ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ನಾಳೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೋನಿಯಾ ಗಾಂಧಿಗೆ ಇಡಿ ಸೂಚನೆ

Update: 2022-07-26 15:53 GMT

ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮಂಗಳವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಆರು ಗಂಟೆಗಳ ಕಾಲ ವಿಚಾರಣೆ ನಡೆಸಿತು. ಅವರನ್ನು ಬುಧವಾರ ಮತ್ತೆ ಹಾಜರಾಗುವಂತೆ ಕೇಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಈ ನಡುವೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೋನಿಯಾ ಗಾಂಧಿಯವರಿಗೆ ಇಡಿ ಸಮನ್ಸ್ ನೀಡಿರುವುದನ್ನು ವಿರೋಧಿಸಿ ದಿಲ್ಲಿ ಪೊಲೀಸರು ಬಂಧಿಸಿದ ನಂತರ ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರನ್ನು ಕಿಂಗ್ಸ್‌ವೇ ಕ್ಯಾಂಪ್‌ನಿಂದ ಬಿಡುಗಡೆ ಮಾಡಲಾಗಿದೆ. ಮಲ್ಲಿಕಾರ್ಜುನ ಖರ್ಗೆ, ರಂಜೀತ್ ರಂಜನ್, ಕೆಸಿ ವೇಣುಗೋಪಾಲ್, ಮಾಣಿಕ್ಕಂ ಟ್ಯಾಗೋರ್, ಇಮ್ರಾನ್ ಪ್ರತಾಪಗರ್ಹಿ, ಕೆ ಸುರೇಶ್ ಸೇರಿದಂತೆ ಪ್ರಮುಖರನ್ನು ಬಂಧಿಸಲಾಗಿತ್ತು.

"ಸರ್ವಾಧಿಕಾರ" ಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ಸಂಸತ್ತಿನ ಒಳಗೆ ಚರ್ಚೆ ನಡೆಸಲು ಅವಕಾಶ ನೀಡುತ್ತಿಲ್ಲ ಮತ್ತು ಪ್ರತಿಭಟನೆಯ ಸಮಯದಲ್ಲಿ ನಾಯಕರನ್ನು ಬಂಧಿಸಲಾಯಿತು ಎಂದು ಕಿಡಿ ಕಾರಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್, "ಭಾರತ ಪೊಲೀಸ್ ರಾಜ್ಯ, ಮೋದಿ ಒಬ್ಬ ರಾಜ" ಎಂದು ಹೇಳಿದ್ದಾರೆ.

'ಸರ್ವಾಧಿಕಾರಿ' ಸರ್ಕಾರವು ಪೊಲೀಸ್, ಏಜೆನ್ಸಿಗಳ ಮೂಲಕ ವಿರೋಧವನ್ನು ಹತ್ತಿಕ್ಕಲು ಬಯಸುತ್ತದೆ: ಪ್ರಿಯಾಂಕಾ ಗಾಂಧಿ

ಸಂಸತ್ತಿನಲ್ಲಿ ಯಾವುದೇ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಸಾಧ್ಯವಿಲ್ಲ ಅಥವಾ ಬೀದಿಗಿಳಿದು ಜನರ ಧ್ವನಿ ಎತ್ತಲು ಸಾಧ್ಯವಾಗದ ಕಾರಣ ಬಿಜೆಪಿಯ ಸರ್ವಾಧಿಕಾರವು ಈಗ ಬಹಿರಂಗವಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮಂಗಳವಾರ ಹೇಳಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯವು ಎರಡನೇ ಬಾರಿಗೆ ಹಿನ್ನೆಲೆಯಲ್ಲಿ ಪ್ರಿಯಾಂಕ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News