×
Ad

ನಾಲ್ವರು ಕಾಂಗ್ರೆಸ್ ಸಂಸದರ ಅಮಾನತು ರದ್ದು, ಲೋಕಸಭೆಯಲ್ಲಿ ಬೆಲೆ ಏರಿಕೆ ಕುರಿತ ಚರ್ಚೆ ಆರಂಭ

Update: 2022-08-01 14:54 IST
ಮಾಣಿಕಂ ಟ್ಯಾಗೋರ್, ಟಿಎನ್ ಪ್ರತಾಪನ್,  ರಮ್ಯಾ ಹರಿದಾಸ್ ಮತ್ತು ಜೋತಿಮಣಿ.  Photo:PTI

ಹೊಸದಿಲ್ಲಿ: ಭಾರೀ ಗದ್ದಲದ ನಂತರ ಲೋಕಸಭೆ ಕಲಾಪ ಎರಡು ಬಾರಿ ಮುಂದೂಡಿಕೆಯಾದ ಬಳಿಕ  ನಾಲ್ವರು ಕಾಂಗ್ರೆಸ್ ಸಂಸದರ ಅಮಾನತು ಹಿಂಪಡೆಯಲಾಗಿದೆ.  ನಂತರ ಲೋಕಸಭೆಯಲ್ಲಿ  ಇಂದು ಮಧ್ಯಾಹ್ನ ಬೆಲೆ ಏರಿಕೆಯ ಕುರಿತು  ಚರ್ಚೆಯನ್ನು ಆರಂಭಿಸಲಾಯಿತು.

ಸಂಸತ್ತು ಇಂದು ಸದನಗಳ ಒಳಗೆ ಹಾಗೂ  ಹೊರಗೆ ಹಲವಾರು ವಿಷಯಗಳ ಬಗ್ಗೆ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. ವಿರೋಧ ಪಕ್ಷದ ಸದಸ್ಯರ ಘೋಷಣೆ ಹಾಗೂ ಧರಣಿಯಿಂದಾಗಿ ಲೋಕಸಭೆ ಮತ್ತು ರಾಜ್ಯಸಭೆಯು ಇಂದು ಆರಂಭವಾದ ತಕ್ಷಣ ಮುಂದೂಡಲ್ಪಟ್ಟಿದೆ.

ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರಾದ ಮಾಣಿಕ್ಕಂ ಠಾಗೋರ್, ಜೋತಿಮಣಿ, ರಮ್ಯಾ ಹರಿದಾಸ್ ಹಾಗೂ  ಟಿ.ಎನ್. ಪ್ರತಾಪನ್ ಅವರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಬೆಲೆ ಏರಿಕೆ ವಿರುದ್ಧ ಸದನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ  ಸಂದರ್ಭದಲ್ಲಿ ಭಿತ್ತಿಪತ್ರಗಳನ್ನು ಹಿಡಿದ ಕಾರಣಕ್ಕೆ ಈ ನಾಲ್ವರನ್ನು ಅಧಿವೇಶನದಿಂದ  ಅಮಾನತುಗೊಳಿಸಲಾಗಿತ್ತು.

ಭೂ ಹಗರಣ ಪ್ರಕರಣದಲ್ಲಿ ರಾಜ್ಯಸಭಾ ಸದಸ್ಯ ಹಾಗೂ  ಪಕ್ಷದ ಹಿರಿಯ ನಾಯಕ ಸಂಜಯ್ ರಾವತ್ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಶಿವಸೇನೆ ಸಂಸದರು ಪ್ರತಿಭಟನೆ ನಡೆಸಿದ್ದರಿಂದ ರಾಜ್ಯಸಭೆಯಲ್ಲಿಯೂ ಗೊಂದಲ ಉಂಟಾಗಿತ್ತು. ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು "ರಾಜಕೀಯ ಅಜೆಂಡಾಗಳಿಗಾಗಿ ಕೇಂದ್ರ ಸರಕಾರವು ಪ್ರಧಾನ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ" ಕುರಿತು ಚರ್ಚೆಗೆ ಕೋರಿದರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನಾಶಪಡಿಸಿರುವುದನ್ನು ಖಂಡಿಸಿ ಎಡಪಕ್ಷಗಳ ಸದಸ್ಯರು ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಘೋಷಣಾ ಫಲಕಗಳನ್ನು ಹಿಡಿದು ಯೋಜನೆಯಡಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News