×
Ad

ಫಿಲಿಪ್ಪೀನ್ಸ್: 7.1 ತೀವ್ರತೆಯ ಭೂಕಂಪ‌

Update: 2022-07-27 23:54 IST

4 ಮಂದಿ ಮೃತ್ಯು; ಕಟ್ಟಡಗಳಿಗೆ ಹಾನಿ ಮನಿಲಾ, ಜು.27: ಫಿಲಿಪ್ಪೀನ್ಸ್ನಲ್ಲಿ ಬುಧವಾರ ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆ ದಾಖಲಿಸಿದ ಪ್ರಬಲ ಭೂಕಂಪ ಸಂಭವಿಸಿದ್ದು ಕನಿಷ್ಟ 4 ಮಂದಿ ಮೃತಪಟ್ಟಿದ್ದಾರೆ. ಹಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಉತ್ತರ ಫಿಲಿಪ್ಪೀನ್ಸ್ ನ ಲುಝೋನ್ ದ್ವೀಪದಲ್ಲಿ ಸಂಭವಿಸಿದ ಭೂಕಂಪನದಿಂದ ರಾಜಧಾನಿ ಮನಿಲಾದಲ್ಲೂ ನೆಲ ನಡುಗಿದ ಅನುಭವವಾಗಿದೆ. ಬೆಂಗ್ಬೆಟ್ ಪ್ರಾಂತದಲ್ಲಿ ಇಬ್ಬರು, ಅಬ್ರಾ ಪ್ರಾಂತದಲ್ಲಿ ಒಬ್ಬ ಹಾಗೂ ಸಮೀಪದ ನಗರದಲ್ಲಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿರುವುದಾಗಿ ಆಂತರಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಬೆಂಜಮಿನ್ ಅಬಾಲೊಸ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ಡೊಲೆರಸ್ ನಗರದ ಆಗ್ನೇಯಕ್ಕೆ ಸುಮಾರು 11 ಕಿ.ಮೀ ದೂರದಲ್ಲಿ, 10 ಕಿ.ಮೀ ಆಳದಲ್ಲಿ ಭೂಕಂಪ ಕೇಂದ್ರೀಕೃತವಾಗಿತ್ತು ಎಂದು ಅಮೆರಿಕದ ಭೂವೈಜ್ಞಾನಿಕ ಇಲಾಖೆಯ ಅಂಕಿಅಂಶ ತಿಳಿಸಿದೆ.
ತೀವ್ರ ಭೂಕಂಪದಿಂದ ವ್ಯಾಪಕ ಹಾನಿಯಾಗಿರುವ ಮಧ್ಯೆಯೇ, ಶೋಧ ಮತ್ತು ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾಕ್ರೋಸ್ ಜ್ಯೂನಿಯರ್ ಹೇಳಿದ್ದಾರೆ.

173 ಕಟ್ಟಡಗಳಿಗೆ ಹಾನಿಯಾಗಿದ್ದು 58 ಕಡೆ ಭೂಕುಸಿತ ಸಂಭವಿಸಿದೆ. ಒಟ್ಟು 60 ಮಂದಿ ಗಾಯಗೊಂಡಿದ್ದಾರೆ. ಅಬ್ರ ಪ್ರಾಂತದಲ್ಲಿ ಹೆಚ್ಚಿನ ನಾಶ ನಷ್ಟ ಸಂಭವಿಸಿದ್ದು 44 ಮಂದಿ ಗಾಯಗೊಂಡಿದ್ದಾರೆ. ಇಲ್ಲಿನ ಪ್ರಮುಖ ಆಸ್ಪತ್ರೆಯೊಂದರ ಒಂದು ಪಾರ್ಶ್ವ ಕುಸಿದುಬಿದ್ದ ಬಳಿಕ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ತೆರವುಗೊಳಿಸಲಾಗಿದೆ.

ಭೂಕಂಪದ ಬಳಿಕ ಹಲವೆಡೆ ಪ್ರಬಲ ಪಶ್ಚಾತ್ಕಂಪನ ಸಂಭವಿಸಿದೆ. ಇದೊಂದು ಪ್ರಬಲ ಭೂಕಂಪವಾಗಿದ್ದು ಅಬ್ರಾ ಮತ್ತು ಸಮೀಪದ ಪ್ರಾಂತಗಳಲ್ಲಿ ಅಧಿಕ ಹಾನಿ ಸಂಭವಿಸಿದೆ ಎಂದು ಭೂಕಂಪಶಾಸ್ತ್ರ ಸಂಸ್ಥೆಯ ನಿರ್ದೇಶಕ ರೆನಾಟೊ ಸೊಲಿಡಮ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News