×
Ad

ಭಾರತದ ಸಾವಿತ್ರಿ ಜಿಂದಾಲ್ ಈಗ ಏಶ್ಯಾದ ಅತ್ಯಂತ ಶ್ರೀಮಂತ ಮಹಿಳೆ

Update: 2022-07-30 19:58 IST
PHOTO:Twitter

ಹೊಸದಿಲ್ಲಿ,ಜು.30: ಚೀನಾದ ಆಸ್ತಿ ಬಿಕ್ಕಟ್ಟು ದೇಶದ ರಿಯಲ್ ಎಸ್ಟೇಟ್ ಉದ್ಯಮವನ್ನು ಸಂಕಷ್ಟಕ್ಕೆ ತಳ್ಳುವುದರೊಂದಿಗೆ ಕಂಟ್ರಿ ಗಾರ್ಡನ್ ಹೋಲಿಂಗ್ಸ್ ಕಂಪನಿಯ ಒಡತಿ ಯಾಂಗ್ ಹುಯಿಯಾನ್(41) ಅವರು ಈಗ ಏಶ್ಯಾದ ಅತ್ಯಂತ ಶ್ರೀಮಂತ ಮಹಿಳೆ ಎಂಬ ಖ್ಯಾತಿಯನ್ನು ಕಳೆದುಕೊಂಡಿದ್ದಾರೆ. ಶುಕ್ರವಾರ ಬಿಡುಗಡೆಗೊಂಡ ಬ್ಲೂಮ್ಬರ್ಗ್ ಬಿಲಿಯಾಧೀಶರ ಸೂಚಿಯಲ್ಲಿ ಭಾರತದ ಸಾವಿತ್ರಿ ಜಿಂದಾಲ್ ಅವರು ಯಾಂಗ್ ಅವರನ್ನು ಹಿಂದಿಕ್ಕೆ ಏಶ್ಯಾದ ಅತ್ಯಂತ ಶ್ರೀಮಂತ ಮಹಿಳೆ ಎಂಬ ಹೆಗ್ಗಳಿಕೆಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಸಾವಿತ್ರಿ ಜಿಂದಾಲ್ ಲೋಹಗಳು ಮತ್ತು ವಿದ್ಯುತ್ ಉತ್ಪಾದನೆ ಸೇರಿದಂತೆ ಹಲವಾರು ಕೈಗಾರಿಕೆಗಳನ್ನು ಹೊಂದಿರುವ ಜಿಂದಾಲ್ ಗ್ರೂಪ್ನ ಒಡತಿಯಾಗಿದ್ದಾರೆ. ಬ್ಲೂಮ್ಬರ್ಗ್ ಪಟ್ಟಿಯಲ್ಲಿ ಯಾಂಗ್ ತನ್ನದೇ ದೇಶದ ಉದ್ಯಮಿ,ಹೆಂಗ್ಲಿ ಪೆಟ್ರೋಕೆಮಿಕಲ್ ಕಂಪನಿಯ ಮುಖ್ಯಸ್ಥೆ ಫಾನ್ ಹಾಂಗ್ವೈ ಅವರಿಗಿಂತ ಕೆಳಗಿಳಿದಿದ್ದಾರೆ.

