ಪ್ರಾಕೃತಿಕ ವಿಕೋಪದಿಂದ 166.29 ಕೋಟಿ ರೂ. ಹಾನಿಯ ಅಂದಾಜು: ಉಡುಪಿ ಡಿಸಿ ಕೂರ್ಮಾರಾವ್
ಉಡುಪಿ : ಈ ಬಾರಿಯ ಗಾಳಿ-ಮಳೆ, ಪ್ರಾಕೃತಿಕ ವಿಕೋಪಗಳಿಂದ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಗೆ ಇದುವರೆಗೆ ಒಟ್ಟು 166.29 ಕೋಟಿ ರೂ.ನಷ್ಟದ ಅಂದಾಜು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಪತ್ರಕರ್ತರು ಮಳೆಹಾನಿಯ ಕುರಿತು ಪ್ರಶ್ನಿಸಿದಾಗ, ಜಿಲ್ಲೆಯ ನಷ್ಟದ ಅಂಕಿಅಂಶಗಳನ್ನು ನೀಡಿದರು. ಈ ಬಾರಿ ಜಿಲ್ಲೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಬೈಂದೂರು ಮತ್ತು ಕುಂದಾಪುರಗಳಲ್ಲಿ ಎರಡು ಜಾನುವಾರುಗಳು ಮೃತಪಟ್ಟಿವೆ. ಸತತ ಮಳೆಯ ಹಿನ್ನೆಲೆಯಲ್ಲಿ ಒಟ್ಟು 25 ಮಂದಿಯನ್ನು (ಆರೂರು-15, ವಡ್ಡರ್ಸೆ-5, ಗಂಗೊಳ್ಳಿ-5) ಮಂದಿಯನ್ನು ಸ್ಥಳಾಂತರಿಸಲಾಗಿತ್ತು ಎಂದರು.
ಜಿಲ್ಲೆಯಲ್ಲಿ ಇದುವರೆಗೆ 41 ಮನೆಗಳು ಸಂಪೂರ್ಣ ಹಾನಿಗೊಂಡಿವೆ. 265 ಭಾಗಶ: ಹಾನಿಗೊಳಗಾಗಿವೆ. 41.597 ಹೆಕ್ಟೇರ್ ಪ್ರದೇಶದ ಕೃಷಿ ಹಾನಿಗೊಂಡಿವೆ. ಅದೇ ರೀತಿ 8.77 ಹೆಕ್ಟೇರ್ ತೋಟಗಾರಿಕಾ ಪ್ರದೇಶವೂ ಹಾನಿಗೊಂಡಿವೆ. ಒಟ್ಟು 1132.98 ಕಿ.ಮೀ. ಪಿಡಬ್ಲ್ಯುಡಿ, ಪಂ.ರಾಜ್ ಇಲಾಖೆ, ನಗರ ಸ್ಥಳೀಯ ಸಂಸ್ಥೆಯ ರಸ್ತೆಗಳು ಹಾನಿಗೊಳಗಾಗಿವೆ.
65 ಸೇತುವೆ ಹಾಗೂ ಕಲ್ವರ್ಟ್‌ಗಳು ಹಾನಿಗೊಂಡಿದ್ದರೆ, 180 ಶಾಲೆಗಳು ಮತ್ತು 59 ಅಂಗನವಾಡಿಗಳು ಮಳೆಯಿಂದ ಹಾನಿಗೊಂಡಿವೆ. ಕೃಷಿ ಹಾನಿ 3.39 ಕೋಟಿ ರೂ.ಗಳಾದರೆ, ಬೆಳೆಹಾನಿಯಿಂದ 1.16 ಲಕ್ಷರೂ. ಹಾನಿಗೊಂಡಿವೆ ಎಂದು ಅವರು ತಿಳಿಸಿದರು.
ಇಲಾಖಾವಾರು ನಷ್ಟಗಳಲ್ಲಿ ಪಂ.ರಾಜ್ ಇಲಾಖೆಗೆ ಅತ್ಯಧಿಕ 108.94 ಕೋಟಿ ರೂ.ಸೊತ್ತು ಹಾನಿಗೊಳಗಾದರೆ, ಒಂದು ಸೇತುವೆ ಹಾನಿಯಾಗಿ ಮೂರು ಕೋಟಿ ನಷ್ಟವಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಗೆ ೭.೪೨ ಕೋಟಿ ರೂ., ಲೋಕೋಪಯೊಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗಳಿಗೆ ೩೧ ಕೋಟಿ ರೂ., ಮೆಸ್ಕಾಂಗೆ ಸುಮಾರು ೫ ಕೋಟಿರೂ. ನಷ್ಟದ ಅಂದಾಜು ಮಾಡಲಾಗಿದೆ.
1890 ಮೀ. ಕಡಲ್ಕೊರೆತ: ಜಿಲ್ಲೆಯಲ್ಲಿ ಈ ಮುಂಗಾರಿನ ಸುಮಾರು ೪೫ ದಿನಗಳಲ್ಲಿ ಕಡಲ್ಕೊರೆತದಿಂದಾಗಿ ಸುಮಾರು ೧೮೯೦ಮೀ. ಉದ್ದದ ಭೂಭಾಗ ಸಮುದ್ರದ ಪಾಲಾಗಿದೆ. ಬೈಂದೂರು ತಾಲೂಕಿನ ಮರವಂತೆಯಲ್ಲಿ ೪೦೦ಮೀ., ಕಿರಿಮಂಜೇಶ್ವರದ ಆದ್ರಗೋಳಿ ಸಮೀಪ ೨೦೦ಮೀ., ಕುಂದಾಪುರ ಗುಜ್ಜಾಡಿ ಹೊಸಾಡು ಗ್ರಾಮದ ಕಂಚುಗೋಡಿನಲ್ಲಿ ೨೫೦ಮೀ., ಕಾಪು ತಾಲೂಕಿನ ಮುಳೂರಿನಲಿ ೨೦೦ಮೀ., ಪಡುಬಿದ್ರಿಯ ನಡಿಪಟಟ್ನಲ್ಲಿ ೨೭೦ ಮೀ., ಕೈಪುಂಜಾಲಿನಲ್ಲಿ ೨೪೦ಮೀ., ಕೋಟ ಪಡುಕೆರೆಯಲ್ಲಿ ೧೩೦ಮೀ. ಹಾಗೂ ಉಡುಪಿ ತಾಲೂಕು ಕುತ್ಪಾಡಿ ಕಡಲ ತೀರದಲ್ಲಿ ೨೦೦ಮೀ.ನಷ್ಟು ಕಡಲ್ಕೊರೆತ ಸಂಭವಿಸಿದೆ ಎಂದು ಮಾಹಿತಿ ತಿಳಿಸಿದೆ.