ಉದ್ಯೋಗ ಹಗರಣ: ಬಂಗಾಳ ಸಚಿವನ ಆಪ್ತರ ಮನೆಯಲ್ಲಿ ಪತ್ತೆಯಾದ ಸಂಪತ್ತು ಎಷ್ಟು ಗೊತ್ತೇ?

Update: 2022-07-28 02:20 GMT

ಕೊಲ್ಕತ್ತಾ: ಬಂಗಾಳದಲ್ಲಿ ಉದ್ಯೋಗ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಪಾರ್ಥ ಚಟರ್ಜಿಯವರ ಆಪ್ತ ಸಹಚರ ಅರ್ಪಿತಾ ಮುಖರ್ಜಿಯ ಎರಡನೇ ಮನೆಯಿಂದ ಕಾನೂನು ಜಾರಿ ನಿರ್ದೇಶನಾಲಯ ಬುಧವಾರ 20 ಕೋಟಿ ರೂಪಾಯಿ ನಗದು (ಇನ್ನೂ ಎಣಿಕೆ ಪೂರ್ಣವಾಗಿಲ್ಲ) ಮತ್ತು 3 ಕೆ.ಜಿ. ಚಿನ್ನ ಮತ್ತು ಅಪಾರ ಬೆಳ್ಳಿ ವಶಪಡಿಸಿಕೊಂಡಿದೆ ಎಂದು timesofindia.com ವರದಿ ಮಾಡಿದೆ.

ಉತ್ತರ ಕೊಲ್ಕತ್ತಾದ ಬೆಲ್ಗಾರಿಯಾದ ನಿವಾಸದಿಂದ ಈ ಭಾರಿ ಮೊತ್ತ ವಶಪಡಿಸಿಕೊಳ್ಳಲಾಗಿದೆ. ನಾಲ್ಕು ದಿನ ಮೊದಲು ಟೋಲಿಗಂಜ್ ಫ್ಲ್ಯಾಟ್‌ ನಿಂದ 21.9 ಕೋಟಿ ರೂಪಾಯಿ ಮತ್ತು ಇತರ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು.

"ಆಲಿ ಬಾಬಾನ ಉಕ್ಕಿನ ಎದೆಯಿಂದ ಸಂಪತ್ತು ಸುರಿಯುವಂತೆ ಮುಖರ್ಜಿ ಫ್ಲ್ಯಾಟ್‌ ನಿಂದ ಅಮೂಲ್ಯ ವಸ್ತುಗಳು ಹೊರಬರುತ್ತಿವೆ" ಎಂದು ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ.

ಹಗರಣದಿಂದ ಬಂದಿದೆ ಎನ್ನಲಾದ ಭಾರಿ ಮೊತ್ತವನ್ನು ಎಣಿಕೆ ಮಾಡುವ ಸಲುವಾಗಿ ಭಾರತೀಯ ಸ್ಟೇಟ್ ಬ್ಯಾಂಕ್‍ನಿಂದ ಫ್ಲ್ಯಾಟ್‌ ಗೆ ನೋಟು ಎಣಿಸುವ ನಾಲ್ಕು ದೊಡ್ಡ ಯಂತ್ರಗಳನ್ನು ತರಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನಿರಂತರವಾಗಿ ಹಲವು ಗಂಟೆಗಳಿಂದ ಎಣಿಕೆ ಕಾರ್ಯ ನಡೆಯುತ್ತಲೇ ಇದೆ.

ಕ್ಲಬ್‍ಟೌನ್ ಅಪಾರ್ಟ್‍ಮೆಂಟ್‍ನ ಎಂಟನೇ ಮಹಡಿಯಲ್ಲಿರುವ ಕಪಾಟು ಮತ್ತು ವಾರ್ಡ್‍ರೋಬ್‍ಗಳಿಂದ 2000 ರೂಪಾಯಿ ಮತ್ತು 500 ರೂಪಾಯಿಯ ಕಂತೆಗಳು ಹೊರಬರುತ್ತಿವೆ. ಅಪಾರ್ಟ್‍ಮೆಂಟ್‍ನ ಕಾರ್ಯದರ್ಶಿ ಸಮ್ಮುಖದಲ್ಲಿ ನಕಲಿ ಕೀ ತಯಾರಕರ ನೆರವಿನಿಂದ ಅಧಿಕಾರಿಗಳು ಮನೆಯ ಬೀಗ ಮುರಿದು ಒಳ ಪ್ರವೇಶಿಸಿದ್ದರು. ಮುಖರ್ಜಿ ಬಂಧನಕ್ಕೆ ಮೂರು ದಿನ ಮುನ್ನ ಫ್ಲ್ಯಾಟ್‌ ಗೆ ಆಗಮಿಸಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

ಚಟರ್ಜಿ ಮತ್ತು ಮುಖರ್ಜಿ ವಿಚಾರಣೆಯಿಂದ ದೊರಕಿದ ಸುಳಿವಿನ ಆಧಾರದಲ್ಲಿ ಅಧಿಕಾರಿಗಳು ವಿವಿಧ ಕಡೆಗಳಲ್ಲಿ ನಾಲ್ಕು ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News