72ರ ಹರೆಯದ ಜಿಂದಾಲ್ 11.3 ಶತಕೋಟಿ ಡಾ.ವೌಲ್ಯದ ಸಂಪತ್ತಿನೊಂದಿಗೆ ಭಾರತದ ಅತ್ಯಂತ ಶ್ರೀಮಂತ ಮಹಿಳೆ ಮತ್ತು ದೇಶದ 10ನೇ ಅತ್ಯಂತ ಶ್ರೀಮಂತರಾಗಿದ್ದಾರೆ. ಜಿಂದಾಲ್ ಗ್ರೂಪ್ನ ಸ್ಥಾಪಕರಾಗಿದ್ದ ತನ್ನ ಪತಿ ಒ.ಪಿ.ಜಿಂದಾಲ್ ಅವರು 2005ರಲ್ಲಿ ಹೆಲಿಕಾಪ್ಟರ್ ಅಪಘತದಲ್ಲಿ ಮೃತಪಟ್ಟ ಬಳಿಕ ಸಾವಿತ್ರಿ ಜಿಂದಾಲ್ ಉದ್ಯಮ ಸಮೂಹದ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಜಿಂದಾಲ್ ಕಂಪನಿಯು ಈಗ ಭಾರತದ ಮೂರನೇ ಅತಿ ದೊಡ್ಡ ಉಕ್ಕು ತಯಾರಕನಾಗಿದ್ದು,ಸಿಮೆಂಟ್,ಶಕ್ತಿ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿಯೂ ತೊಡಗಿಕೊಂಡಿದೆ.

ಇತ್ತೀಚಿನ ವರ್ಷಗಳಲ್ಲಿ ಜಿಂದಾಲ್ರ ನಿವ್ವಳ ಸಂಪತ್ತು ವ್ಯಾಪಕ ಏರಿಳಿತಗಳನ್ನು ಕಂಡಿದೆ. 2020 ಎಪ್ರಿಲ್ನಲ್ಲಿ ಕೋವಿಡ್ ಸೋಂಕು ಆರಂಭಗೊಂಡಾಗ ಅವರ ಆಸ್ತಿಯ ವೌಲ್ಯ 3.2 ಶತಕೋಟಿ ಡಾ.ಗೆ ಕುಸಿದಿತ್ತು. ಉಕ್ರೇನ್ ಮೇಲೆ ರಶ್ಯದ ಆಕ್ರಮಣವು ಸರಕುಗಳ ಬೆಲೆಏರಿಕೆಗೆ ಕಾರಣವಾದ ಬಳಿಕ 2022 ಎಪ್ರಿಲ್ನಲ್ಲಿ ಅವರ ಸಂಪತ್ತು 15.6 ಶತಕೋಟಿ ಡಾ.ಗೆ ಏರಿಕೆಯಾಗಿತ್ತು.

2005ರಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿಯ ತನ್ನ ತಂದೆಯ ಪಾಲಿಗೆ ಉತ್ತರಾಧಿಕಾರಿಯಾಗುವ ಮೂಲಕ ವಿಶ್ವದಲ್ಲಿಯ ಅತ್ಯಂತ ಯುವ ಬಿಲಿಯಾಧೀಶರಲ್ಲಿ ಒಬ್ಬರಾಗಿದ್ದ ಯಾಂಗ್ ಅವರ ಪಾಲಿಗೆ ಈಗಿನ ಕುಸಿತವು ನಾಟಕೀಯವಾಗಿದೆ. ಕಳೆದ ಐದು ವರ್ಷಗಳಿಂದಲೂ ಏಶ್ಯಾದ ಅತ್ಯಂತ ಶ್ರೀಮಂತ ಮಹಿಳೆಯ ಸ್ಥಾನವನ್ನು ಅಲಂಕರಿಸಿದ್ದ ಅವರು ಚೀನಾದ ಆಸ್ತಿ ಕ್ಷೇತ್ರದಲ್ಲಿ ತ್ವರಿತ ಬೆಳವಣಿಗೆಯ ಸಂಕೇತವಾಗಿದ್ದರು. ಈ ವರ್ಷ ಅವರ ಕಂಪನಿಯ ಶೇರುಗಳ ವೌಲ್ಯ 2016ರಿಂದೀಚಿಗೆ ಕನಿಷ್ಠ ಮಟ್ಟಕ್ಕೆ ಕುಸಿಯುವುದರೊಂದಿಗೆ ಅವರ ಸಂಪತ್ತು ಅರ್ಧಕ್ಕಿಂತಲೂ ಹೆಚ್ಚು ಕರಗಿ 11 ಶತಕೋಟಿ ಡಾ.ನಷ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News