×
Ad

ಸುಸಜ್ಜಿತ ಬಸ್‌ನಿಲ್ದಾಣಕ್ಕಾಗಿ ಕಾಳಾವರ ಗ್ರಾಮಸ್ಥರ ಧರಣಿ

Update: 2022-07-25 17:54 IST

ಕುಂದಾಪುರ : ತಾಲೂಕಿನ ಕೋಟೇಶ್ವರದಿಂದ ಹಾಲಾಡಿ ಸಂಪರ್ಕಿಸುವ ರಾಜ್ಯ ಹೆದ್ದಾರಿ ನಡುವಿನ ಕಾಳಾವರ ಎಂಬಲ್ಲಿ ಈ ಹಿಂದೆ ಇದ್ದ ಸ್ಥಳದಲ್ಲಿ ಸುಸಜ್ಜಿತ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಿಸಬೇಕು. ಅಲ್ಲಿಯವರೆಗೆ ಈಗಿನ ತಾತ್ಕಾಲಿಕ ಬಸ್ ನಿಲ್ದಾಣ ತೆರವು ಮಾಡಬಾರದೆಂದು ಆಗ್ರಹಿಸಿ ಸೋಮವಾರ ಕಾಳಾವರದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಕಾಳಾವರ ಸರ್ಕಲ್‌ನಲ್ಲಿ ರಸ್ತೆ ಅಗಲೀಕರಣದ ವೇಳೆ ಮೊದಲಿದ್ದ ಬಸ್ ನಿಲ್ದಾಣವನ್ನು ತೆರವು ಮಾಡಲಾಗಿತ್ತು. ಇದರಿಂದಾಗಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪ್ರತಿದಿನ ತುಂಬಾ ಪರದಾಡುವಂತಾಗಿತ್ತು. ಗ್ರಾಪಂ ಈ ಹಿಂದೆ ನಿರ್ಣಯಿಸಿದಂತೆ ಸ್ಥಳೀಯ ಸಾರ್ವಜನಿಕರ ಸಭೆ ಕರೆದು ಮೊದಲಿದ್ದ ಸ್ಥಳದಲ್ಲಿ ಸ್ಥಳ ಪರಿಶೀಲನೆ ಮಾಡಿ ಬಸ್ ನಿಲ್ದಾಣವನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರೂ, ಇದುವರೆಗೂ ನಿರ್ಮಿಸಿಕೊಟ್ಟಿರಲಿಲ್ಲ.  

ಮಳೆಗಾಲದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆ ಯಾಗುವುದನ್ನು ಮನಗೊಂಡು ಗ್ರಾಮಸ್ಥರು ತಾತ್ಕಾಲಿಕ ಬಸ್ ನಿಲ್ದಾಣವನ್ನು ನಿರ್ಮಿಸಿದ್ದು. ಇದರಿಂದಾಗಿ ಕಾಳಾವಾರ, ಅಸೋಡು, ವಕ್ವಾಡಿ ಗ್ರಾಮಸ್ಥರಿಗೆ ಅನುಕೂಲವಾಗುತ್ತಿತ್ತು. ಆದರೆ ಈ ತಾತ್ಕಾಲಿಕ ಬಸ್ ತಂಗುದಾಣವನ್ನು ತೆರವು ಮಾಡುವ ಬಗ್ಗೆ ಈಗ ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾಗಿದೆ.

ಜನರ ಬೇಡಿಕೆ: ಬಸ್ ನಿಲ್ದಾಣವನ್ನು ಸಮೀಪದ ಬಾರ್ ಆಂಡ್ ರೆಸ್ಟೋರೆಂಟ್ ಎದುರು ನಿರ್ಮಿಸುವುದಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಳಾವರ ಸರ್ಕಲ್ ಬಳಿ ಮೊದಲಿದ್ದ ಸ್ಥಳದ ಹತ್ತಿರವೇ ಸುಸಜ್ಜಿತ ಬಸ್ ತಂಗುದಾಣವನ್ನು ನಿರ್ಮಿಸಲು ಸಾರ್ವಜನಿಕರು ಆಗ್ರಹಿಸಿ ದ್ದಲ್ಲದೆ ಆ ತನಕ ಈಗಿರುವ ತಾತ್ಕಾಲಿಕ ಬಸ್ ತಂಗುದಾಣವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕೂ ತೆರವುಗೊಳಿಸ ಬಾರದು ಎಂದು ಕಾಳಾವರ, ಅಸೋಡು, ವಕ್ವಾಡಿ ಗ್ರಾಮಸ್ಥರು ಕೋರಿದರು. 

