ಅಲ್ ಖೈದಾ ನಾಯಕ ಡ್ರೋನ್ ದಾಳಿಯಲ್ಲಿ ಹತ್ಯೆ: ಅಮೆರಿಕ

Update: 2022-08-02 15:57 GMT

ಕಾಬೂಲ್, ಆ.2: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಅಮೆರಿಕದ ಸಿಐಎ ರವಿವಾರ ನಡೆಸಿದ ಡ್ರೋನ್ ದಾಳಿಯಲ್ಲಿ ಅಲ್ ಖೈದಾ ಮುಖಂಡ ಐಮನ್ ಅಲ್-ಝವಾಹಿರಿ ಮೃತಪಟ್ಟಿರುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಇದು ಉಗ್ರ ಸಂಘಟನೆಗೆ 2011ರಲ್ಲಿ ಸ್ಥಾಪಕ ಒಸಾಮಾ ಬಿನ್ ಲಾದೆನ್ ಮೃತಪಟ್ಟ ಬಳಿಕದ ಅತೀ ದೊಡ್ಡ ಪ್ರಹಾರವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಶ್ವೇತಭವನದ ಎದುರುಗಡೆ ಟಿವಿ ವಾಹಿಯನ್ನುದ್ದೇಶಿಸಿ ಮಾತನಾಡಿದ ಬೈಡನ್, ಕಡೆಗೂ ನ್ಯಾಯ ದೊರಕಿದೆ ಮತ್ತು ಈ ಭಯೋತ್ಪಾದಕರ ಮುಖಂಡ ಇನ್ನಿಲ್ಲ ಎಂದು ಘೋಷಿಸಿದ್ದಾರೆ. ‌

ಕಾಬೂಲ್ನಲ್ಲಿ ಝವಾಹಿರಿ ಕುಟುಂಬ ಇರುವ ಬಗ್ಗೆ ಈ ವರ್ಷದ ಆರಂಭದಲ್ಲಿ ಗುಪ್ತಚರ ಮಾಹಿತಿ ಲಭಿಸಿತ್ತು. ಡ್ರೋನ್ ದಾಳಿಯಲ್ಲಿ ಝವಾಹಿರಿಯನ್ನು ಹೊರತುಪಡಿಸಿ ಕುಟುಂಬದ ಯಾವುದೇ ಸದಸ್ಯ ಅಥವಾ ನಾಗರಿಕರು ಮೃತಪಟ್ಟಿಲ್ಲ ಎಂದು ಬೈಡನ್ ಹೇಳಿದ್ದಾರೆ. ಸುಮಾರು 3000 ಮಂದಿಯ ಸಾವಿಗೆ ಕಾರಣವಾಗಿದ್ದ 2001 ಸೆಪ್ಟಂಬರ್ 11ರ ಅಮೆರಿಕ ವಿರುದ್ಧದ ದಾಳಿಯನ್ನು ಸಮನ್ವಯಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಈಜಿಪ್ಟ್ ಮೂಲದ ಸರ್ಜನ್ ಝವಾಹಿರಿ ತಲೆಗೆ 25 ಮಿಲಿಯನ್ ಡಾಲರ್ ಬಹುಮಾನ ಘೋಷಿಸಲಾಗಿತ್ತು.

ಎರಡು ಕ್ಷಿಪಣಿಗಳನ್ನು ಬಳಸಿ ಕಾಬೂಲ್ನಲ್ಲಿ ಸಿಐಎ ಡ್ರೋನ್ ದಾಳಿ ನಡೆಸಿದೆ. ಆ ಸಂದರ್ಭ ಝವಾಹಿರಿ ತನ್ನ ಮನೆಯ ಬಾಲ್ಕನಿಯಲ್ಲಿದ್ದ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಇದೊಂದು ಗಮನಾರ್ಹ ಹೊಡೆತವಾಗಿದೆ. ಕಾಬೂಲ್ನಲ್ಲಿ ಝವಾಹಿರಿಯ ಉಪಸ್ಥಿತಿ ಆತನಿಗೆ ತಾಲಿಬಾನ್ ಜತೆಗಿದ್ದ ಸಂಬಂಧವನ್ನು ಸೂಚಿಸುತ್ತದೆ. ಕಳೆದ ವರ್ಷ ಅಫ್ಘಾನಿಸ್ತಾನ ತಾಲಿಬಾನ್ನ ನಿಯಂತ್ರಣಕ್ಕೆ ಬಂದ ಬಳಿಕ ಆತ ಕಾಬೂಲ್ನಲ್ಲಿ ಆರಾಮವಾಗಿದ್ದ ಎಂದು ಸೌಫಾನ್ ಗ್ರೂಫ್ ಎಂಬ ಜಾಗತಿಕ ಭದ್ರತಾ ಸಂಸ್ಥೆಯ ಸಂಶೋಧನಾ ನಿರ್ದೇಶಕ ಕಾಲಿನ್ ಕ್ಲಾರ್ಕ್ ಹೇಳಿದ್ದಾರೆ.

