ಲೋಕಸಭಾ ಅಧಿವೇಶನದಿಂದ ನಾಲ್ವರು ಕಾಂಗ್ರೆಸ್‌ ಸಂಸದರ ಅಮಾನತು

Update: 2022-07-25 11:16 GMT

ಹೊಸದಿಲ್ಲಿ: ಬೆಲೆ ಏರಿಕೆ ವಿರೋಧಿಸಿ ಸದನದೊಳಗೆ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ ನಾಲ್ವರು ಕಾಂಗ್ರೆಸ್ ಸಂಸದರನ್ನು ಲೋಕಸಭೆಯಿಂದ ಇಡೀ ಅಧಿವೇಶನಕ್ಕೆ ಅಮಾನತು ಮಾಡಲಾಗಿದೆ. ಸ್ಪೀಕರ್ ಓಂ ಬಿರ್ಲಾ ಅವರು ಪ್ರತಿಭಟನೆ ನಡೆಸಲು ಬಯಸಿದರೆ ಸದನದ ಹೊರಗೆ ಭಿತ್ತಿಪತ್ರ ಹಿಡಿದು ಪ್ರತಿಭಟಿಸುವಂತೆ ಈ ಹಿಂದೆ ಎಚ್ಚರಿಕೆ ನೀಡಿದ್ದರು.

ಮಾಣಿಕಂ ಟ್ಯಾಗೋರ್, ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಟಿಎನ್ ಪ್ರತಾಪನ್ ಅಮಾನತುಗೊಂಡಿರುವ ಕಾಂಗ್ರೆಸ್ ಸಂಸದರಾಗಿದ್ದಾರೆ.

ಪ್ರತಿಪಕ್ಷ ಸಂಸದರ ಪ್ರತಿಭಟನೆಯಿಂದ ಅಸಮಾಧಾನಗೊಂಡ ಲೋಕಸಭಾ ಸ್ಪೀಕರ್, ಮಧ್ಯಾಹ್ನ 3 ಗಂಟೆಯ ನಂತರ ಚರ್ಚೆಗೆ ಸಿದ್ಧರಿನಿದ್ದೇನೆ, ಆದರೆ ಸದನದೊಳಗೆ ಯಾವುದೇ ಪ್ಲಕಾರ್ಡ್ ಪ್ರತಿಭಟನೆಯನ್ನು ಸಹಿಸುವುದಿಲ್ಲ ಎಂದು ವಿರೋಧ ಪಕ್ಷದ ಸಂಸದರಿಗೆ ಎಚ್ಚರಿಕೆ ನೀಡಿದ್ದರು.

ಮಧ್ಯಾಹ್ನ 3 ಗಂಟೆಯ ನಂತರ ಅಧಿವೇಶನ ಪುನರಾರಂಭಗೊಂಡಾಗ ವಿರೋಧ ಪಕ್ಷದ ಸಂಸದರು ಭಿತ್ತಿಪತ್ರಗಳೊಂದಿಗೆ ಮರಳಿದ್ದರು.‌ ಇದನ್ನು ಕಂಡು ಅಸಮಾಧಾನಗೊಂಡ ಸ್ಪೀಕರ್‌ "ನೀವು ಫಲಕಗಳನ್ನು ತೋರಿಸಲು ಬಯಸಿದರೆ, ಸದನದ ಹೊರಗೆ ಮಾಡಿ, ನಾನು ಚರ್ಚೆಗೆ ಸಿದ್ಧನಿದ್ದೇನೆ, ಆದರೆ ನನ್ನ ಸಹೃದಯತೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ" ಎಂದು  ಹೇಳಿದರು. ಬಳಿಕ ಕಲಾಪವನ್ನು ನಾಳೆಗೆ ಮುಂದೂಡಿದರು.

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಪ್ರತಿಪಕ್ಷಗಳ ಸಂಸದರ ವರ್ತನೆಯನ್ನು ಖಂಡಿಸಿ, ಕಲಾಪ ಸುಗಮವಾಗಿ ನಡೆಯಲು ಮತ್ತೊಮ್ಮೆ ಸದನದೊಳಗೆ ಫಲಕಗಳನ್ನು ತಂದ ಸಂಸದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್‌ಗೆ ಮನವಿ ಮಾಡಿದರು.

ಭಿತ್ತಿಪತ್ರಗಳು ಮತ್ತು ಬ್ಯಾನರ್‌ಗಳನ್ನು ಹಿಡಿದು, ವಿರೋಧ ಪಕ್ಷದ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿಗೆ ಬಂದು ಹೆಚ್ಚುತ್ತಿರುವ ಹಣದುಬ್ಬರ ಮತ್ತು ಸರಕು ಮತ್ತು ಸೇವಾ ತೆರಿಗೆ ಅಥವಾ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಹೆಚ್ಚಳದ ಬಗ್ಗೆ ತಮ್ಮ ಕಾಳಜಿಯನ್ನು ಪರಿಹರಿಸಬೇಕೆಂದು ಒತ್ತಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News