ಪೆಗಾಸಸ್ ಪ್ರಕರಣ: ಸುಪ್ರೀಂ ಕೋರ್ಟ್ ನೇಮಿತ ಸಮಿತಿಯಿಂದ ಅಂತಿಮ ವರದಿ ಸಲ್ಲಿಕೆ

Update: 2022-08-02 07:58 GMT

ಹೊಸದಿಲ್ಲಿ: ಪತ್ರಕರ್ತರು, ರಾಜಕಾರಣಿಗಳು ಮತ್ತು ಹೋರಾಟಗಾರರ ಮೇಲೆ ಗೂಢಚರ್ಯೆ ನಡೆಸಲು ಪೆಗಾಸಸ್ ಸ್ಪೈವೇರ್ ಅನ್ನು ದುರ್ಬಳಕೆ ಮಾಡಲಾಗಿದೆ ಎಂಬ ಆರೋಪಗಳ ಕುರಿತ ತನಿಖೆಗೆ ಸುಪ್ರೀಂ ಕೋರ್ಟ್ ರಚಿಸಿದ್ದ ಸಮಿತಿಯು ತನ್ನ ವರದಿಯನ್ನು ಒಂದು ವಾರದ ಹಿಂದೆ ಸಲ್ಲಿಸಿದೆ. ಈ ಸಮಿತಿಯ ನೇತೃತ್ವವನ್ನು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಆರ್ ವಿ ರವೀಂದ್ರನ್ ವಹಿಸಿದ್ದರು.

ಕೇಂದ್ರ ಸರಕಾರದ ಟೀಕಾಕಾರರನ್ನು ಟಾರ್ಗೆಟ್ ಮಾಡಲು ಈ ಸ್ಪೈವೇರ್ ಬಳಸಲಾಗಿತ್ತು ಎಂದು ದಿ ವೈರ್ ಸೇರಿದಂತೆ ಹಲವು ಸುದ್ದಿ ಸಂಸ್ಥೆಗಳು ಪ್ರಕಟಿಸಿದ ಸುದ್ದಿ ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿತ್ತು.

ಸುಪ್ರೀಂ ಕೋರ್ಟ್ ನೇಮಿತ ಸಮಿತಿ ನೀಡಿದ ವರದಿಯಲ್ಲಿ ಏನಿದೆ ಎಂದು ತಿಳಿದು ಬಂದಿಲ್ಲ. ಹಲವಾರು ವಿಳಂಬಗಳ ನಂತರ ಅಂತಿಮ ವರದಿ ಸಲ್ಲಿಸಲಾಗಿದೆ.

ಈ ಪ್ರಕರಣದ ವಿಚಾರಣೆಯ ಮುಂದಿನ ದಿನಾಂಕವನ್ನು ಸುಪ್ರೀಂ ಕೋರ್ಟ್ ಇನ್ನಷ್ಟೇ ನಿಗದಿಪಡಿಸದಬೇಕಿದೆ. ಈ ಪ್ರಕರಣ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಪೀಠದಲ್ಲಿರುವ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಆಗಸ್ಟ್ 26ರಂದು ನಿವೃತ್ತರಾಗಲಿದ್ದಾರೆ.

ಈ ಪ್ರಕರಣದ ವಿಚಾರಣೆ ಸಂದರ್ಭ ಅಕ್ಟೋಬರ್ 2021 ರಲ್ಲಿ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ರಚಿಸುವ ವೇಳೆ ಪ್ರತಿಕ್ರಿಯಿಸಿದ್ದ ಮುಖ್ಯ ನ್ಯಾಯಮೂರ್ತಿ ರಮಣ, ಸರಕಾರ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವಂತಿಲ್ಲ, ಈ ಗೂಢಚರ್ಯೆ ಕುರಿತಂತೆ ತನ್ನ ಮೇಲಿರುವ ಆರೋಪಗಳನ್ನು ಸರಕಾರ ಅಸ್ಪಷ್ಟವಾಗಿ ನಿರಾಕರಿಸಿದೆ ಹಾಗೂ ರಾಷ್ಟ್ರೀಯ ಭದ್ರತೆ ವಿಚಾರ ಮುಂದಿಟ್ಟುಕೊಂಡು ವಿಸ್ತøತ ಅಫಿಡವಿಟ್ ಸಲ್ಲಿಸಲು ನಿರಾಕರಿಸಿದೆ ಎಂದು ಹೇಳಿದ್ದರು.

ಸುಪ್ರೀಂ ಕೋರ್ಟ್ ನೇಮಿತ ಸಮಿತಿಯಲ್ಲಿ ಜಸ್ಟಿಸ್ ರವೀಂದ್ರನ್ ಹೊರತಾಗಿ ಗಾಂಧಿನಗರದ ನ್ಯಾಷನಲ್ ಫೊರೆನ್ಸಿಕ್ ಸಾಯನ್ಸ್ ವಿವಿಯ ಡೀನ್ ನವೀನ್ ಕುಮಾರ್ ಚೌಧುರಿ, ಕೇರಳ ಅಮೃತ ವಿಶ್ವ ವಿದ್ಯಾಪೀಠಂ ಪ್ರೊಫೆಸರ್ ಪ್ರಭಾಕರನ್ ಪಿ ಮತ್ತು ಐಐಟಿ ಬಾಂಬೆ ಇಲ್ಲಿನ ಅಸೋಸಿಯೇಟ್ ಪ್ರೊಫೆಸರ್ ಅನಿಲ್ ಗುಮಾಸ್ತೆ ಇದ್ದಾರೆ.

ಪೆಗಾಸಸ್ ಮೂಲಕ ಗೂಢಚರ್ಯೆಗೆ ಒಳಗಾಗಿದ್ದಾರೆನ್ನಲಾದ ಹಲವರು ಸಮಿತಿ ಮುಂದೆ ಹಾಜರಾಗಿದ್ದರಲ್ಲದೆ ಅವರ ಸಾಧನಗಳನ್ನು ವಿಧಿವಿಜ್ಞಾನ ಪರಿಶೋಧನೆಗೆ ಒಳಪಡಿಸಲಾಗಿತ್ತು.

ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್, ದಿ ವೈರ್ ಸ್ಥಾಪಕ ಸಂಪಾದಕ ಸಿದ್ಧಾರ್ಥ ವರದರಾಜನ್, ಪತ್ರಕರ್ತ ಎಂ  ಕೆ ವೇಣು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟಿಎಂಸಿ ಯ ಅಭಿಷೇಕ್ ಬ್ಯಾನರ್ಜಿ, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮತ್ತು ಪ್ರಹ್ಲಾದ್ ಸಿಂಗ್ ಪಟೇಲ್ ಅವರ ಸಾಧನಗಳೂ ಗೂಢಚರ್ಯೆಗೆ ಒಳಗಾಗಿದ್ದವು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News