ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ನೀಡಿದ ಆರೋಪ: ಮಧು ಕೀಶ್ವರ್, 4 ಇತರರ ವಿರುದ್ಧ ಪ್ರಕರಣ ದಾಖಲು

Update: 2022-07-25 12:14 GMT
Photo: Twitter

ಲಕ್ನೋ: ಐದು ವರ್ಷದ ಹಿಂದೆ, 2017ರಲ್ಲಿ ನಡೆದ ಸೂಕ್ಷ್ಮ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಪೋಸ್ಟ್ ಮಾಡಿ ಶಾಂತಿ ಕದಡಿದ್ದಾರೆಂಬ ಆರೋಪದ ಮೇಲೆ ಉತ್ತರ ಪ್ರದೇಶದ ಸಹರಣಪುರ ಪೊಲೀಸರು ರವಿವಾರ ಬಲಪಂಥೀಯ ಧೋರಣೆಯ ʼವಿದ್ವಾಂಸೆʼ ಮಧು ಕೀಶ್ವರ್ ಮತ್ತು ನಾಲ್ಕು ಮಂದಿ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕನ್ವರ್ ಯಾತ್ರಗೆ ತೆರಳುತ್ತಿದ್ದ ಯಾತ್ರಾರ್ಥಿಗಳನ್ನು  ಸಾಗಿಸುತ್ತಿದ್ದ ವಾಹನವೊಂದು ದಿಯೋಬಂದ್ ಪಟ್ಟಣದಲ್ಲಿ ಮುಸ್ಲಿಂ ವ್ಯಕ್ತಿಯ ಮೇಲೆ ಹರಿದು ಆತನ ಸಾವಿಗೆ ಕಾರಣವಾಗಿದೆ ಎಂಬ ವಿವರಣೆ ಹೊಂದಿದ್ದ  ವೀಡಿಯೋ ಪೋಸ್ಟ್ ಮಾಡಲಾಗಿತ್ತಲ್ಲದೆ ಉದ್ದೇಶಪೂರ್ವಕವಾಗಿ ಮುಸ್ಲಿಂ ವ್ಯಕ್ತಿಯ ಮೇಲೆ ವಾಹನ ಹರಿಸಿದ್ದಕ್ಕಾಗಿ ಯಾತ್ರಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು ಎಂದೂ ಹೇಳಲಾಗಿತ್ತು.

ಈ ವೀಡಿಯೋ ಕುರಿತು ಸ್ಪಷ್ಟೀಕರಣ ನೀಡಿದ ಸಹರಣಪುರ ಪೊಲೀಸರು ಈ ಘಟನೆ 2017ರಲ್ಲಿ ನಡೆದಿತ್ತು ಹಾಗೂ ಕ್ರಮಕೈಗೊಳ್ಳಲಾಗಿದೆ ಹಾಗೂ ಈ ವೀಡಿಯೋ ತಪ್ಪು ಮಾಹಿತಿ ನೀಡುತ್ತಿದೆ ಅದನ್ನು ಪೋಸ್ಟ್ ಮಾಡಿದವರು ಅದನ್ನು ಡಿಲೀಟ್ ಮಾಡಬೇಕು ಎಂದೂ ಪೊಲೀಸರು ಕೋರಿದ್ದರು.

ಆದರೆ ಕೀಶ್ವರ್ ಮತ್ತು ಇತರ ನಾಲ್ಕು ಮಂದಿ ಈ ಪೋಸ್ಟ್ ಡಿಲೀಟ್ ಮಾಡಿರಲಿಲ್ಲ. ಕೀಶ್ವರ್, ಅನಿಲ್ ಮಾನಸಿಂಗ್, ರಾಜ್ ಕಮಲ್, ಶುಧ ಶುಲ್ಕ ಮತ್ತು ಶಕ್ತಿ ಪ್ರೌಡ್ ಹಿಂದು ಎಂಬವರ ವಿರುದ್ಧ ಐಪಿಸಿ ಸೆಕ್ಷನ್ 505(2) ಮತ್ತು ಐಟಿ ಕಾಯಿದೆಯ ಸೆಕ್ಷನ್ 66(ಡಿ) ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಮಧು ಕೀಶ್ವರ್ ಅವರು ಜೆಎನ್‍ಯು ಹಳೆ ವಿದ್ಯಾರ್ಥಿನಿಯಾಗಿದ್ದು ಪ್ರಧಾನಿ ನರೇಂದ್ರ ಮೋದಿಯ ಬೆಂಬಲಿಗರಾಗಿದ್ದಾರೆ ಹಾಗೂ "ಮೋದಿ, ಮುಸ್ಲಿಮ್ಸ್ ಎಂಡ್ ಮೀಡಿಯಾ: ವಾಯ್ಸಸ್ ಫ್ರಮ್ ನರೇಂದ್ರ ಮೋದೀಸ್ ಗುಜರಾತ್" ಎಂಬ ಕೃತಿಯನ್ನೂ ಬರೆದಿದ್ದಾರಲ್ಲದೆ ಮುಸ್ಲಿಮರ ಬಗ್ಗೆ ಪ್ರಚೋದನಾತ್ಮಕ ಪೋಸ್ಟ್‍ಗಳನ್ನು ಮಾಡುತ್ತಿರುತ್ತಾರೆ. ಆಕೆಯ ಹಲವು ಪೋಸ್ಟ್ ಗಳು ಸುಳ್ಳು ಎಂದು ಸತ್ಯಶೋಧನಾ ವೆಬ್‍ಸೈಟ್‍ಗಳು ಪತ್ತೆಹಚ್ಚಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News