ಮಂಜೇಶ್ವರ: ಸಾಲದ ಸುಳಿಗೆ ಸಿಲುಕಿ ಮನೆ ಮಾರಾಟಕ್ಕೆ ಹೊರಟಿದ್ದ ವ್ಯಕ್ತಿಗೆ ಹೊಡೆಯಿತು ಬಂಪರ್‌ ಲಾಟರಿ.!

Update: 2022-07-26 15:39 GMT
Photo: Mahammad Bava/ TNIE

ಮಂಜೇಶ್ವರ: ಸಾಲದ ಸುಳಿಯಲ್ಲಿ ಸಿಲುಕಿ ತಮ್ಮ ಮನೆಯನ್ನು ಮಾರಾಟ ಮಾಡಲು ಹೊರಟಿದ್ದ ಪೈಂಟರ್‌ ಒಬ್ಬರಿಗೆ ಬರೋಬ್ಬರಿ ಒಂದು ಕೋಟಿ ಲಾಟರಿ ಹೊಡೆದಿದೆ.

 ಮಂಜೇಶ್ವರದ ಪಾವೂರ್‌ ನಿವಾಸಿಯಾಗಿರುವ ಮಹಮ್ಮದ್‌ ಬಾವಾ ಹಾಗೂ ಅವರ ಹೆಂಡತಿ ಆಮಿನಾ ಎಂಟು ತಿಂಗಳ ಹಿಂದೆ 2000 ಚದರ ಅಡಿಯ ಮನೆಯೊಂದನ್ನು ಕಳೆದ ಎಂಟು ತಿಂಗಳ ಹಿಂದೆ ನಿರ್ಮಿಸಿದ್ದರು. ಮನೆ ನಿರ್ಮಾಣದ ವೇಳೆ 10 ಲಕ್ಷ ರುಪಾಯಿಗಳನ್ನು ಬ್ಯಾಂಕಿನಿಂದಲೂ 20 ಲಕ್ಷ ರುಪಾಯಿ ಪರಿಚಿತರಿಂದಲೂ ಸಾಲವಾಗಿ ಪಡೆದುಕೊಂಡಿದ್ದರು. ಬಳಿಕ ಮಗಳ ಮದುವೆಯ ಸಂದರ್ಭದಲ್ಲೂ ಸಾಲ ಮಾಡಿದ್ದರು. ಆದರೆ, ಅಂದುಕೊಂಡಂತೆ ಕಾರ್ಯಗಳು ನಡೆಯದೆ ಸಾಲ ಹಿಂತಿರುಗಿಸಲು ದಂಪತಿ ಹೆಣಗಾಡಿದೆ.

ಸಾಲಗಾರರ ಒತ್ತಡ ಹೆಚ್ಚುತ್ತಿದ್ದಂತೆ, ತಾವು ಪ್ರೀತಿಯಿಂದ ಕಟ್ಟಿಸಿದ ಮನೆಯನ್ನು ಮಾರಿ ಸಾಲ ತೀರಿಸಲು ದಂಪಂತಿ ಮುಂದಾಗಿತ್ತು. ಅದರಂತೆ ದಲ್ಲಾಳಿಯೋರ್ವರ ಮುಖಾಂತರ ಬಂದ ಗ್ರಾಹಕರೊಬ್ಬರು 40 ಲಕ್ಷಕ್ಕೆ ಮನೆ ಕೊಳ್ಳಲು ಒಪ್ಪಂದ ಮಾಡಿಕೊಂಡಿತ್ತು.

“ನನಗೆ 45 ಲಕ್ಷ ರುಪಾಯಿಗೆ ಮನೆ ಮಾರಾಟವಾಗಬೇಕಿತ್ತು. ಯಾಕೆಂದರೆ ಒಟ್ಟು ಸಾಲವೇ 45 ಲಕ್ಷ ಇತ್ತು. ಆದರೆ, ಮನೆಕೊಳ್ಳಲು ಬಂದ ದಲ್ಲಾಳಿ ಮತ್ತು ಗ್ರಾಹಕ 40 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದರು” ಎಂದು ಮನೆ ಮಾಲಿಕ ಮಹಮ್ಮದ್‌ ತಿಳಿಸಿದ್ದಾರೆ.

