×
Ad

ರಾಷ್ಟ್ರಪತಿಗಳ ಬಳಿ ಕ್ಷಮೆಕೋರುತ್ತೇನೆ, ಕಪಟಿಗಳ ಬಳಿಯಲ್ಲ: ಅಧೀರ್ ರಂಜನ್ ಚೌಧುರಿ

Update: 2022-07-28 17:57 IST

ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಮಾತನಾಡುವಾಗ ತಾವು "ರಾಷ್ಟ್ರಪತ್ನಿ" ಎಂದು ಬಾಯ್ತಪ್ಪಿ ಹೇಳಿದ್ದಾಗಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್  ಚೌಧುರಿ ಹೇಳಿಕೊಂಡಿದ್ದು ತಾವು ರಾಷ್ಟ್ರಪತಿ ಅವರಲ್ಲಿಯೇ ಕ್ಷಮೆಕೋರುವುದಾಗಿ ಹಾಗೂ ಪಾಖಂಡಿಗ¼ (ಕಪಟಿಗಳ) ಬಳಿ ಕ್ಷಮೆಕೋರುವುದಿಲ್ಲ ಎಂದು ಅವರು ಹೇಳಿದ್ದಾರೆ. 

ತಮ್ಮ ರಾಷ್ಟ್ರಪತ್ನಿ ಹೇಳಿಕೆಗೆ  ಆಡಳಿತ ಪಕ್ಷದ ಆಕ್ರೋಶಕ್ಕೆ ಗುರಿಯಾಗಿರುವ ಚೌಧುರಿ, ಬಿಜೆಪಿಯು ಸಣ್ಣ ವಿಷಯವನ್ನು ದೊಡ್ಡದಾಗಿಸಿದೆ ಎಂದು ಹೇಳಿದರಲ್ಲದೆ ತಾವು ರಾಷ್ಟ್ರಪತಿಗಳಿಗೆ ಅಗೌರವ ತೋರಿಸುವ ಉದ್ದೇಶ ಹೊಂದಿರಲಿಲ್ಲ ಹಾಗೂ ಒಂದು ಬಾರಿ ತಪ್ಪಿ ಆ ಪದ ಬಳಸಿದ್ದಾಗಿ ಅವರು ಹೇಳಿದರು. ಸಂಸತ್ತಿನ ಎರಡೂ ಸದನಗಳಲ್ಲಿ ಇಂದು ಇದೇ ವಿಚಾರವಾಗಿ ಗದ್ದಲವುಂಟಾಗಿ ಆಡಳಿತ ಪಕ್ಷವು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದೆ.

"ರಾಷ್ಟ್ರಪತಿಗೆ ಅಗೌರವ ತೋರಿಸುವ ಉದ್ದೇಶ ನನಗಿರಲಿಲ್ಲ. ನಾನು ಹೇಳಿಬಿಟ್ಟೆ ಹಾಗೂ ತಪ್ಪು ಪದ ಬಳಸಿದ್ದೇನೆ ಎಂದು ತಿಳಿಯಿತು. ನಾನೊಬ್ಬ ಬಂಗಾಳಿ ಹಾಗೂ ಹಿಂದಿಯಲ್ಲಿ ನಾನು ಸುಲಲಿತವಾಗಿಲ್ಲ. ನಾನು ತಪ್ಪು ಮಾಡಿದ್ದೇನೆ ಒಪ್ಪುತ್ತೇನೆ" ಎಂದು ಅವರು ಹೇಳಿದರು.

ನಾಳೆ ರಾಷ್ಟ್ರಪತಿಯನ್ನು ಭೇಟಿಯಾಗಲು ಸಮಯ ಕೋರಿದ್ದಾಗಿ ಹೇಳಿದ ಅವರು ಅವರನ್ನು ಭೇಟಿಯಾಗಿ ಕ್ಷಮೆಯಾಚಿಸುವುದಾಗಿ ತಿಳಿಸಿದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಸಂಸತ್ತಿನ ಅವರ ಕಚೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಚೌಧುರಿ ಮೇಲಿನಂತೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News