×
Ad

ಉಡುಪಿ ಜಿಲ್ಲೆಯಲ್ಲಿ ಏರುಗತಿಯಲ್ಲಿ ಇಲಿಜ್ವರ: ಡಾ.ನಾಗರತ್ನ

Update: 2022-07-25 20:43 IST
ಸಾಂದರ್ಭಿಕ ಚಿತ್ರ

ಉಡುಪಿ, ಜು.25: ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಇಲಿಜ್ವರ ಜಿಲ್ಲೆಯಾದ್ಯಂತ ವ್ಯಾಪಿಸಲು ಪ್ರಾರಂಭಿಸಿದ್ದು, ಈ ವರ್ಷ ಇದುವರೆಗೆ 95 ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ನಾಗರತ್ನ ತಿಳಿಸಿದ್ದಾರೆ.

ಈ ವರ್ಷ ಇದುವರೆಗೆ ಸುಮಾರು ನಾಲ್ಕು ಸಾವಿರ ಮಂದಿಯನ್ನು ಪರೀಕ್ಷೆಗೊಳಪಡಿಸಿದ್ದು, ಇದುವರೆಗೆ 95ರಷ್ಟು ಪಾಸಿಟಿವ್ ಕೇಸುಗಳು ಪತ್ತೆಯಾಗಿವೆ ಎಂದವರು ಹೇಳಿದರು. ಪ್ರತಿವರ್ಷ ಸುಮಾರು 300ರಿಂದ 350 ಮಂದಿಯಲ್ಲಿ ಈ ರೋಗ ಪತ್ತೆಯಾಗುತ್ತದೆ ಎಂದವರು ತಿಳಿಸಿದರು.

2019ರಲ್ಲಿ 6851 ಮಂದಿಯನ್ನು ಇಲಿಜ್ವರಕ್ಕಾಗಿ ಪರೀಕ್ಷೆಗೊಳಪಡಿಸಿದಾಗ ಇವರಲ್ಲಿ 344 ಮಂದಿಯಲ್ಲಿ ರೋಗ ಪತ್ತೆಯಾಗಿತ್ತು. ಅದೇ ರೀತಿ 2020ರಲ್ಲಿ  5100-319, 2021ರಲ್ಲಿ 6005-354 ಮಂದಿಯಲ್ಲಿ ಪತ್ತೆಯಾಗಿತ್ತು. ಈ ವರ್ಷ 95 ಮಂದಿಯಲ್ಲಿ ರೋಗ ಪತ್ತೆಯಾದರೂ ಈವರೆಗೆ ಯಾರೂ ಇದಕ್ಕೆ ಬಲಿಯಾಗಿಲ್ಲ. ಎಲ್ಲರೂ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾರೆ ಎಂದರು.

ಈವರ್ಷ ಜನವರಿಯಲ್ಲಿ 11, ಫೆಬ್ರವರಿಯಲ್ಲಿ 10, ಮಾರ್ಚ್‌ನಲ್ಲಿ 9, ಎಪ್ರಿಲ್‌ನಲ್ಲಿ 6, ಮೇಯಲ್ಲಿ 15, ಜೂನ್ 34 ಹಾಗೂ ಜುಲೈನಲ್ಲಿ ಇದುವರೆಗೆ 10 ಕೇಸುಗಳು ದೃಢಪಟ್ಟಿವೆ. ಇವುಗಳಲ್ಲಿ ಉಡುಪಿಯಲ್ಲಿ 28, ಕುಂದಾಪುರದಲ್ಲಿ 49 ಹಾಗೂ ಕಾರ್ಕಳದಲ್ಲಿ 18 ಕೇಸುಗಳು ಪತ್ತೆಯಾಗಿವೆ ಎಂದರು.

ಇಲಿ ಜ್ವರಕ್ಕೆ ಬೇಕಾದ ಎಲ್ಲಾ ಔಷಧಗಳು ಜಿಲ್ಲೆಯಲ್ಲಿ ದಾಸ್ತಾನಿದ್ದು, ಜನರು  ಜ್ವರ ಕಾಣಿಸಿಕೊಂಡಾಕ್ಷಣ ಪರೀಕೆಗೊಳಗಾಗಬೇಕು. ಪರೀಕ್ಷೆಯಿಂದ ಮಾತ್ರ ಯಾವುದೇ ರೋಗವನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಇದರ ಪರೀಕ್ಷೆ ಉಡುಪಿ ಜಿಲ್ಲಾಸ್ಪತ್ರೆಯ ಪ್ರಯೋಗಾಲಯ ಹಾಗೂ ಕೆಎಂಸಿ ಪ್ರಯೋಗಾಲಯ ದಲ್ಲಿ ಮಾತ್ರ ಸಾಧ್ಯವಿದೆ ಎಂದವರು ತಿಳಿಸಿದರು.

ಮಳೆಗಾಲದಲ್ಲಿ ಇಲಿಜ್ವರ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಜ್ವರ ಕಂಡುಬಂದ ತಕ್ಷಣ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆದರೆ ನಾಲ್ಕೈದು ದಿನಗಳಲ್ಲಿ ಇದು ಸಂಪೂರ್ಣ ಗುಣವಾಗುತ್ತದೆ  ಎಂದು ಡಾ.ನಾಗರತ್ನ ತಿಳಿಸಿದರು.

ಮಂಕಿಪಾಕ್ಸ್: ಮಂಕಿಪಾಕ್ಸ್ ಬಗ್ಗೆ ಜಿಲ್ಲೆ ಎಚ್ಚರವಹಿಸಿದ್ದು, ವಿದೇಶಗಳಿಂದ ಬರುವ ಪ್ರಯಾಣಿಕರ ಡೇಟಾವನ್ನು ವಿಮಾನ ನಿಲ್ದಾಣಗಳಿಂದಲೇ ಸಂಗ್ರಹಿಸಿ ಅವರ ಮೇಲೆ ನಿಗಾ ವಹಿಸಲಾಗುತ್ತದೆ. ಅವರನ್ನು 21ದಿನಗಳ ಕಾಲ ನಿಗಾದಲ್ಲಿರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.

ಕೇರಳದಲ್ಲಿ ಮಂಕಿ ಪಾಕ್ಸ್ ಪತ್ತೆಯಾದ ಒಬ್ಬ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಬಂದಿದ್ದು, ಆತನೊಂದಿಗೆ ಅದೇ ವಿಮಾನದಲ್ಲಿ ಪ್ರಯಾಣಿಸಿದ ಜಿಲ್ಲೆಯವರನ್ನು ಗುರುತಿಸಿ ನಿಗಾದಲ್ಲಿರಿಸಲಾಗಿದೆ ಎಂದರು. ಸದ್ಯ ಯಾರಲ್ಲೂ ಯಾವುದೇ ರೋಗ ಲಕ್ಷಣ ಕಂಡುಬಂದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News