ಸರಕಾರಿ ಇಲಾಖೆಯ ಉದ್ಯೋಗಿಗಳು, ಅಧಿಕಾರಿಗಳು ʼಶಿವದೇವಾಲಯದಲ್ಲಿ ಜಲಾಭಿಷೇಕʼ ನಡೆಸಲು ಆದೇಶಿಸಿದ ಸಚಿವೆ

Update: 2022-07-25 07:01 GMT

ಹೊಸದಿಲ್ಲಿ:  ತಮ್ಮ ಇಲಾಖೆಯ ಎಲ್ಲಾ ಉದ್ಯೋಗಿಗಳು ಮತ್ತು ಅಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಜುಲೈ 26ರಂದು ತಮ್ಮ ಮನೆಗಳ ಸಮೀಪದ ಶಿವ ದೇವಾಲಯಗಳಲ್ಲಿ ಜಲಾಭಿಷೇಕ  ನಡೆಸಿ ಅದರ ಫೋಟೋಗಳನ್ನು ತಮ್ಮ ಅಧಿಕೃತ ಇಮೇಲ್‍ಗಳಲ್ಲಿ ಕಳುಹಿಸಬೇಕು ಹಾಗೂ ವಾಟ್ಸ್ಯಾಪ್ ಗ್ರೂಪ್‍ಗಳಲ್ಲಿ ಪೋಸ್ಟ್ ಮಾಡಬೇಕು ಎಂದು ಆದೇಶ ಹೊರಡಿಸಿ ಉತ್ತರಾಖಂಡ ಮಹಿಳಾ ಸಬಲೀಕರಣ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ರೇಖಾ ಆರ್ಯ ವಿವಾದಕ್ಕೀಡಾಗಿದ್ದಾರೆ.

ಈ ಜಲಾಭಿಷೇಕವನ್ನು ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ  ನಡೆಸಬೇಕು ಹಾಗೂ ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯ ಭಾಗವಾಗಿ ಈ ಆದೇಶ ಹೊರಡಿಸಲಾಗಿದೆ ಎಂದು ಸಚಿವೆ ಹೇಳಿಕೊಂಡಿದ್ದಾರೆ.

ಈ ಕಾರ್ಯಕ್ರಮದ ಭಾಗವಾಗಿ "ಮುಝೆ ಭೀ ಜನಮ್ ಲೇನೇ ದೊ, ಶಿವ್ ಕಯ್ ಮಾಹ್ ಮೈನ್ ಶಕ್ತಿ ಕಾ ಸಂಕಲ್ಪ್ ಹೈ" (ಶಿವನ ಮಾಸದಲ್ಲಿ ನಾನು ಕೂಡ ಜನ್ಮ ತಾಳಬೇಕು ಎಂಬುದು ಶಕ್ತಿಯ ನಿರ್ಣಯ) ಎಂಬ ಸಂದೇಶದೊಂದಿಗೆ ಕನ್ವರ್ ಯಾತ್ರೆ ಕೂಡ ಆಯೋಜಿಸಲಾಗುವುದು, ಇದರಲ್ಲಿ ತಮ್ಮ ಸಚಿವಾಲಯ ಅಧೀನದಲ್ಲಿರುವ ಎಲ್ಲಾ ಅಧಿಕಾರಿಗಳು ಮತ್ತು ಉದ್ಯೋಗಿಗಳು ಭಾಗವಹಿಸಬೇಕೆಂದೂ ಸಚಿವೆ ಆದೇಶಿಸಿದ್ದಾರೆ.

ಸಚಿವೆಯ ಆದೇಶ ಖಂಡಿಸಿದ ಉತ್ತರಾಖಂಡ ಕಾಂಗ್ರೆಸ್ ಅಧ್ಯಕ್ಷ ಕರಣ್ ಮಹಾರ, "ಸರಕಾರಿ ಕೆಲಸದಲ್ಲಿ ಧರ್ಮವನ್ನು ತರುವುದು ತಪ್ಪು ಹಾಗೂ ತಪ್ಪು ಪದ್ಧತಿಗೆ ನಾಂದಿ ಹಾಡುತ್ತದೆ" ಎಂದಿದ್ದಾರೆ.

ಜಲಾಭಿಷೇಕ ನಡೆಸಿ ನಂತರ ಫೋಟೋಗಳನ್ನೂ ಪೋಸ್ಟ್ ಮಾಡಲು ಹೇಳುವುದು ತುಘ್ಲಕ್ ಆದೇಶದಂತಾಗಿದೆ ಎಂದು ಅವರು ಟೀಕಿಸಿದರು. ಇನ್ನೊಂದೆಡೆ ಅಖಿಲ ಭಾರತ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ ಹೇಳಿಕೆ ನೀಡಿ, ಆರ್ಯ ಅವರ ಆದೇಶವನ್ನು ತಕ್ಷಣ ವಾಪಸ್ ಪಡೆಯಬೇಕು ಭಾರತದ ಸಂವಿಧಾನದಲ್ಲಿ ಅಡಕವಾಗಿರುವ ಜಾತ್ಯತೀತತೆಯ ತತ್ವಕ್ಕೆ ಇದು ವಿರುದ್ಧವಾಗಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News