ಕಾಬೂಲ್ನಲ್ಲಿ ನಡೆದ ದಾಳಿಯನ್ನು ತಾಲಿಬಾನ್ ದೃಢಪಡಿಸಿದೆ, ಆದರೆ ಝವಾಹಿರಿಯ ಬಗ್ಗೆ ಉಲ್ಲೇಖಿಸಿಲ್ಲ. ಈ ದಾಳಿ ಅಂತರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಾಲಿಬಾನ್ ಖಂಡಿಸಿದೆ. ಕಾಬೂಲ್ನ ಶೆರ್ಪುರ ಪ್ರದೇಶದಲ್ಲಿನ ವಸತಿ ಗೃಹದ ಮೇಲೆ ದಾಳಿ ನಡೆಸಲಾಗಿದೆ. ಇಂತಹ ಕೃತ್ಯಗಳು ಕಳೆದ 20 ವರ್ಷಗಳ ವಿಫಲ ಅನುಭವಗಳ ಪುನರಾವರ್ತನೆಯಾಗಿದೆ ಮತ್ತು ಅಮೆರಿಕ, ಅಫ್ಘಾನಿಸ್ತಾನ ಹಾಗೂ ಈ ವಲಯದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ತಾಲಿಬಾನ್ನ ಪ್ರಧಾನ ವಕ್ತಾರ ಝಬೀಹುಲ್ಲಾ ಮುಜಾಹಿದ್ ಹೇಳಿದ್ದಾರೆ.

ಅಲ್ ಖೈದಾ ಈ ವಿಷಯದಲ್ಲಿ ಇದುವರೆಗೆ ಯಾವುದೇ ಹೇಳಿಕೆ ಬಿಡುಗಡೆಗೊಳಿಸಿಲ್ಲ. ಕಾಬೂಲ್ನಲ್ಲಿ ಝವಾಹಿರಿ ಉಪಸ್ಥಿತಿಯು ದೋಹಾ ಒಪ್ಪಂದ ಮತ್ತು ಅಫ್ಘಾನ್ ಪ್ರದೇಶವನ್ನು ಇತರ ದೇಶಗಳಿಗೆ ಬೆದರಿಕೆಯೊಡ್ಡುವ ನೆಲೆಯಾಗಿ ಬಳಸಲು ಅವಕಾಶ ನೀಡುವುದಿಲ್ಲ ಎಂಬ ಪುನರಾವರ್ತಿತ ವಾಗ್ದಾನದ ಸಂಪೂರ್ಣ ಉಲ್ಲಂಘನೆಯಾಗಿದೆ. ಝವಾಹಿರಿಗೆ ಆಶ್ರಯ ನೀಡುವ ಮೂಲಕ ತಾಲಿಬಾನ್ ಅಫ್ಘಾನ್ನ ಜನತೆಗೆ ಹಾಗೂ ಅಂತರಾಷ್ಟ್ರೀಯ ಸಮುದಾಯದೊಂದಿಗೆ ಗುರುತಿಸಿಕೊಳ್ಳುವ ತಮ್ಮ ಹಂಬಲಕ್ಕೆ ದ್ರೋಹ ಬಗೆದಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿದ್ದಾರೆ.

ಅಫ್ಘಾನ್ನಿಂದ ಅಮೆರಿಕ ನೇತೃತ್ವದ ವಿದೇಶಿ ಪಡೆಗಳ ನಿರ್ಗಮನ ಮತ್ತು ಅಫ್ಘಾನ್ ನೆಲದಲ್ಲಿ ಅಲ್ಖೈದಾ , ಐಸಿಸ್ನಂತಹ ಉಗ್ರ ಸಂಘಟನೆಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡಬಾರದು ಎಂಬ ಷರತ್ತಿನೊಂದಿಗೆ ಅಮೆರಿಕ ಮತ್ತು ತಾಲಿಬಾನ್ 2020ರಲ್ಲಿ ದೋಹಾ ಒಪ್ಪಂದಕ್ಕೆ ಸಹಿ ಹಾಕಿದ್ದವು. ದಾಳಿ ನಡೆದ ಪ್ರದೇಶ ಕಾಬೂಲ್ನ ಜನವಸತಿ ಪ್ರದೇಶವಾಗಿದೆ. ಮುಖ್ಯ ರಸ್ತೆಯಲ್ಲಿ ಕಿರಾಣಿ ಅಂಗಡಿ ಮತ್ತು ಬ್ಯಾಂಕಿನ ಪಕ್ಕದಲ್ಲಿದೆ. ಈ ಹಿಂದಿನ ಸರಕಾರದ ಅವಧಿಯಲ್ಲಿ ಈ ಪ್ರದೇಶದಲ್ಲಿ ಸೇನೆಯ ಅಧಿಕಾರಿಗಳು, ಸಚಿವರು, ಗವರ್ನರ್ಗಳ ನಿವಾಸವಿತ್ತು. ಇದು ಅಡಗುದಾಣವಲ್ಲ. ಆದ್ದರಿಂದ ತಾಲಿಬಾನ್ ಕಣ್ಣುತಪ್ಪಿಸಿ ಝವಾಹಿರಿ ಆ ಪ್ರದೇಶದಲ್ಲಿ ವಾಸಿಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಅಲ್ಜಝೀರಾದ ಪತ್ರಕರ್ತರು ವರದಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News