ಅಮೆರಿಕ ಸಂಸತ್ ಸ್ಪೀಕರ್ ಪೆಲೋಸಿ ಏಶ್ಯಾ ಪ್ರವಾಸ ಆರಂಭ; ಚೀನಾ ತೀಕ್ಷ್ಣ ಪ್ರತಿಕ್ರಿಯೆ

Update: 2022-08-01 16:17 GMT

ಸಿಂಗಾಪುರ, ಆ.1: ಅಮೆರಿಕದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್(ಸಂಸತ್)ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ 4 ದೇಶಗಳ ಏಶ್ಯಾ ಪ್ರವಾಸಕ್ಕೆ ಸೋಮವಾರ ಚಾಲನೆ ದೊರಕಿದ್ದು ಅವರು ಸಿಂಗಾಪುರ ತಲುಪಿದ್ದಾರೆ. ಈ ಮಧ್ಯೆ, ಪ್ರವಾಸದ ಸಂದರ್ಭ ಅವರಿ ತೈವಾನ್ಗೂ ಭೇಟಿ ನೀಡುವ ಸಾಧ್ಯತೆಯಿದೆ ಎಂಬ ವರದಿಯ ಬಗ್ಗೆ ಚೀನಾ ತೀಕ್ಷ್ಣ ಎಚ್ಚರಿಕೆ ರವಾನಿಸಿದೆ.

 ರವಿವಾರ ಪೆಲೋಸಿಯ ಕಚೇರಿ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ, ಪೆಲೋಸಿ ನೇತೃತ್ವದ ಸಂಸದೀಯ ನಿಯೋಗ ಏಶ್ಯಾ ವಲಯದ ಪ್ರವಾಸದ ಸಂದರ್ಭ ಸಿಂಗಾಪುರ, ಮಲೇಶ್ಯಾ, ದಕ್ಷಿಣ ಕೊರಿಯಾ ಮತ್ತು ಜಪಾನ್ಗೆ ಭೇಟಿ ನೀಡಲಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ ತೈವಾನ್ ಬಗ್ಗೆ ಪ್ರಸ್ತಾಪಿಸಲಾಗಿಲ್ಲ. ಅಮೆರಿಕದ ಅಧಿಕಾರಿಗಳು ತೈವಾನ್ಗೆ ಭೇಟಿ ನೀಡುವುದು ಅಲ್ಲಿನ ಸ್ವಾತಂತ್ರ್ಯ ಪರ ಗುಂಪಿನವರಿಗೆ ಪ್ರೋತ್ಸಾಹದ ಸಂಕೇತವಾಗಿದೆ ಎಂದು ಚೀನಾ ಹೇಳುತ್ತಿದೆ.

ತೈವಾನ್ ಜತೆ ಅಮೆರಿಕ ರಾಜತಾಂತ್ರಿಕ ಸಂಬಂಧ ಹೊಂದಿಲ್ಲದಿದ್ದರೂ , ಆ ದೇಶಕ್ಕೆ ಸ್ವರಕ್ಷಣೆಯ ಸಾಧನಗಳನ್ನು ಒದಗಿಸಲು ಬದ್ಧವಾಗಿದೆ. ಅಮೆರಿಕ ಸರಕಾರದ 3ನೇ ಉನ್ನತ ಅಧಿಕಾರಿಯಾಗಿರುವ ಮತ್ತು ದೀರ್ಘಕಾಲದಿಂದಲೂ ಚೀನಾವನ್ನು ಟೀಕಿಸುತ್ತಾ ಬಂದಿರುವ ಪೆಲೋಸಿ ತೈವಾನ್ಗೆ ನೀಡುವ ಭೇಟಿ ಈಗಾಗಲೇ ಹಳಸಿರುವ ಚೀನಾ-ಅಮೆರಿಕ ರಾಜತಾಂತ್ರಿಕ ಸಂಬಂಧವನ್ನು ಮತ್ತಷ್ಟು ಹದಗೆಡಿಸಲಿದೆ ಎಂದು ವಿಶ್ಲೇಷಿಸಲಾಗಿದೆ.

1997ರಲ್ಲಿ ಅಮೆರಿಕ ಸಂಸತ್ನ ಸ್ಪೀಕರ್ ಆಗಿದ್ದ ನ್ಯೂಟ್ ಗಿಂಗ್ರಿಚ್ ಬಳಿಕ ತೈವಾನ್ಗೆ ಅಮೆರಿಕದ ಸ್ಪೀಕರ್ ಭೇಟಿ ನೀಡಿಲ್ಲ. ಈ ಮಧ್ಯೆ, ಗುರುವಾರ ಬೈಡನ್ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಅಮೆರಿಕವು ಒಂದು ಚೀನಾ ತತ್ವಕ್ಕೆ ಬದ್ಧವಾಗಿರಬೇಕು ಮತ್ತು ಬೆಂಕಿಯೊಂದಿಗೆ ಸರಸವಾಡುವವರು ಸುಟ್ಟುಹೋಗಲಿದ್ದಾರೆ ಎಂದು ಎಚ್ಚರಿಸಿದ್ದರು. ಇದಕ್ಕೆ ಉತ್ತರಿಸಿದ್ದ ಬೈಡನ್ ‘ ತೈವಾನ್ ಕುರಿತ ಅಮೆರಿಕದ ನೀತಿ ಬದಲಾಗಿಲ್ಲ, ಮತ್ತು ತೈವಾನ್ ಜಲಸಂಧಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಹಾಳು ಮಾಡುವ ಅಥವಾ ಆ ಪ್ರದೇಶದ ಯಥಾಸ್ಥಿತಿಯನ್ನು ಬದಲಾಯಿಸುವ ಏಕಪಕ್ಷೀಯ ಪ್ರಯತ್ನವನ್ನು ಅಮೆರಿಕ ಬಲವಾಗಿ ವಿರೋಧಿಸುತ್ತದೆ’ ಎಂದು ದೃಢಪಡಿಸಿರುವುದಾಗಿ ಮೂಲಗಳು ಹೇಳಿವೆ.

