ಭೋಪಾಲ್ ವಿದ್ಯಾರ್ಥಿ ಸಾವಿಗೂ ಪ್ರವಾದಿ ಅವಹೇಳನ ಸಂದೇಶಕ್ಕೂ ಸಂಬಂಧ ಇಲ್ಲ: ತನಿಖೆಯಿಂದ ದೃಢ

Update: 2022-07-30 03:26 GMT

ಭೋಪಾಲ್: ಭೋಪಾಲ್ ಎಂಜಿನಿಯರಿಂಗ್ ವಿದ್ಯಾರ್ಥಿ ನಿಶಾಂಕ್ ರಾಠೋಡ್ ಅವರ ನಿಗೂಢ ಸಾವಿಗೂ, ಸಾವಿಗೆ ಕೆಲವೇ ನಿಮಿಷ ಮೊದಲು ತಂದೆಗೆ ಕಳುಹಿಸಿದ "ಪ್ರವಾದಿಗೆ ಅವಮಾನ" ಸಂದೇಶಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ತನಿಖೆಯಿಂದ ದೃಢಪಟ್ಟಿದೆ.

ಹಲವು ಇನ್‍ಸ್ಟಂಟ್ ಸಾಲದ ಆ್ಯಪ್ ಮೂಲಕ ಪಡೆದ ಸಾಲದ ಹೊರೆಯಿಂದ ಬೇಸತ್ತು ಖಿನ್ನತೆಯ ಕಾರಣದಿಂದ ಚಲಿಸುವ ರೈಲಿನಿಂದ ಧುಮುಕಿ ಅತ ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತಪಟ್ಟಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ndtv.com ವರದಿ ಮಾಡಿದೆ.

ಪ್ರವಾದಿ ಮೊಹಮ್ಮದ್ ಅವರನ್ನು ಅವಹೇಳನ ಮಾಡಿದ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ ಕಾರಣಕ್ಕಾಗಿ ಮತ್ತೊಂದು ಹತ್ಯೆ ನಡೆದಿರಬಹುದು ಎಂಬ ಭೀತಿ ಈ ಮೂಲಕ ದೂರವಾಗಿದೆ. ಈ ಸ್ಪಷ್ಟ ಚಿತ್ರಣ ಮೂಡುವಲ್ಲಿ ಸೈಬರ್ ವಿಧಿವಿಜ್ಞಾನ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ.

ತಂದೆಗೆ ಪದೇ ಪದೇ ಮೂರು ಸಂದೇಶಗಳನ್ನು ಕಳುಹಿಸುವ ಅರ್ಧಗಂಟೆ ಮುನ್ನ ರಾಠೋಡ್ (21), ಸ್ಕೂಟರ್‍ನಲ್ಲಿದ್ದ ಎನ್ನುವುದು ಟ್ರಾಫಿಕ್ ಪೊಲೀಸರ ಸಿಸಿಟಿವಿ ದೃಶ್ಯಾವಳಿಯಿಂದ ಕಂಡುಬಂದಿದೆ. ಸಂಜೆ 5.44ಕ್ಕೆ ಆತ ಕೊನೆಯ ಸಂದೇಶವನ್ನು ಹಿಂದಿಯಲ್ಲಿ ತಂದೆಗೆ ಕಳುಹಿಸಿದ್ದ. ಇಂಥದ್ದೇ ಸಂದೇಶವನ್ನು ಇನ್‍ಸ್ಟಾಗ್ರಾಂನಲ್ಲಿ ಕೂಡಾ ಪೋಸ್ಟ್ ಮಾಡಿದ್ದ. 6.10ಕ್ಕೆ ಆತನ ಶವ ರೈಲು ಹಳಿಯ ಮೇಲೆ ಪತ್ತೆಯಾಗಿತ್ತು.

ಇದು ಅತ್ಮಹತ್ಯೆಯ ಪ್ರಕರಣ ಎಂದು ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದರೂ, ಈ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News