ಜಾರ್ಖಂಡ್ ಶಾಸಕರಿಗೆ 49 ಲಕ್ಷ ನೀಡಿದ್ದ ಕೊಲ್ಕತ್ತಾ ವ್ಯಾಪಾರಿ: ಬಂಗಾಳ ಸಿಐಡಿ

Update: 2022-08-02 02:29 GMT

ಕೊಲ್ಕತ್ತಾ/ ರಾಂಚಿ: ಅಪಾರ ಪ್ರಮಾಣದ ನಗದು ಸಾಗಿಸುತ್ತಿದ್ದ ಜಾರ್ಖಂಡ್‍ನ ಮೂವರು ಕಾಂಗ್ರೆಸ್ ಶಾಸಕರ ಬಂಧನ ಪ್ರಕರಣ ಇದೀಗ ಹೊಸ ತಿರುವು ಪಡೆದಿದ್ದು, ಕೊಲ್ಕತ್ತಾ ಮೂಲದ ವ್ಯಾಪಾರಿಯೊಬ್ಬರು, ತಮ್ಮ ಸಹಚರನ ಮೂಲಕ 49 ಲಕ್ಷ ರೂಪಾಯಿಯನ್ನು ಹಸ್ತಾಂತರಿಸಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಬಂಗಾಳ ಸಿಐಡಿ ಹೇಳಿದೆ.

ಜಾರ್ಖಂಡ್‍ನಲ್ಲಿ ಹೇಮಂತ್ ಸೊರೇನ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಭದ್ರಗೊಳಿಸುವ ಸಂಚಿಗಾಗಿ ಈ ಹಣ ನೀಡಲಾಗಿತ್ತು ಎಂಬ ಶಂಕೆ ಇದೀಗ ಬಲವಾಗಿದೆ. ಕೊಲ್ಕತ್ತಾ ಪೊಲೀಸ್ ಕೇಂದ್ರ ಕಚೇರಿಯ ಎದುರು ಒಂದು ಸ್ಥಳದಲ್ಲಿ ಶಾಸಕರ ಪರವಾಗಿ ವ್ಯಕ್ತಿಯೊಬ್ಬ 49 ಲಕ್ಷ ರೂಪಾಯಿ ಪಡೆಯುತ್ತಿದ್ದಾಗ ಪೊಲೀಸರು ಭೇಧಿಸಿದರು ಎಂದು ಸಿಐಡಿ ಪ್ರಕಟಿಸಿದೆ. ಆ ಸಂದರ್ಭದಲ್ಲಿ ಶಾಸಕರು ಮೂರು ಕಿಲೋಮೀಟರ್ ದೂರದ ಸದಾರ್ ಬೀದಿಯ ಅತಿಥಿಗೃಹದಲ್ಲಿ ಇದ್ದರು ಎಂದು ಹೇಳಲಾಗಿದೆ.

ಆರೋಪಿ ವ್ಯಾಪಾರಿ ಇದೀಗ ತಲೆ ಮರೆಸಿಕೊಂಡಿದ್ದು, ಈತನಿಂದ ಹಣವನ್ನು ಪಡೆದುಕೊಳ್ಳುವಂತೆ ಗುವಾಹತಿಯ ಪ್ರಮುಖ ರಾಜಕಾರಣಿಯೊಬ್ಬರು ಶಾಸಕರಿಗೆ ಸೂಚಿಸಿದ್ದರು ಎಂದು ಸಿಐಡಿ ಮೂಲಗಳು ಹೇಳಿವೆ. ನಗದು ತಲುಪಿದ ಮೇಲೆ ಮೂವರು ಶಾಸಕರು ಕೊಲ್ಕತ್ತಾದಿಂದ ಹೊರಟಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವರನ್ನು ತಡೆಯಲಾಯಿತು ಎಂದು ಮೂಲಗಳು ವಿವರಿಸಿವೆ.

ಜಮತಾರಾ ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ, ಖಿಜ್ರಿ ಕಾಂಗ್ರೆಸ್ ಶಾಸಕ ರಾಜೇಶ್ ಕಛಪ್ ಹಾಗೂ ಕೊಲೇಬಿರಾ ಶಾಸಕ ನಮನ್ ಬಿಕ್ಸಲ್ ಕೊಂಗಾರಿಯವರನ್ನು ಹಲವು ಬಾರಿ ಪ್ರಶ್ನಿಸಿದಾಗ ಮತ್ತು ಸಂಬಂಧಪಟ್ಟ ಸಿಸಿಟಿವಿ ದೃಶ್ಯಾವಳಿಯ ತುಣುಕಿನಿಂದ ಆ ಸ್ಥಳದಲ್ಲಿ ಹಣ ಪಡೆದಿರುವುದು ದೃಢಪಟ್ಟಿದೆ ಎಂದು ಮೂಲಗಳು ಹೇಳಿವೆ. ಪರಿಸ್ಥಿತಿಯ ವಿವರ ಪಡೆಯಲು ಜಾರ್ಖಂಡ್ ಪೊಲೀಸ್ ತಂಡ ಕೊಲ್ಕತ್ತಾಗೆ ಭೇಟಿ ನೀಡಲಿದೆ.

ಕಛಪ್ ಹಾಗೂ ಅನ್ಸಾರಿ ಜುಲೈ 20ರಂದು ಗುವಾಹತಿಗೆ ಭೇಟಿ ನೀಡಿದ್ದರು. ಬಳಿಕ ಜುಲೈ 29ರಂದು ಮತ್ತೊಮ್ಮೆ ಹೋಗಿದ್ದರು. ಆದಿವಾಸಿ ಕಾರ್ಯಕ್ರಮವೊಂದಕ್ಕೆ ಸೀರೆ ಮತ್ತು ಜೆರ್ಸಿಗಳನ್ನು ಖರೀದಿಸುವ ಸಲುವಾಗಿ ಕೊಲ್ಕತ್ತಾಗೆ ಹೋಗುವುದಾಗಿ ಸಹೋದ್ಯೋಗಿಗಳಿಗೆ ಹೇಳಿ ತೆರಳಿದ್ದರು ಎನ್ನುವುದು ತನಿಖೆಯಿಂದ ತಿಳಿದುಬಂದಿದೆ ಎಂದು timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News