ಅಸ್ಸಾಂ: ಪೊಲೀಸರು ನಡೆಸಿದ ಗುಂಡಿನ ದಾಳಿಗಳ ಕುರಿತು ವರದಿ ಹಾಜರುಪಡಿಸಲು ಗುವಾಹಟಿ ಹೈಕೋರ್ಟ್ ನಿರ್ದೇಶ

Update: 2022-07-30 09:05 GMT

 ಗುವಹಾಟಿ: ಅಸ್ಸಾಂನಲ್ಲಿ ಮೇ 2021ರಿಂದೀಚೆಗೆ ವಿವಿಧ ಅಪರಾಧ ಪ್ರಕರಣಗಳ ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿದ ಪ್ರತಿ ಪ್ರಕರಣದ ಕುರಿತ ಪರಿಷ್ಕøತ ತನಿಖಾ ವರದಿಯನ್ನು ಆರು ವಾರಗಳೊಳಗಾಗಿ ಸಲ್ಲಿಸಬೇಕು ಎಂದು ಗುವಹಾಟಿ ಹೈಕೋರ್ಟ್ ಶುಕ್ರವಾರ ಅಸ್ಸಾಂ ಸರಕಾರಕ್ಕೆ ಸೂಚನೆ ನೀಡಿದೆ.

ದಿಲ್ಲಿ ಮೂಲದ ವಕೀಲ ಆರಿಫ್ ಜ್ವದ್ದರ್ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಆರ್ ಎಂ ಛಾಯಾ ಮತ್ತು ಜಸ್ಟಿಸ್ ಸೌಮಿತ್ರ ಸೈಕಿಯಾ ಅವರ ವಿಭಾಗೀಯ ಪೀಠ ಮೇಲಿನಂತೆ ಆದೇಶಿಸಿದೆ.

ರಾಜ್ಯದಲ್ಲಿ ಪೊಲೀಸರು  ಆರೋಪಿಗಳ ಮೇಲೆ ಗುಂಡು ಹಾರಿಸುತ್ತಿರುವ ಪ್ರಕರಣಗಳು ಏರಿಕೆಯಾಗುತ್ತಿವೆ ಇವುಗಳ ಸ್ವತಂತ್ರ ತನಿಖೇ ನಡೆಸಬೇಕೆಂದು ಜ್ವದ್ದರ್  ಅವರು ಕೋರಿದ್ದರು ಹಾಗೂ ಈ ಕುರಿತು ಯಾವುದೇ ತನಿಖೆಯನ್ನು ಸ್ವತಂತ್ರ ಏಜನ್ಸಿ ಮುಖಾಂತರ ನಡೆಸಲಾಗುತ್ತಿದೆಯೇ ಎಂಬ ಮಾಹಿತಿ ಕೋರಿದ್ದರು.

ಪೊಲೀಸರು ನಡೆಸಿದ ದಾಳಿಗಳಲ್ಲಿ ಮೃತಪಟ್ಟವರು ಅಥವಾ ಗಾಯಾಳುಗಳೂ ತೀವ್ರಗಾಮಿಗಳಾಗಿರಲಿಲ್ಲ ಎಂದೂ ಅವರು ಹೇಳಿದ್ದರು.

ಈ ಪ್ರಕರಣದಲ್ಲಿ ಅಸ್ಸಾಂ ಸರಕಾರ, ಡಿಜಿಪಿ, ಕಾನೂನು ಇಲಾಖೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಅಸ್ಸಾಂ ಮಾನವ ಹಕ್ಕುಗಳ ಆಯೋಗವನ್ನು ಪ್ರತಿವಾದಿಗಳೆಂದು ಹೆಸರಿಸಲಾಗಿದೆ.

ಅರ್ಜಿದಾರರ ಪರ ವಾದಿಸಿದ ಹಿರಿಯು ವಕೀಲ ಪ್ರಶಾಂತ್ ಭೂಷಣ್, ಇಂತಹ ಪ್ರಕರಣಗಳ ಯಾವುದೇ ತನಿಖೆಯನ್ನು ನಡೆಸಲಾಗಿಲ್ಲ ಹಾಗೂ ಸುಪ್ರೀಂ ಕೋರ್ಟ್ 2014ರಲ್ಲಿ ಪಿಯುಸಿಎಲ್ ಮತ್ತು ಮಹಾರಾಷ್ಟ್ರ ಸರಕಾರದ ಕುರಿತಾದ ಪ್ರಕರಣದಲ್ಲಿ ನೀಡಿರುವ ನಿರ್ದೇಶನಗಳನ್ನು ಪಾಲಿಸಲಾಗಿಲ್ಲ ಎಂದಿದ್ದರು.

ಇದನ್ನು ಆಲಿಸಿದ ನ್ಯಾಯಾಲಯ ಎಲ್ಲಾ ಪ್ರಕರಣಗಳ ತನಿಖಾ ವರದಿಯನ್ನು ಹಾಜರುಪಡಿಸುವಂತೆ ಸೂಚಿಸಿ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 29ಕ್ಕೆ ನಿಗದಿಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News