ಕೇರಳ ಮಂಕಿಪಾಕ್ಸ್ ಸಾವು ಪ್ರಕರಣ: ಸೋಂಕಿತನಿಗೆ ಯುಎಇಯಲ್ಲಿರುವಾಗಲೇ ದೃಢಪಟ್ಟಿದ್ದ ರೋಗ

Update: 2022-08-01 13:07 GMT

ಹೊಸದಿಲ್ಲಿ: ಆಫ್ರಿಕಾ ಹೊರತಾದ ದೇಶಗಳಲ್ಲಿ ಮಂಕಿಪಾಕ್ಸ್ ಸಾವು ಸಂಭವಿಸಿರುವ ಸ್ಪೇನ್ ಮತ್ತು ಬ್ರೆಜಿಲ್ ದೇಶಗಳ ಪಾಲಿಗೆ ಈಗ ಭಾರತ ಕೂಡ ಸೇರ್ಪಡೆಯಾಗಿದೆ. ಯುಎಇಯಿಂದ ಕೇರಳಕ್ಕೆ ವಾಪಸ್ ಆದ ನಂತರ ಮಂಕಿಪಾಕ್ಸ್ ಸೋಂಕು ಕಾಣಿಸಿಕೊಂಡ ಯುವಕನೊಬ್ಬ ಮೃತಪಟ್ಟಿದ್ದು ಇದು ಭಾರತದಲ್ಲಿ ಮಂಕಿಪಾಕ್ಸ್ ಸೋಂಕಿಗೆ ಮೊದಲ ಬಲಿಯಾಗಿದೆ.

ಆತನ ಸಾವು ಮಂಕಿಪಾಕ್ಸ್ ಸೋಂಕಿನಿಂದಲೇ ಸಂಭವಿಸಿದೆ ಎಂದು ಆತನ ಮಾದರಿಗಳನ್ನು ಪರೀಕ್ಷಿಸಿದ ನಂತರ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ, ಪುಣೆ ಇಂದು ದೃಢಪಡಿಸಿದೆ. ಕೇರಳದಲ್ಲಿರುವ ಸಂಸ್ಥೆಯ ಘಟಕ ಇದಕ್ಕೂ ಮೊದಲು ಈ ವ್ಯಕ್ತಿ ಮಂಕಿಪಾಕ್ಸ್‍ನಿಂದ ಮೃತಪಟ್ಟಿದ್ದ ಎಂದು ಹೇಳಿತ್ತು.

ಇಪ್ಪತ್ತೆರಡು ವರ್ಷದ ಈ ಯುವಕ ಯುಎಇಯಲ್ಲಿರುವಾಗಲೇ 10 ದಿನಗಳ ಹಿಂದೆ ಮಂಕಿಪಾಕ್ಸ್ ಸೋಂಕಿಗೆ ತುತ್ತಾಗಿ ಪಾಸಿಟಿವ್ ವರದಿ ಪಡೆದಿದ್ದರೂ ಭಾರತದಲ್ಲಿ ಆತನಿಗೆ ಚಿಕಿತ್ಸೆ ನೀಡಿದ್ದ ವೈದ್ಯರಿಗೆ ಈ ಕುರಿತು ಮಾಹಿತಿ ನೀಡಿರಲಿಲ್ಲ.

ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಈಗಾಗಲೇ ಈ ಸಾವಿನ ಕುರಿತು ತನಿಖೆ ನಡೆಸಲು ಉನ್ನತ ಮಟ್ಟದ ತಂಡ  ರಚನೆಗೆ ಸೂಚಿಸಿದ್ದಾರೆ.

ಕೇಂದ್ರ ಸರಕಾರ ಕೂಡ ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣಗಳ ಮೇಲೆ ನಿಗಾ ಇಡಲು ಕಾರ್ಯಪಡೆಯನ್ನು ರಚಿಸಿದೆ ಹಾಗೂ ಈ ತಂಡವು ಸೋಂಕು ಹರಡುವುದನ್ನು ತಡೆಗಟ್ಟಲು ಕ್ರಮಗಳನ್ನು ಸೂಚಿಸಲಿದೆ.

ಹೆಚ್ಚಾಗಿ ಈ ಸೋಂಕು ಪುರುಷರಲ್ಲಿ, ಅದರಲ್ಲೂ ಸಲಿಂಗಕಾಮದಲ್ಲಿ ತೊಡಗುವ ಪುರುಷರಲ್ಲಿ ಕಂಡು ಬಂದಿದೆ ಎಂದು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆಯಲ್ಲದೆ ಹೆಚ್ಚು ಲೈಂಗಿಕ ಸಂಗಾತಿಗಳನ್ನು ಹೊಂದದಂತೆಯೇ ಅಂತಹ ಪುರುಷರಿಗೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News