×
Ad

ಕಟಪಾಡಿ ಬಳಿ ಗಾಳಕ್ಕೆ ಸಿಕ್ಕ ಎರಡು ಬೃಹತ್ ಮೀನುಗಳು!

Update: 2022-07-25 19:05 IST

ಉಡುಪಿ: ಉದ್ಯಾವರದ ಹವ್ಯಾಸಿ ಮೀನುಗಾರರ ಗಾಳಕ್ಕೆ ನಿನ್ನೆ ಭರ್ಜರಿ ಬೇಟೆ ದೊರಕಿದೆ. ಕಟಪಾಡಿ ಸಮೀಪದ ಪುಟ್ಟದ್ವೀಪ ಕಟಪಾಡಿ ಪಾರ್ ಬಳಿ ಅರಬಿ ಸಮುದ್ರದಲ್ಲಿ ಗಾಳ ಹಾಕಿ ಮೀನು ಹಿಡಿಯುತಿದ್ದ ನಾಗೇಶ್ ಉದ್ಯಾವರ ಇವರ ಗಾಳಕ್ಕೆ 22ಕೆ.ಜಿ ಹಾಗೂ 12 ಕೆ.ಜಿ.ತೂಕದ ಮೀನುಗಳು ಸಿಕ್ಕಿ ಬಿದ್ದಿವೆ.

ಉದ್ಯಾವರದಲ್ಲಿ ಕೇಬಲ್ ಆಪರೇಟರ್ ಆಗಿರುವ ನಾಗೇಶ್ ಉದ್ಯಾವರ ಹವ್ಯಾಸಿ ಮೀನುಗಾರ. ವಾರಕ್ಕೊಮ್ಮೆ ಸಣ್ಣ ದೋಣಿಯಲ್ಲಿ ಸ್ನೇಹಿತರೊಂದಿಗೆ ಕಟಪಾಡಿ ಪಾರ್ ಆಸುಪಾಸು ಸಮುದ್ರದಲ್ಲಿ  ಮೀನುಗಾರಿಕೆ ನಡೆಸುವ ಇವರ ಗಾಳಕ್ಕೆ ನಿನ್ನೆ ಬೆಳಗ್ಗೆ ಬಂಪರ್ ಮೀನುಗಳು ಸಿಕ್ಕಿವೆ.

ಎಂದಿನಂತೆ ನಿನ್ನೆ ಬೆಳಗ್ಗೆಯೂ ತಾನು ಇಬ್ಬರು ಸ್ನೇಹಿತರೊಂದಿಗೆ ಗಾಳ ಹಾಕಿ ಕಾಯುತಿದ್ದಾಗ ಮೊದಲು 22ಕೆ.ಜಿ.ತೂಕದ ಮುರು ಮೀನು ಸಿಕ್ಕಿದ್ದು, ಮತ್ತೆ ಪ್ರಯತ್ನ ಮುಂದುವರಿಸಿದಾಗ 12 ಕೆ.ಜಿ.ತೂಕದ ಕೊಕ್ಕರ್ ಮೀನು ಸಿಕ್ಕಿ ಹಾಕಿಕೊಂಡಿತು ಎಂದು ನಾಗೇಶ್ ಉದ್ಯಾವರ ತಿಳಿಸಿದರು. ನಾನು ಇಷ್ಟು ದೊಡ್ಡ ಗಾತ್ರದ ಮುರು ಹಾಗೂ ಕೊಕ್ಕರ್ ಮೀನುಗಳನ್ನು ನೋಡಿದ್ದು ಇದೇ ಮೊದಲು ಎಂದವರು ತಿಳಿಸಿದರು.

ಅರಬಿ ಸಮುದ್ರದಲ್ಲಿ ಮೀನುಗಾರರ ಬಲೆಗೆ ಸಾಮಾನ್ಯವಾಗಿ ಬೀಳುವ ಮೀನುಗಳು ಇವಾಗಿದ್ದು, ಮೀನು ಪ್ರಿಯರು ಇವುಗಳನ್ನು ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಆದರೆ ನಾಗೇಶ್ ಹಿಡಿದ ಮೀನುಗಳು ಮಾತ್ರ ತಮ್ಮ ಗಾತ್ರದ ಮೂಲಕ ಗಮನ ಸೆಳೆದವು. ಈ ಮೀನುಗಳನ್ನು ಸಾಕಷ್ಟು ಮಂದಿ ಕುತೂಹಲ ದಿಂದ ವೀಕ್ಷಿಸಿದ್ದಾರೆ. ನಾಗೇಶ್ ಮತ್ತು ಸ್ನೇಹಿತರು ಮೀನು ಹಿಡಿದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗಿವೆ.

ಇಂದು ಸಹ ಅದೇ ಜಾಗದಲ್ಲಿ ತನಗೆ ಐದಾರು ಮೀನುಗಳು ಗಾಳಕ್ಕೆ ಸಿಕ್ಕಿದ್ದು, ಅವೆಲ್ಲ ಐದಾರು ಕೆ.ಜಿ.ಮಾತ್ರ ತೂಗುತಿದ್ದವು ಎಂದು ನಾಗೇಶ್ ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News