×
Ad

ಚೆಸ್ ಒಲಿಂಪಿಯಾಡ್ ಪ್ರಚಾರ ಪೋಸ್ಟರ್ ಗಳಲ್ಲಿ ಪ್ರಧಾನಿ ಮೋದಿ ಫೋಟೊಗಳನ್ನು ಅಂಟಿಸಿದ ಬಿಜೆಪಿ ನಾಯಕ

Update: 2022-07-27 14:55 IST

Photo: Twitter/@AmarReddy
 

ಚೆನ್ನೈ: ಜುಲೈ 28ರಂದು ಮಹಾಬಲಿಪುರಂನಲ್ಲಿ ಆರಂಭಗೊಳ್ಳಲಿರುವ 44ನೇ ಚೆಸ್ ಒಲಿಂಪಿಯಾಡ್‍ಗೆ ಸರಕಾರ ನಡೆಸುತ್ತಿರುವ ಪ್ರಚಾರಾಭಿಯಾನದ ಅಂಗವಾಗಿ ಅಳವಡಿಸಲಾಗಿರುವ ಪೋಸ್ಟರ್‍ಗಳಲ್ಲಿ ಬಿಜೆಪಿ ನಾಯಕರೊಬ್ಬರು ಪ್ರಧಾನಿ ನರೇಂದ್ರ ಮೋದಿಯ ಭಾವಚಿತ್ರಗಳನ್ನು ಅಂಟಿಸಿದ್ದಾರೆ.

ಈ ಕುರಿತ ವೀಡಿಯೋ ಕ್ಲಿಪ್ ಒಂದನ್ನು ಪೋಸ್ಟರ್‍ಗಳನ್ನು ಅಂಟಿಸಿರುವ ತಮಿಳುನಾಡು ಬಿಜೆಪಿಯ ಕ್ರೀಡಾ ಮತ್ತು ಕೌಶಲ್ಯಾಭಿವೃದ್ಧಿ  ಘಟಕದ ಅಧ್ಯಕ್ಷ ಅಮರ್ ಪ್ರಸಾದ್ ರೆಡ್ಡಿ ತಮ್ಮ ಟ್ವಿಟ್ಟರ್ ಹ್ಯಾಂಡಲ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರ ಜೊತೆಗೆ ಇತರ ಇಬ್ಬರು ಮೋದಿ ಭಾವಚಿತ್ರಗಳನ್ನು ಪೋಸ್ಟರ್‍ಗಳ ಮೇಲೆ ಅಂಟಿಸುತ್ತಿರುವುದು ಕಾಣಿಸುತ್ತದೆ.

ಚೆಸ್ ಒಲಿಂಪಿಯಾಡ್‍ನ ಪ್ರಚಾರಾಭಿಯಾನ ಪೋಸ್ಟರ್‍ಗಳಲ್ಲಿ ಮೋದಿ ಅವರ ಭಾವಚಿತ್ರವನ್ನು ರಾಜ್ಯದ ಡಿಎಂಕೆ ಸರಕಾರ ಅಳವಡಿಸದೇ ಇರುವುದು ದೊಡ್ಡ ತಪ್ಪು ಎಂದು ರೆಡ್ಡಿ  ಹೇಳಿದ್ದಾರೆ. "ಇದೇನು ಡಿಎಂಕೆ ಪಕ್ಷದ ಕಾರ್ಯಕ್ರಮವಲ್ಲ, ಇದು ಸರಕಾರ ಪ್ರವರ್ತಿತ ಕಾರ್ಯಕ್ರಮ. ಪ್ರಧಾನಿಯ ಭಾವಚಿತ್ರ ಹಾಕಬೇಕು," ಎಂದು ಅವರು ಹೇಳಿದ್ದಾರೆ.

ಪಕ್ಷದ ಇತರ ಪದಾಧಿಕಾರಿಗಳೂ ಇದೇ ರೀತಿ ತಮಿಳುನಾಡಿನಾದ್ಯಂತ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಪ್ರಧಾನಿಯ ಭಾವಚಿತ್ರವನ್ನು ಪೋಸ್ಟರ್‍ಗಳಿಗೆ ಅಂಟಿಸಲು ಅನುಮತಿ ಪಡೆದಿಲ್ಲ ಎಂದು ಹೇಳಿದ ಅವರು, ಅದೇ ಸಮಯ ಪ್ರಧಾನಿಯ ಭಾವಚಿತ್ರ ಪ್ರಚಾರದ ಭಾಗವಾಗಬೇಕೇ ಬೇಡವೇ ಎಂದೂ ಮರುಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News