ದಿಲ್ಲಿ ಅಬಕಾರಿ ನೀತಿ ವಿವಾದ: ಇಲಾಖೆಯಿಂದ ವಿಸ್ತರಣಾ ಆದೇಶವಿಲ್ಲದೆ ಹೋಟೆಲ್, ಬಾರ್, ಮದ್ಯದಂಗಡಿಗಳು ಬಂದ್
Update: 2022-08-01 22:09 IST
ಹೊಸದಿಲ್ಲಿ,ಆ.1: ಆಪ್ ಸರಕಾರವು ಪ್ರಸ್ತುತ ಅಬಕಾರಿ ನೀತಿಯ ಅವಧಿಯನ್ನು ಇನ್ನೂ ಒಂದು ತಿಂಗಳು ವಿಸ್ತರಿಸಿದ್ದರೂ ಈ ಬಗ್ಗೆ ಲೆ.ಗ.ವಿ.ಕೆ.ಸಕ್ಸೇನಾರ ಅನುಮತಿಗಾಗಿ ಕಾಯುತ್ತಿರುವ ಅಬಕಾರಿ ಇಲಾಖೆಯು ಯಾವುದೇ ಆದೇಶವನ್ನು ಹೊರಡಿಸದ ಹಿನ್ನೆಲೆಯಲ್ಲಿ ದಿಲ್ಲಿಯ ಕ್ಲಬ್ ಗಳು,ಹೋಟೆಲ್ ಗಳು,ಬಾರ್ ಗಳು ಮತ್ತು ಚಿಲ್ಲರೆ ಮಾರಾಟದ ಅಂಗಡಿಗಳು ಸೋಮವಾರ ತಮ್ಮ ಗ್ರಾಹಕರಿಗೆ ಮದ್ಯ ಪೂರೈಸಲಿಲ್ಲ. ತಮ್ಮ ಮದ್ಯ ಮಾರಾಟಪರವಾನಿಗೆಗಳ ಭವಿಷ್ಯದ ಚಿಂತೆ ಅವುಗಳನ್ನು ಕಾಡುತ್ತಿದೆ.
ಚಿಲ್ಲರೆ ಪರವಾನಿಗೆಗಳ ಅವಧಿ ಜು.31ಕ್ಕೆ ಅಂತ್ಯಗೊಂಡಿದ್ದು ಅದನ್ನು ಒಂದು ತಿಂಗಳು ವಿಸ್ತರಿಸಲು ದಿಲ್ಲಿ ಸರಕಾರವು ರವಿವಾರ ನಿರ್ಧರಿಸಿತ್ತು. ಪರವಾನಿಗೆಗಳ ಅವಧಿ ಮುಗಿದಿರುವುದರಿಂದ ಮತ್ತು ಅವುಗಳು ನವೀಕರಣಗೊಂಡಿಲ್ಲವಾದ್ದರಿಂದ ದಿಲ್ಲಿಯಲ್ಲಿ ಈಗ ಮದ್ಯ ಮಾರಾಟವು ಕಾನೂನುಬಾಹಿರವಾಗಿದೆ.