ಮಂಕಿಪಾಕ್ಸ್ ಭೀತಿ: ಪರಿಸ್ಥಿತಿಯ ಮೇಲೆ ನಿಗಾಯಿಡಲು ಕಾರ್ಯಪಡೆ ರಚನೆ

Update: 2022-08-01 15:10 GMT

ಹೊಸದಿಲ್ಲಿ,ಆ.1: ಮಂಕಿಪಾಕ್ಸ್ ರೋಗದ ಹರಡುವಿಕೆಯ ಮೇಲೆ ನಿಕಟ ನಿಗಾಯಿರಿಸಲು ಮತ್ತು ಸೋಂಕಿನ ವಿರುದ್ಧ ಹೋರಾಟಕ್ಕೆ ಕಾರ್ಯತಂತ್ರಗಳನ್ನು ನಿರ್ಧರಿಸಲು ಕಾರ್ಯಪಡೆಯೊಂದನ್ನು ಕೇಂದ್ರವು ರಚಿಸಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.

ಕಾರ್ಯಪಡೆಯು ದೇಶದಲ್ಲಿ ರೋಗನಿರ್ಣಯ ಸೌಲಭ್ಯಗಳ ವಿಸ್ತರಣೆಯ ಕುರಿತು ಸರಕಾರಕ್ಕೆ ಮಾರ್ಗದರ್ಶನವನ್ನೂ ನೀಡಲಿದೆ ಮತ್ತು ಲಸಿಕೆ ನೀಡಿಕೆ ಸೇರಿದಂತೆ ಸೋಂಕನ್ನು ತಡೆಗಟ್ಟಲು ಎಲ್ಲ ಮಾರ್ಗಗಳನ್ನು ಪರಿಶೀಲಿಸಲಿದೆ.

ಇತ್ತೀಚಿಗಷ್ಟೇ ಯುಎಇಯಿಂದ ಕೇರಳಕ್ಕೆ ಮರಳಿದ್ದ 22ರ ಹರೆಯದ ಯುವಕನೋರ್ವ ಕಳೆದ ವಾರ ಮೃತಪಟ್ಟಿದ್ದು,ಆತನ ಸಾವಿಗೆ ಮಂಕಿಪಾಕ್ಸ್ ಕಾರಣವಾಗಿತ್ತು ಎನ್ನುವುದು ಸೋಮವಾರ ದೃಢಪಟ್ಟಿದೆ. ಯುಎಇಯಲ್ಲಿ ಆತ ತಪಾಸಣೆಗೊಳಪಟ್ಟಿದ್ದು,ಅಲ್ಲಿಯೂ ಆತನ ಸ್ಯಾಂಪಲ್ಗಳ ಪರೀಕ್ಷಾ ವರದಿ ಮಂಕಿಪಾಕ್ಸ್ಗೆ ಪಾಸಿಟಿವ್ ಆಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿದವು.

ಭಾರತದಲ್ಲಿ ಈವರೆಗೆ ಮಂಕಿಪಾಕ್ಸ್ ಐದು ಪ್ರಕರಣಗಳು ವರದಿಯಾಗಿವೆ.

ದೇಶದಲ್ಲಿಯ ಸಾರ್ವಜನಿಕ ಆರೋಗ್ಯ ಸನ್ನದ್ಧತೆಯನ್ನು ಪುನರ್ಪರಿಶೀಲಿಸಲು ಜು.26ರಂದು ನಡೆದಿದ್ದ ಉನ್ನತ ಮಟ್ಟದ ಸಭೆಯಲ್ಲಿ ಕಾರ್ಯಪಡೆ ರಚನೆಯ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ನೀತಿ ಆಯೋಗದ ಸದಸ್ಯ (ಆರೋಗ್ಯ) ವಿ.ಕೆ.ಪೌಲ್ ಅವರು ಕಾರ್ಯಪಡೆಯ ಮುಖ್ಯಸ್ಥರಾಗಿರುತ್ತಾರೆ.

ಸಕಾಲಿಕ ವರದಿ,ಪ್ರಕರಣಗಳ ಪತ್ತೆ ಮತ್ತು ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲು ಉದ್ದೇಶಿತ ಸಂವಹನ ಕಾರ್ಯತಂತ್ರವನ್ನಿಟ್ಟುಕೊಂಡು ಕಾರ್ಯ ನಿರ್ವಹಿಸುವಂತೆ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಮತ್ತು ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯಗಳಿಗೆ ಸೂಚಿಸಲಾಗಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಪ್ರಯೋಗಶಾಲೆಗಳ ಜಾಲವನ್ನು ಸಕ್ರಿಯಗೊಳಿಸುವಂತೆ ಮತ್ತು ಮಂಕಿಪಾಕ್ಸ್ ರೋಗನಿರ್ಣಯಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ನಿರ್ದೇಶನ ನೀಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚಿಗೆ ಮಂಕಿಪಾಕ್ಸ್ ರೋಗವನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯೆಂದು ಘೋಷಿಸಿದೆ.

ಈವರೆಗೆ 75 ದೇಶಗಳಿಂದ 16,000ಕ್ಕೂ ಅಧಿಕ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ.

ದೇಶದ ಪ್ರವೇಶ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ ವ್ಯವಸ್ಥೆಯನ್ನು ಹೆಚ್ಚಿಸುವುದು ಮತ್ತು ಮಂಕಿಪಾಕ್ಸ್ ರೋಗಕ್ಕಾಗಿ ಪರೀಕ್ಷೆಗಳನ್ನು ನಡೆಸಲು ಐಸಿಎಂಆರ್ ಅಡಿಯ 15 ಪ್ರಯೋಗಶಾಲೆಗಳನ್ನು ಕ್ರಿಯಾಶೀಲಗೊಳಿಸುವುದು ಸೇರಿದಂತೆ ಹಲವಾರು ಉಪಕ್ರಮಗಳನ್ನು ಕೇಂದ್ರ ಆರೋಗ್ಯ ಸಚಿವಾಲಯವು ಕೈಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News