ವಿದ್ಯುತ್ ಜನರ ನಿಜವಾದ ಪವರ್: ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್
ಉಡುಪಿ, ಜು.30: ವಿದ್ಯುತ್‌ನಿಂದ ಮಾತ್ರ ಜನರಿಗೆ ನಿಜವಾದ ಪವರ್ ಬರಲು ಸಾಧ್ಯ. ಕುಡಿಯುವ ನೀರು, ಶಿಕ್ಷಣ, ಕೈಗಾರಿಕೆ ಸೇರಿದಂತೆ ಪ್ರತಿಯೊಂದು ಇಲಾಖೆಯೂ ವಿದ್ಯುತ್ ಇಲಾಖೆಯನ್ನೇ ಅವಲಂಬಿಸಿದೆ. ದೇಶದ ಸಮಗ್ರ ಅಭಿವೃದ್ಧಿಗೆ ವಿದ್ಯುತ್ ಆಧಾರವಾಗಿದೆಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಇಂಧನ ಇಲಾಖೆ ಹಾಗೂ ಮಂಗಳೂರು ವಿದ್ಯುತ್ ಸರಬರಾಜು ನಿಗಮ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಕುಂಜಿಬೆಟ್ಟುವಿನ ಕ.ವಿ.ಪ್ರ.ನಿ.ನಿ. ನೌಕರರ ಸಂಘ ಸಭಾಭವನದಲ್ಲಿ ಆಯೋಜಿಸ ಲಾದ ‘ಉಜ್ವಲ ಭಾರತ ಉಜ್ವಲ ಭವಿಷ್ಯ’ ವಿದ್ಯುತ್ ಮಹೋತ್ಸವದಲ್ಲಿ ಅವರು ಮಾತನಾಡುತಿದ್ದರು.
ಬೆಳಕು ಯೋಜನೆಯ ಮೂಲಕ ಪ್ರತಿ ಗ್ರಾಮ ಹಾಗೂ ಮನೆಗಳಿಗೆ ವಿದ್ಯುತ್ ನೀಡುವ ಗುರಿ ಹೊಂದಲಾಗಿದೆ. ಯಾವುದೇ ತೊಂದರೆಯಾದರು ನಿಗದಿತ ಸಮಯದೊಳಗೆ ಸೇವೆ ನೀಡುವ ಕಾರ್ಯವನ್ನು ಮೆಸ್ಕಾಂ ಮಾಡಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಮನುಷ್ಯನ ಜೀವನದ ಪ್ರಮುಖ ಭಾಗವಾಗಿರುವ ವಿದ್ಯುತ್ ಇಂದಿನ ಅನಿವಾರ್ಯತೆಯಾಗಿದೆ. ವಿದ್ಯುತ್ ಇಲ್ಲದಿದ್ದರೆ ಈ ದೇಶವೇ ನಡೆಯಲು ಸಾಧ್ಯವಿಲ್ಲ. ಇಂದು ನಮ್ಮ ದೇಶದ ಇಂಧನ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡುತ್ತಿದೆ. ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡಿ ರಫ್ತು ಮಾಡು ತ್ತಿದೆ ಎಂದು ಹೇಳಿದರು.
ಇಂದು ಪರಿಸರ ಸ್ನೇಹಿಯಾಗಿ ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅದಕ್ಕಾಗಿ ಸರಕಾರ ರಾಜ್ಯದಲ್ಲಿ 1000 ಚಾರ್ಜಿಂಗ್ ಸೆಂಟರ್‌ಗಳನ್ನು ಸ್ಥಾಪಿಸುತ್ತಿದೆ. ಮೆಸ್ಕಾಂ ಇಲಾಖೆಯ ಸೇವೆ ಅತ್ಯುತ್ತಮವಾಗಿದ್ದು, ಅದೇ ರೀತಿ ಗ್ರಾಹಕರು ಕೂಡ ಶೇ.98ರಷ್ಟು ಬಿಲ್ ಪಾವತಿ ಮಾಡುತ್ತಾರೆ. ಹೀಗಾಗಿ ಇಲ್ಲಿ ಇಲಾಖೆ ಹಾಗೂ ಗ್ರಾಹಕರ ಸಂಬಂಧ ಉತ್ತಮವಾಗಿದೆ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾಪು ರತ್ನಾಕರ ಹೆಗ್ಡೆ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಮಾತನಾಡಿದರು. ಉಡುಪಿ ವೃತ್ತದ ಅಧೀಕ್ಷಕ ಇಂಜಿನಿಯರ್ ನರಸಿಂಹ ಪಂಡಿತ್, ಮಂಗಳೂರು ವಲಯ ಮುಖ್ಯ ಇಂಜಿ ನಿಯರ್ ಪುಷ್ಪಾ, ಕೂಡಗಿ ಎನ್‌ಟಿಪಿಸಿ ಡಿಜಿಎಂ ಕೆ.ಬಿ.ರವೀಂದ್ರ, ಮಂಗಳೂರು ಮೆಸ್ಕಾಂ ಅಧೀಕ್ಷಕ ದಿನೇಶ್ ಉಪಾಧ್ಯ ಉಪಸ್ಥಿತರಿದ್ದರು.
ಉಡುಪಿ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಸನ್ನ ಕುಮಾರ್ ಸ್ವಾಗತಿಸಿದರು. ಜಿಲ್ಲಾ ನೋಡೆಲ್ ಅಧಿಕಾರಿ ಕೂಡಗಿ ಎನ್‌ಟಿಪಿಸಿ ಡಿಜಿಎಂ ಕೆ.ಬಿ.ರವೀಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.