ಚುನಾವಣಾ ಕಾನೂನಿಗೆ ಆಯೋಗದಿಂದ ಹಲವು ತಿದ್ದುಪಡಿ; ಎಪಿಕ್ ಕಾರ್ಡ್‌ಗೆ ಆಧಾರ ಜೋಡಣೆಗೆ ಸೂಚನೆ
ಉಡುಪಿ : ಭಾರತದ ಚುನಾವಣಾ ಆಯೋಗ, ಚುನಾವಣಾ ಕಾನೂನು ಮತ್ತು ನಿಯಮಗಳಿಗೆ ನಾಲ್ಕು ಪ್ರಮುಖ ತಿದ್ದುಪಡಿಗಳನ್ನು ಮಾಡಿದೆ. ಇವುಗಳು ಆಗಸ್ಟ್ ಒಂದರಿಂದ ಜಾರಿಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಕುರ್ಮಾರಾವ್ ಎಂ. ಅವರು ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇವುಗಳಲ್ಲಿ ಪ್ರಮುಖವಾದುದು ಮತದಾರರ ಗುರುತು ಚೀಟಿಗೆ (ಎಪಿಕ್ ಕಾರ್ಡ್) ಆಧಾರ ಕಾರ್ಡ್‌ನ್ನು ಲಿಂಕ್ ಮಾಡುವುದು. ಮತದಾನದ ವೇಳೆ ಮತದಾರರ ಗುರುತನ್ನು ಖಚಿತಪಡಿಸಿಕೊಳ್ಳಲು ಈ ಜೋಡಣೆಗೆ ಸೂಚಿಸಲಾಗಿದೆ ಎಂದವರು ತಿಳಿಸಿದರು.
ಆದರೆ ಎಪಿಕ್ ಕಾರ್ಡ್‌ಗೆ ಆಧಾರ ಜೋಡಣೆ ಕಡ್ಡಾಯವಲ್ಲ. ಒಂದು ವೇಳೆ ಎಪಿಕ್ ಕಾರ್ಡ್‌ಗೆ ಮತದಾರನ ಆಧಾರ್ ಲಿಂಕ್ ಆಗದೇ ಇದ್ದರೂ ಆತನಿಗೆ ಮತದಾನ ನಿರಾಕರಿಸುವಂತಿಲ್ಲ. ಮತದಾರರ ಪಟ್ಟಿಗೆ ಆತನ ಹೆಸರನ್ನು ನೊಂದಾಯಿಸಲು ಸಹ ನಿರಾಕರಿಸುವಂತಿಲ್ಲ ಎಂದು ಡಿಸಿ ತಿಳಿಸಿದರು.
ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ನೊಂದಾಯಿಸಿಕೊಳ್ಳಲು ಇದುವರೆಗೆ ಪ್ರತಿ ವರ್ಷ ಇದ್ದ ಒಂದು ಅವಕಾಶವನ್ನು ಈಗ ನಾಲ್ಕು ಅವಕಾಶವಾಗಿ ಬದಲಾಯಿಸಲಾಗಿದೆ. ಇದರಂತೆ ಜ.1, ಎ.1, ಜುಲೈ1, ಅ.1ರಂದು ಮತದಾರರ ಪಟ್ಟಿಗೆ ನೊಂದಾಣಿ ಮಾಡಿಕೊಳ್ಳಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ವೀಣಾ ಉಪಸ್ಥಿತರಿದ್ದರು.