 ಪೆಲೋಸಿ ತೈವಾನ್ ಭೇಟಿ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರಿಸದ ತೈವಾನ್ನ ಪ್ರೀಮಿಯರ್ ಸು ತ್ಸೆಂಗ್-ಚಾಂಗ್, ತನ್ನ ದೇಶಕ್ಕೆ ಆಗಮಿಸುವ ವಿದೇಶದ ಗಣ್ಯ ಅತಿಥಿಗಳಿಗೆ ಯಾವತ್ತೂ ಹಾರ್ದಿಕ ಸ್ವಾಗತವಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪೆಲೋಸಿ ತೈವಾನ್ ಭೇಟಿ ವದಂತಿ ಬಗ್ಗೆ ಚೀನಾ ತೀಕ್ಷ್ಣ ಪ್ರತಿಕ್ರಿಯೆ

ಅಮೆರಿಕದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್(ಸಂಸತ್)ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ಗೆ ಭೇಟಿ ನೀಡಿದರೆ ತನ್ನ ಸೇನೆ ಕೈಕಟ್ಟಿ ಕುಳಿತುಕೊಳ್ಳದು ಎಂದು ಚೀನಾ ಸೋಮವಾರ ತೀಕ್ಷ್ಣ ಎಚ್ಚರಿಕೆ ನೀಡಿದೆ. ಸ್ವ ಆಡಳಿತ ವ್ಯವಸ್ಥೆಯ ಪ್ರಜಾಪ್ರಭುತ್ವ ದೇಶ ತೈವಾನ್ ತನ್ನ ಭೂವ್ಯಾಪ್ತಿಗೆ ಸೇರುತ್ತದೆ ಎಂದು ಚೀನಾ ಪ್ರತಿಪಾದಿಸುತ್ತಿದೆ.

4 ದೇಶಗಳ ಪ್ರವಾಸದ ಮೊದಲ ಚರಣದಲ್ಲಿ ಸೋಮವಾರ ಪೆಲೋಸಿ ಸಿಂಗಾಪುರ ತಲುಪಿದ್ದು ಮುಂದಿನ ಹಂತದಲ್ಲಿ ಮಲೇಶ್ಯಾ, ದಕ್ಷಿಣ ಕೊರಿಯಾ ಮತ್ತು ಜಪಾನ್ಗೆ ಭೇಟಿ ನೀಡಲಿದ್ದಾರೆ. ಈ ಪ್ರವಾಸದ ಸಂದರ್ಭದಲ್ಲಿ ಪೆಲೋಸಿ ತೈವಾನ್ಗೂ ಭೇಟಿ ನೀಡುವ ನಿರೀಕ್ಷೆಯಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಚೀನಾದ ವಿದೇಶಾಂಗ ಸಚಿವಾಲಯ ಈ ಉಗ್ರ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಅಮೆರಿಕದ ರಾಜತಾಂತ್ರಿಕರು ತೈವಾನ್ಗೆ ಭೇಟಿ ನೀಡಿದರೆ ನಮ್ಮ ಸೇನೆ ಕೈಕಟ್ಟಿ ಕುಳಿತುಕೊಳ್ಳದು ಎಂದು ಅಮೆರಿಕಕ್ಕೆ ಎಚ್ಚರಿಕೆ ನೀಡಲು ಬಯಸುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ‘ತನ್ನದೇ ಆದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಚೀನಾ ಖಂಡಿತವಾಗಿಯೂ ದೃಢವಾದ ಮತ್ತು ಬಲವಾದ ಪ್ರತಿಕ್ರಮಗಳನ್ನು ಕೈಗೊಳ್ಳುತ್ತದೆ.

ಒಂದು-ಚೀನಾ ತತ್ವಕ್ಕೆ ಮತ್ತು ಮೂರು ಸಿನೋ-ಅಮೆರಿಕ ಜಂಟಿ ಸಂವಹನಗಳಿಗೆ ಅಮೆರಿಕ ಬದ್ಧವಾಗಿರಬೇಕು, ಅಧ್ಯಕ್ಷ ಬೈಡನ್ ಅವರ ತೈವಾನ್ ಸ್ವಾತಂತ್ರಕ್ಕೆ ನೆರವಾಗುವ ಆಶ್ವಾಸನೆಯನ್ನು ಈಡೇರಿಸುವುದಕ್ಕೆ ಅಲ್ಲ’ ಎಂದು ಝಾವೊ ಎಚ್ಚರಿಸಿದ್ದಾರೆ. ಅಮೆರಿಕ ಸರಕಾರದ ಮೂರನೇ ಪ್ರಮುಖ ಅಧಿಕಾರಿಯಾಗಿರುವ ಪೆಲೋಸಿ ತೈವಾನ್ಗೆ ಭೇಟಿ ನೀಡುವುದು ಅತಿಯಾದ ರಾಜಕೀಯ ಪರಿಣಾಮಕ್ಕೆ ಕಾರಣವಾಗಲಿದೆ ಎಂದು ಚೀನಾದ ವಿದೇಶಾಂಗ ಇಲಾಖೆಯನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News