ಆದರೆ, ಟೋಕನ್‌ ಪಡೆಯುವ ಕೆಲವೇ ಗಂಟೆಗಳ ಮೊದಲು ಲಾಟರಿ ಬಂದಿರುವುದು ತಿಳಿದು ಬಂದಿದೆ. ಲಾಟರಿ ಹಣದಲ್ಲಿ ಸಾಲ ತೀರಿಸುವ ಸಲುವಾಗಿ ಮನೆ ಮಾರಾಟದ ಪ್ರಕ್ರಿಯೆಯನ್ನು ಅರ್ಧಕ್ಕೆ ನಿಲ್ಲಿಸಿ ತಮ್ಮ ಮನೆಯನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಎಲ್ಲಾ ತೆರಿಗೆಗಳ ಬಳಿಕ ಒಂದು ಕೋಟಿ ರುಪಾಯಿಯಲ್ಲಿ ಸುಮಾರು 63 ಲಕ್ಷದಷ್ಟು ಹಣ ಮಹಮ್ಮದ್‌ ಅವರಿಗೆ ಬರಲಿದೆ ಎಂದು ವರದಿಯಾಗಿದೆ.  

 ದಂಪತಿಗೆ ಐವರು ಮಕ್ಕಳು, ನಾಲ್ವರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಇಬ್ಬರು ಹಿರಿಯ ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಅವರ 22 ವರ್ಷದ ಮಗ ನಿಝಾಮುದ್ದೀನ್ ಮೂರು ವಾರಗಳ ಹಿಂದೆ ಕತಾರ್‌ನ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಇಬ್ಬರು ಕಿರಿಯ ಹೆಣ್ಣು ಮಕ್ಕಳು 12 ನೇ ತರಗತಿಯಲ್ಲಿ ಓದುತ್ತಿದ್ದಾರೆ. “ಕಳೆದ ನಾಲ್ಕು ತಿಂಗಳಿನಿಂದ ನಾವೆಲ್ಲರೂ ತುಂಬಾ ಒತ್ತಡದಲ್ಲಿದ್ದೆವು. ಕಡಿಮೆ ಆದಾಯ ಬಂದಿದ್ದರಿಂದ ಸಾಲ ತೀರಿಸಲು ಸಾಧ್ಯವಾಗಲಿಲ್ಲʼ’ ಎಂದು ಬಾವ ಹೇಳಿದರು.

ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆಯವರು ಮನೆ ಖರೀದಿದಾರರಿಗಾಗಿ ಕಾದು ಕುಳಿತಿದ್ದಾಗ ಬಾವ ಅಲ್ಲಿಂದ ಹೊರಟು ಪಟ್ಟಣಕ್ಕೆ ತೆರಳಿದ್ದರು. ಅವರು ಅಲ್ಲಿ ಕೇರಳ ಸರ್ಕಾರ ನಡೆಸುತ್ತಿರುವ ಫಿಫ್ಟಿ-ಫಿಫ್ಟಿ ಲಾಟರಿಯ ನಾಲ್ಕು ಟಿಕೆಟ್‌ಗಳನ್ನು ಖರೀದಿಸಿದರು. "ನಾನು ಕಳೆದ ನಾಲ್ಕು ತಿಂಗಳಿನಿಂದ ಅದೃಷ್ಟ ನನ್ನ ದುಃಖವನ್ನು ಕೊನೆಗೊಳಿಸುತ್ತದೆ ಎಂದು ಆಶಿಸುತ್ತಾ ಲಾಟರಿಗಳನ್ನು ಖರೀದಿಸುತ್ತಿದ್ದೇನೆ" ಎಂದು ಬಾವಾ ಹೇಳಿದರು. ಮಧ್ಯಾಹ್ನ 3 ಗಂಟೆಗೆ ಲಾಟರಿ ಡ್ರಾ ಆಗಿದ್ದು, ಜಾಕ್ ಪಾಟ್ ಹೊಡೆದಿರುವುದು ಬಾವ ಅವರಿಗೆ ತಿಳಿಯಿತು. ತೆರಿಗೆಯ ನಂತರ ಸುಮಾರು 63 ಲಕ್ಷ ರೂ ಅವರ ಕೈ ಸೇರಲಿದೆ. ಸಂಜೆ 5 ಗಂಟೆಗೆ, ರಿಯಲ್ ಎಸ್ಟೇಟ್ ಬ್ರೋಕರ್ ಮನೆ ಖರೀದಿಸಲು ಪಾರ್ಟಿಯೊಂದಿಗೆ ಮನೆಗೆ ಬಂದರಾದರೂ, ಮನೆಯನ್ನು ಬಾವಾ ಅವರು ಮಾರಾಟ ಮಾಡಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News