ಈ ವೇಳೆ ಸಾಮಾಜಿಕ ಕಾರ್ಯಕರ್ತರಾದ ಸುಧೀರ್ ಜಿ. ಕಾಳಾವರ, ಸತೀಶ್ ಕಾಂಚನ್ ಕಾಳಾವರ, ರಾಘವೇಂದ್ರ ಬಿ. ಅಸೋಡು, ರಘುರಾಮ, ಮೀನಾ ಕಾಳಾವರ, ರಾಜೀವಿ, ಜಯಲಕ್ಷ್ಮೀ, ಪಾರ್ವತಿ ಮೊದಲಾದ ವರು ಉಪಸ್ಥಿತರಿದ್ದರು. 

ಗ್ರಾಪಂ ಎದುರು ಧರಣಿ: ಬಸ್ ಪ್ರಯಾಣಿಕರ ತಂಗುದಾಣ ವಿಚಾರದಲ್ಲಿ ಗ್ರಾಮಸ್ಥರು ಸೋಮವಾರ ಬೆಳಿಗ್ಗೆ ಕಾಳಾವರ ಸರ್ಕಲ್ ಬಳಿ ತಾತ್ಕಾಲಿಕ ಬಸ್ ನಿಲ್ದಾಣದ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದು ಸ್ಥಳಕ್ಕೆ ಗ್ರಾಪಂಗೆ  ಸಂಬಂಧಪಟ್ಟ ಯಾರೊಬ್ಬರೂ ಬಾರದಿದ್ದಾಗ ಅಲ್ಲಿಂದ ಕಾಳಾವರ ಗ್ರಾ.ಪಂ ತನಕ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಲಾಯಿತು. ಅಲ್ಲಿಯೂ ಮನವಿ ಸ್ವೀಕರಿಸಲು ಯಾವೊಬ್ಬ ಜನಪ್ರತಿನಿಧಿ, ಪಿಡಿಓ ಬಾರದ್ದನ್ನು ಕಂಡು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಪಿಡಿಓ ಬಂದು ಮನವಿ ಸ್ವೀಕರಿಸುವ ತನಕ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಕೆಲ ಗಂಟೆಗಳ ಬಳಿಕ ಸ್ಥಳಕ್ಕೆ ಬಂದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪಾಂಡುರಂಗ ಶೇಟ್, ಗ್ರಾಮಸ್ಥರ ಮನವಿ ಸ್ವೀಕರಿಸಿದರು.

"ಬಾರ್ ಸಮೀಪ ಬಸ್ ನಿಲ್ದಾಣ ಮಾಡಿದರೆ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು ನಿಲ್ಲಲು ಕಷ್ಟವಾಗಲಿದೆ. ಮೊದಲು ಇದ್ದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಮಾಡಿಕೊಡಬೇಕು. ಬಡವರ ಮನವಿಗೆ ಗ್ರಾಪಂ ಸ್ಪಂದನೆ ನೀಡದಿರುವುದು ದುರಂತ. ನಮ್ಮ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ".

-ಸಾಕು, ಸ್ಥಳೀಯ ಮಹಿಳೆ.

"ಬಸ್ ತಂಗುದಾಣಕ್ಕೆ ಸ್ಥಳ ಮಹಜರು ಮಾಡಿ ೮ ತಿಂಗಳಾಗಿದೆ. ಕೇಳಿದರೆ ಇಂದು ನಾಳೆ ಎಂಬ ಹಾರಿಕೆ ಉತ್ತರ ನೀಡುತ್ತಿರುವುದರಿಂದ ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು ಪ್ರತಿಭಟನೆ ಮಾಡಲಾಗಿದೆ. ಆದರೆ ಮನವಿ ಸ್ವೀಕರಿಸಲು ಕೂಡ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಬಾರದೆ ನಮ್ಮನ್ನು ಗಂಟೆಗಟ್ಟಲೇ ಕಾಯಿಸಿದ್ದಾರೆ". 

- ಸತೀಶ್ ಕಾಂಚನ್ ಕಾಳಾವರ, ಸಾಮಾಜಿಕ ಕಾರ್ಯಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News