಕ. ಈ ಆಮ್ಲಜನಕ ನಮಗೆ ಒದಗಿ ಬರುವುದು ಮರಗಿಡಗಳಿಂದ. ಹಾಗಾಗಿ ನಮ್ಮ ಬದುಕಿಗೆ ಅನಿವಾರ್ಯವಾಗಿ ಅಮ್ಲಜನಕ ಬೇಕಾಗಿದೆ. ಅದನ್ನು ಉತ್ಪಾದಿಸು ವುದು ಮರ ಗಿಡಗಳು. ಹಾಗಾಗಿ ಮರ ಗಿಡಗಳು ನಾಶವಾಗದ ಹಾಗೆ ನಾವು ರಕ್ಷಿಸಬೇಕು ಮತ್ತು ಬೆಳಸಬೇಕು ಎಂದರು.
ಈ ಪ್ರಕೃತಿಯಲ್ಲಿ ಕಾಲ ಕಾಲಕ್ಕೆ ಮಳೆಕಾಲ, ಚಳಿಗಾಲ, ಬೇಸಿಗೆಕಾಲಗಳು ಬಂದು ಜನರ ಬದುಕು ಸಮತೋಲನದಲ್ಲಿ ಇರಲು ಪಕೃತಿ ಕೂಡಾ ಸಮ ತೋಲನದಲ್ಲಿ ಇರಬೇಕಾಗಿದೆ. ನಮ್ಮ ದೇಶದಲ್ಲಿ ಶೇ.೩೩ ಕಾಡು ಪ್ರದೇಶ ಇರ ಬೇಕು. ಆದರೆ ಈಗ ಇರುವುದು ಶೇ.೨೨. ಅದರಲ್ಲೂ ಕರ್ನಾಟಕದಲ್ಲಿ ಶೇ.೨೦ ಮಾತ್ರ ಅರಣ್ಯ ಪ್ರದೇಶ ಉಳಿದಿದೆ. ಹಾಗಾಗಿ ನಮ್ಮ ಬದುಕು ಸುಗಮವಾಗಲು ಈ ಪ್ರಕೃತಿಯನ್ನು ಸಮತೋಲನದಲ್ಲಿ ಇರಿಸಲು ಕಟಿಬದ್ದರಾಗೋಣ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಅರಣ್ಯ ಸಂರಕ್ಷಣಾಧಿಕಾರಿ ಗುರುರಾಜ ಕಾವ್ರಾಡಿ, ಗಿಡ ಮರ ಬೆಳೆಸುವ ಮತ್ತು ಉಳಿಸುವ ಮಹತ್ವವನ್ನು ತಿಳಿಸಿದರು. ಶಾಲಾ ಸಂಚಾಲಕ ಸುರೇಶ್ ಶೆಣೈ ಮತ್ತು ಮುಖ್ಯೋಪಾಧ್ಯಾಯಿನಿ ಹೇಮ ಲತಾ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷ ರಿಯಾಝ್ ಪಳ್ಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತಿಲಕರಾಜ್ ಸಾಲಿಯಾನ್ ವಂದಿಸಿದರು. ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.